ಲೋಕದರ್ಶನ ವರದಿ
ರಾಮದುರ್ಗ 06: ರೈತ ಸಂಘಟನೆಗಳು ಪಕ್ಷಾತೀತ, ಜಾತ್ಯಾತೀತವಾಗಿ ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬುರ ಶಾಂತಕುಮಾರ ಹೇಳಿದರು.
ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಕಬ್ಬು ಬೆಳೆಗಾರರ ಸಂಘದ ಗ್ರಾಮ ಘಟಕದ ಉದ್ಘಾಟನೆಯ ಪ್ರಯುಕ್ತ ಶನಿವಾರ ಏರ್ಪಡಿಸಿದ ಸಮಾರಂಭಕ್ಕೆ ಕಬ್ಬಿನ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಾರ್ಷಿಕ ಬೆಳೆಯಾದ ಕಬ್ಬು ಬೆಳೆಗಾರರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿವರ್ಷ ಕಬ್ಬಿನ ಬೆಲೆ ನಿಗಧಿ, ಕಾರ್ಖಾನೆಯಿಂದ ಬಿಲ್ ಪಾವತಿಯ ವೇಳೆ ಸರಕಾರದ ನೀತಿ ನಿಯಮಗಳನ್ನು ಕಾರ್ಖಾನೆಯವರು ಪಾಲಿಸದೇ ಇರುವುದು ಖಂಡನೀಯ. ಜೊತೆಗೆ ಕಬ್ಬಿಗೆ ಸರಕಾರಗಳು ವೈಜ್ಞಾನಿಕ ಬೆಲೆ ನಿಗಧಿ ಮಾಡಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ರೈತರನ್ನು ಸರಕಾರಗಳು ಕಡೆಗಣಿಸುತ್ತಲೇ ಸಾಗಿವೆ. ರೈತರ ಬೇಡಿಕೆಗಳ ಇಡೇರಿಕೆಗಾಗಿ ರೈತರು ಒಗ್ಗಟ್ಟಿನಿಂದ ಹೋರಾಟದ ಹಾದಿ ತುಳಿಯಬೇಕಾದ ಅನಿವಾರ್ಯತೆ ಇದೆ ಎಂದು ರೈತರಿಗೆ ಕರೆ ನೀಡಿದರು.
ರೈತ ಮುಖಂಡ ನಿಂಗನಗೌಡ ಪಾಟೀಲ ಮಾತನಾಡಿ, ರಾಜ್ಯದಿಂದ ಆಯ್ಕೆಗೊಂಡ 25 ಜನ ಸಂಸದರು ಕೇಂದ್ರದಲ್ಲಿ ರೈತರ ಪರವಾಗಿ ಧ್ವನಿ ಎತ್ತದೇ ಮೌನಕ್ಕೆ ಶರಣಾಗಿರುವುದು ನಿಜಕ್ಕೂ ರೈತದ್ರೋಹವೇ ಆಗಿದೆ. ಕೇಂದ್ರ ಸರಕಾರ ಕರ್ನಾಟಕ ಜನತೆಗೆ ಕಾಸಿನ ಕಿಮ್ಮತ್ತಿಲ್ಲದಂತೆ ಕೇವಲ ರೂ. 1200 ಕೋಟಿ ನೆರೆ ಪರಿಹಾರ ಘೋಷಿಸಿದ್ದು ವಿಷಾಧನೀಯ. ಹೆಚ್ಚಿನ ನೆರೆ ಪರಿಹಾರಕ್ಕೆ ಒತ್ತಾಯಿಸಿದ ರೈತರನ್ನು ಬಂಧಿಸುವ ಸರಕಾರಗಳ ನೀತಿಯ ವಿರುದ್ಧ ಮುಂಬರುವ ದಿನಗಳಲ್ಲಿ ರೈತ ಸಮುದಾಯ ಸಿಡಿದೇಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ ಮಾತನಾಡಿ, ಕಬ್ಬು ಬೆಳೆಗಾರರ ರೈತರು ಒಗ್ಗಟ್ಟಾಗಿ ಗ್ರಾಮ ಘಟಕ ಸ್ಥಾಪನೆ ಮಾಡಿಕೊಂಡು ಸಮಸ್ಯೆಗಳ ಪರಿಹಾರಕ್ಕೆ ಸರಕಾರವನ್ನು ಎಚ್ಚರಿಸುವ ಕಾರ್ಯ ಮಾಡಲು ಸಲುವಾಗಿಯಾದರೂ ಸಂಘಟನೆಯ ಅವಶ್ಯಕತೆ ಇದೆ ಎಂದರು. ರಚಿಸಿದ ಹೊಸಕೋಟಿ ಗ್ರಾಮ ಘಟಕದ ಅಧ್ಯಕ್ಷರಾಗಿ ವಿಠ್ಠಲ ಪಾಟೀಲ ತಾಲೂಕಾ ಪ್ರಧಾನ ಕಾರ್ಯದರ್ಶಿಯಾಗಿ ರಂಗನಗೌಡ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ ಪಾಟೀಲ, ತಾಲೂಕಾಧ್ಯಕ್ಷ ಶಂಕರಗೌಡ ಹೋಸಗೌಡ್ರ ಎಸ್.ಬಿ.ಸಿದ್ನಾಳ, ಶಾಸಪ್ಪ ನಾವಿ, ಅಪ್ಪಾಸಿಗೌಡ ಪಾಟೀಲ, ಎಲ್.ಎಸ್ ಕೊಳಚಿ, ಭೀಮಶೇಪ್ಪ ನಾಯಕ, ಸುಭಾಸಗೌಡ ನಾಡಗೌಡ್ರ, ವಿಶ್ವನಾಥ ಒಂಟಗೋಡಿ, ಮಾಯಪ್ಪ ಕಮತರಿ, ಮಂಜುನಾಥ ಗಾಣಗೇರ, ಹನಮಂತ ಚಿಕ್ಕಜಂಬಿಗಿ ಸೇರಿದಂತೆ ಇತರರಿದ್ದರರು.
ಶಿವಾನಂದ ನಾವಲಗಿ ಕಾರ್ಯಕ್ರಮ ನಿರೂಪಿಸಿದರು. ಶಿವನಗೌಡ ಪಾಟೀಲ ವಂದಿಸಿದರು.