ಕೊಪ್ಪಳ: ಬ್ರಿಟಿಷರ ವಿರುದ್ಧ ವಿರುದ್ಧ ಖಡ್ಗ ಬೀಸಿದ ಪ್ರಥಮ ಮಹಿಳಾ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ ನಿಮಿತ್ತ ನಗರದ ಸಾಹಿತ್ಯ ಭವನದಲ್ಲಿ ಬುಧವಾರದಂದು ಆಯೋಜಿಸಲಾಗಿದ್ದ ``ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ'' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಪ್ರೇಮ, ದೇಶಾಭಿಮಾನ ಹಾಗೂ ಸ್ವಾತಂತ್ರ್ಯ ಪ್ರಿಯ ಧೃವತಾರೆ ವೀರರಾಣಿ ಕಿತ್ತೂರು ಚೆನ್ನಮ್ಮನವರು. ಅದೆಷ್ಟೋ ಹೋರಾಟಗಳನ್ನು ಮಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಶ್ರೇಷ್ಠರಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳು ಕೂಡ ಒಬ್ಬಳು. ಇಂತಹ ಅನೇಕ ಮಹಿನೀಯರನ್ನು ನಮ್ಮ ನಾಡು ಪಡೆದಿದೆ. ಈ ಎಲ್ಲಾ ಮಹಾನೀಯರ ಆದರ್ಶಗಳನ್ನು ತಿಳಿಸುವ ನಿಟ್ಟಿನಲ್ಲಿ ಸಕರ್ಾರವು ಜಯಂತ್ಯುತ್ಸವನ್ನು ಹಮ್ಮಿಕೊಳ್ಳುತ್ತಿದೆ. ಪ್ರಸ್ತುತ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆ ಈ ವರ್ಷದ ಜಯಂತಿಗಳನ್ನು ಸರಳವಾಗಿ ಆಚರಿಸಲಾಗುತ್ತಿದೆ. ಎಲ್ಲಾ ಮಹನೀಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾಗೋಣ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ವಿಶೇಷ ಉಪನ್ಯಾಸ ನೀಡಿದ ಕೊಪ್ಪಳದ ಸಾಹಿತಿ ಮಹಾಂತೇಶ್ ಮಲ್ಲನಗೌಡರ, ಈಗಿನ ಬೆಳಗಾವಿ ಜಿಲ್ಲೆಯ ಕಾಕತಿಯ ಜಹಗೀರ ಸಂಸ್ಥಾನದ ದೂಳಪ್ಪ ದೇಸಾಯಿಯವರಿಗೆ 1778ರಲ್ಲಿ ಕಿತ್ತೂರು ಚೆನ್ನಮ್ಮ ಜನಿಸಿದರು. ಚೆನ್ನಮ್ಮರ ಪೋಷಕರು ತಮಗೆ ಗಂಡು ಮಗು ಹುಟ್ಟಲಿಲ್ಲ ಎಂದು ಬೇಸರಗೊಳ್ಳದೆ ಚೆನ್ನಮ್ಮಳನ್ನೇ ಗಂಡು ಮಗುವಿನ ರೀತಿಯಲ್ಲಿ ಪಾಲನೆ ಮಾಡಿದರು. ಚೆನ್ನಮ್ಮ ಎಳೆಯ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತ ವಿದ್ಯಾಭ್ಯಾಸದ ಜೊತೆಗೆ ಕುದುರೆ ಸವಾರಿ, ಬಿಲ್ವಿದ್ಯೆಗಳನ್ನು ಕಲಿತರು. ಪೌರುಷದ ಗುಣಗಳನ್ನು ಬೆಳೆಸಿಕೊಂಡರು. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸಜ್ಜ ಎಂಬ ದೊರೆಯ ಕಿರಿಯ ಹೆಂಡತಿಯಾದರು ಚೆನ್ನಮ್ಮ. 1824 ಅಕ್ಟೋಬರ್. 23 ರಂದು ತನ್ನ ಪುಟ್ಟ ರಾಜ್ಯದ ದೇಶದ ರಕ್ಷಣೆಗಾಗಿ ಬ್ರಿಟೀಷರ ದೊಡ್ಡ ಸೈನ್ಯದ ವಿರುದ್ಧ ಹೋರಾಡಿ, ಥ್ಯಾಕರೆ ಎಂಬ ಬ್ರಿಟೀಷ ಅಧಿಕಾರಿಯನ್ನು ಕೊಂದು ಚೆನ್ನಮ್ಮ ಸೈನ್ಯವು ಬ್ರಿಟೀಷರ ವಿರುದ್ಧ ವಿಜಯ ಸಾಧಿಸಿತು. ಚೆನ್ನಮ್ಮ ಅವರು 1778 ರ ನವೆಂಬರ್. 14 ರಂದು ಜನಿಸಿದ್ದಾರೆ ಎಂದು ತಿಳಿದು ಬರುತ್ತದೆ. ಆದರೆ ಅ. 23 ವಿಜಯೋತ್ಸವ ದಿನವಾಗಿದೆ. 1857 ರಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟೀಷರ ವಿರುದ್ಧ ಹೋರಾಡಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶದ ಪ್ರಥಮ ಮಹಿಳೆ ಎಂದು ಝಾನ್ಸಿ ರಾಣಿ ಲಕ್ಷ್ಮೀಬಾಯಿಗೆ ಕರೆಯಲಾಗುತ್ತದೆ. ಆದರೆ ವೀರರಾಣಿ ಕಿತ್ತೂರು ಚೆನ್ನಮ್ಮ 1824 ರಲ್ಲೇ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದು, ಚೆನ್ನಮ್ಮರವರಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶದ ಪ್ರಥಮ ಮಹಿಳೆ ಎನ್ನಬೇಕು. ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಮಹಿಳಾ ಹೋರಾಟಗಾತರ್ಿಯಾಗಿದ್ದು, ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿಯಾಗಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮರ ಹೆಸರು ಅಜರಾಮರವಾಗಿ ಉಳಿದಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಉಪ ವಿಭಾಗಾಧಿಕಾರಿ ಸಿ.ಡಿ. ಗೀತಾ ಅವರು ಮಾತನಾಡಿ, ದೇಶಕ್ಕೆ ಅನೇಕ ಮಹಾನ ವ್ಯಕ್ತಿಗಳನ್ನು ನೀಡಿದ ಕರ್ನಾಟಕ ರಾಜ್ಯವು ಕೇವಲ ವೀರಪುತ್ರರಿಗೆ ಜನ್ಮ ನೀಡದೆ ವೀರ ಪುತ್ರಿಯರಿಗೂ ಜನ್ಮ ನೀಡಿದೆ ಎಂಬುವುದಕ್ಕೆ ಸಾಕ್ಷಿ ವೀರರಾಣಿ ಕಿತ್ತೂರು ಚೆನ್ನಮ್ಮ. ದತ್ತು ಪುತ್ರರಿಗೆ ಹಕ್ಕಿಲ್ಲ ಎಂಬ ಬ್ರಿಟಿಷರ ಶಾಸನದ ವಿರುದ್ಧ ಹೋರಾಡಿದ ಹೆಮ್ಮೆಯ ಮಹಿಳೆ. ಪ್ರತಿಯೊಂದು ಮನೆಯಲ್ಲಿಯೂ ಕಿತ್ತೂರು ರಾಣಿ ಚೆನ್ನಮ್ಮ ಹುಟ್ಟಬೇಕು. ಮಹಿಳೆಯರಿಗೆ ಇರುವ ಹಕ್ಕುಗಳನ್ನು ಪಡೆಯಲು ಸ್ವತಃ ಮುಂದೆ ಬರಬೇಕು. ಅಂದಾಗ ಮಾತ್ರ ಮಹಿಳಾ ಮೀಸಲಾತಿ ಸಂಪೂರ್ಣ ಬಳಕೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಜಿ.ಪಂ. ಸಹಾಯಕ ಕಾರ್ಯದರ್ಶಿ ಚಂದ್ರಶೇಖರ, ತಹಶೀಲ್ದಾರ ಜೆ.ಬಿ ಮಜ್ಗಿ, ನಗರಸಭೆ ಸದಸ್ಯ ಸರ್ವೇಶಗೌಡ, ಮುಖಂಡರಾದ ಕರಿಯಪ್ಪ ಮೇಟಿ, ಶಿವಕುಮಾರ ಕುಕನೂರ, ಹನುಮೇಶ ಕರಡಿ, ಗೀತಾ ಪಾಟೀಲ್, ಶೀಲಾ ಅರಗೇರಿ, ಪ್ರತಿಭಾ ಪಾಟೀಲ್, ಲತಾ ಚಿನ್ನೂರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.