ಮಂಗಳೂರು, ಅ 5: ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಗೆ ಸೂಕ್ತ ಪರಿಹಾರ ಪಡೆಯಲು ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಕಡಿಮೆ ಪರಿಹಾರ ಘೋಷಣೆ ಹಿಂದೆ ರಾಜ್ಯ ಸರ್ಕಾರದ ನಿರ್ಲಕ್ಷ್ಯತೆ ಎದ್ದುಕಾಣುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೇಂದ್ರದಿಂದ ನೆರೆ ಪರಿಹಾರ ಸಂಬಂಧ ಕಡಿಮೆಯಾಗಲು ರಾಜ್ಯದ ವೈಫಲ್ಯವಿದೆ. ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂಬಂಧಿತ ತುರ್ತುನಿರ್ವಹಣೆಗೆ ಕೇಂದ್ರದ 1,200 ಕೋಟಿ ರೂಪಾಯಿ ಸಾಲದು. ಕನಿಷ್ಠ 5ಸಾವಿರ ಕೋಟಿ ರೂ ನೀಡಬೇಕಿತ್ತು ಎಂದರು.
ನೆರೆ ಬಂದು ಎರಡು ತಿಂಗಳ ಬಳಿಕ ಕೇಂದ್ರ ನೆರವು ಪ್ರಕಟಿಸಿದೆ. 38,000 ಕೋಟಿ ರೂಪಾಯಿ ನಷ್ಟ ಸಂಭವಿಸಿದ್ದು, ಕೇಂದ್ರ ಸರ್ಕಾರ ಕಡಿಮೆ ಮೊತ್ತ ಮಂಜೂರು ಮಾಡಿದೆ. ರಾಜ್ಯ ಸರಕಾರ ಸಕಾಲದಲ್ಲಿ ಕೇಂದ್ರದ ಮೇಲೆ ಒತ್ತಡ ಹಾಕಿದ್ದರೆ
ಹೀಗಾಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.