ಫೆ.13ರಂದು ಕರ್ನಾಟಕ ಬಂದ್ ಗೆ ಬೆಂಬಲ ನೀಡದ ಚಿತ್ರ ರಂಗದ ಧೋರಣ ಖಂಡನೀಯ: ವಿನೂತ

ಬೆಂಗಳೂರು, ಫೆ.10 :  ಕನ್ನಡಿಗರಿಗೆ ಉದ್ಯೋಗ ದೊರಕಿಸುವ ಉದ್ದೇಶದಿಂದ ಡಾ.ಸರೋಜಿನಿ ಮಹಿಷಿ ವರಿದಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ  ಫೆ.13 ರಂದು ಕರ್ನಾಟಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯ ಸರ್ಕಾರ ಹಾಗೂ ಸ್ವಾಮ್ಯ ಸಂಘ ಸಂಸ್ಥೆಗಳ ವಾಹನ ಚಾಲಕರ ಒಕ್ಕೂಟ ಬೆಂಬಲ ಘೋಷಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಂ.ಎನ್.ವೇಣುಗೋಪಾಲ್, ಕರ್ನಾಟಕದ ಮಾತೃ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಮಕ್ಕಳು ಇಂದು ಸರಿಯಾದ ರೀತಿಯಲ್ಲಿ ಉದ್ಯೋಗ ಸಿಗದೆ ನಿರುದ್ಯೋಗಿಗಳಾಗಿದ್ದಾರೆ. ಅಂದಿನಿಂದ ಇಂದಿನವರೆಗಿನ ಎಲ್ಲಾ ಸರ್ಕಾರಗಳು ಕೇವಲ ಭರವಸೆ ನೀಡುತ್ತಿವೆಯೇ ಉದ್ಯೋಗ ಭರವಸೆ ಈಡೇರಿಸಿಲ್ಲ. ಒಂದು ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಇನ್ನೆರಡು ದಿನಗಳಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸದಿದ್ದರೆ ನ್ಯಾಯಾಲಯದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕ ಬಂದ್ ಗೆ ಅನೇಕ ಕನ್ನಡ ಪರ ಸಂಘಟನೆಗಳು, 40ಕ್ಕೂ ಹೆಚ್ಚು ಮಠಾಧೀಶರು, ಅನೇಕ ರಾಜಕಾರಣಿಗಳು,  ಬೆಂಬಲ ನೀಡಿದ್ದಾರೆ. ನಗರದಲ್ಲಿ  ಟೌನ್ ಹಾಲ್ ನಿಂದ ಫ್ರೀಡಂಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು.

ಕನ್ನಡಿಗರ ಉದ್ಯೋಗ ವೇದಿಕೆ ಅಧ್ಯಕ್ಷ ವಿನೂತ ಮಾತನಾಡಿ, ಕನ್ನಡ ಚಿತ್ರರಂಗ ಇಂದಿಗೂ ಉಳಿದಿರುವುದು ಕನ್ನಡಿಗರಿಂದ. ಆದರೆ, ಕನ್ನಡ ಕಲಾವಿದರು ಬಂದ್ ಗೆ ಸಹಕರಿಸದಿರುವುದು ನಾಚಿಕೆಗೇಡಿನ ಸಂಗತಿ. ಕನ್ನಡ ನಾಡಿನ ಅನ್ನ ತಿಂದು ಕಲಾವಿದರು ರಾಜ್ಯದ ಜನತೆಗೆ ದ್ರೋಹವೆಸಗುವ ಕೆಲಸ ಮಾಡುತ್ತಿರುವುದು ಖಂಡನಾರ್ಹ ಎಂದರು.