ಜೆಕ್ ಗಣರಾಜ್ಯದಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿ

ಪ್ರಗ್ಯೂ, ಮಾರ್ಚ್ 23, ಜೆಕ್ ಗಣರಾಜ್ಯದಲ್ಲಿ ಕೊರೊನಾ ಸೋಂಕಿಗೆ ಮೊದಲ ಸಾವು ಸಂಭವಿಸಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದ 95 ವರ್ಷದ ವ್ಯಕ್ತಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅಲ್ಲಿ 1000 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದೂ ಸಚಿವಾಲಯ ತಿಳಿಸಿದೆ. ಮಾರ್ಚ್ 1 ರಂದು ಅಲ್ಲಿ ಮೂರು ಕೊರೊನಾ ಸೋಂಕು ಪ್ರಕರಣಗಳು ಮೊದಲ ಬಾರಿಗೆ ವರದಿಯಾಗಿತ್ತು.ಭಾನುವಾರ ರಾತ್ರಿಯ ವೇಳೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 1120 ಗೆ ಏರಿಕೆಯಾಗಿದೆ. ಬಹುತೇಕ ರೋಗಿಗಳು ಅವರವರ ಮನೆಗಳಲ್ಲಿಯೇ ಪ್ರತ್ಯೇಕವಾಗಿದ್ದು ಕೆಲವರಲ್ಲಿ ಸೋಂಕಿನ ಕೆಲವು ಲಕ್ಷಣಗಳು ಕಂಡುಬಂದಿದೆ. 70 ಜನರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಈ ಪೈಕಿ 11 ಜನರಿಗೆ ವೆಂಟಿಲೇಟರ್ ಹಾಗೂ 19 ಜನರನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಆರು ಜನರು ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.