ನೀನಿಲ್ಲದೇ ಆ ಗೊಂಬೆ ಕೂಡಾ ಅಳುತೈತೆ 'ರಾಜಕುಮಾರ'

"ಹೆಲೋ... ದೃತಿ ಹೇಗಿದ್ದಿಯಾ ಪುಟ್ಟ"? 

"ನಾನು ಚೆನ್ನಾಗಿದ್ದೀನಿ ಅಪ್ಪ. ನೀವು ಹೇಗಿದ್ದೀರಾ"?

"ನಾನು ಪಸ್ಟ್ ಕ್ಲಾಸ್ ಆಗಿದ್ದೀನಿ ಮಗಳೇ..
ಆದರೆ ಪುಟ್ಟ ನಿನ್ನನ್ನು ನೋಡಬೇಕು ಅಂತ ತುಂಬಾ ಆಸೆ ಆಗ್ತಾ ಇದೆ, ಬೇಗ ಬಾ ಪುಟ್ಟಾ"

"ಹೂಂ ಅಪ್ಪ ಅದ್ಯಾಕೋ ಗೊತ್ತಿಲ್ಲ, ನನಗೂ ಕೂಡಾ ನಿಮ್ಮನ್ನ ನೋಡ್ಬೇಕು ಅಂತ ತುಂಬಾ ಅನ್ಸತಾ ಇದೆ ಅಪ್ಪ... ಈ ದೀಪಾವಳಿ ಹಬ್ಬಕ್ಕೆ ಖಂಡಿತಾ ಬರ್ತೀನಿ ಅಪ್ಪ...! ಕರುನಾಡಿನ ಕಂದ ಅಪ್ಪು ಮಗಳ ಜತೆ ಜತೆಗೆ ಆಡಿದ ಕೊನೆಯ ಫೋನ್ ಸಂಭಾಷಣೆ.

ವಿಧಿಯಾಟ ನೋಡಿ ಹೇಗಿದೆ! ಅಪ್ಪನೊಂದಿಗೆ ದೀಪಾವಳಿ ಆಚರಿಸಲು ಸಂಭ್ರಮ ಹೊತ್ತು ಬರಬೇಕಿದ್ದ ಮಗಳು ಪ್ರಯಾಣದುದ್ದಕ್ಕೂ ಅಪ್ಪನನ್ನ ನೆನೆದು ಕಣ್ಣೀರು ಸುರಿಸುತ್ತಲೇ ಬರಬೇಕಾಯಿತು! 

"ನಾನ್ ಬಂದಿದ್ದೀನಿ ನೋಡು ಅಪ್ಪ, ಪ್ಲೀಸ್  ಏದ್ದೇಳಿ ಅಪ್ಪ. ಮಾತಾಡಿಸಿ ಅಪ್ಪ.." ಅಂತಾ ಅಪ್ಪನ ಕಳೇಬರ ಮುಂದೆ ಮಗಳು ಅಳುತ್ತಿದ್ದಾಗ, ಮನಕಲುಕುವ ಈ ದೃಶ್ಯವನ್ನ ನೋಡಿ ಇಡೀ ನಾಡಿಗೆ ನಾಡೇ ದುಃಖಿಸಿತು.
"ನನ್ನನ್ನು ಮಾತಾಡಿಸಿ ಅಪ್ಪಾ..!" ಎಂದು ಅದೆಷ್ಟು ಗೋಗರೆದರೂ ಮಗಳ ಅಕ್ರಂದನ ಅಪ್ಪನಿಗೆ ಕೇಳಿಸಲೇ ಇಲ್ಲ. ಶಾಶ್ವತ ಚಿರನಿದ್ರೆಗೆ ಜಾರಿದ ಅಪ್ಪನ ಶವದ ಮುಂದೆ ಕುಳಿತು, ಆತನ ತಲೆ ಸವರುತ್ತ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದ ಆ ಮಗುವಿನ ಸ್ಥಿತಿ ಹೇಗಾಗಿರಬೇಡ!

ನನ್ನ ಅಪ್ಪ ಇನ್ನಿಲ್ಲ ಅನ್ನೋ ದುಃಖವನ್ನು ಅಂತರಾಳದಲ್ಲಿಟ್ಟುಕೊಂಡು ಸತತ 28 ಗಂಟೆಗಳ ಕಾಲ ಪ್ರಯಾಣ ಮಾಡುವ ಸ್ಥಿತಿ ಇದೆಯಲ್ಲ, ಅದು ಯಾವ ಮಕ್ಕಳಿಗೂ ಬಾರದಿರಲಿ!  ತನ್ನ ಒಡಲಲ್ಲಿ ಉಸಿರು ಚೆಲ್ಲಿ ಮಗುವಿನಂತೆ ಮಲಗಿರುವ ಪತಿಯನ್ನ ಕಂಡು ಮಡದಿ ಅಶ್ವಿನಿಯ ಅಂತರಾಳದ ದುಃಖ ಎಷ್ಟಿರಬಹುದು. ಪತಿಯ ದಿಢೀರ್ ಸಾವಿನ ಆಘಾತವನ್ನ ತಡೆಯಲಾಗದೆ ಕಣ್ಣೀರ  ಕಡಲನ್ನ ಸುರಿಸಿ ಬರಿದಾಗಿಸಿಕೊಂಡ ಮಡದಿ ಮೌನಕ್ಕೆ ಜಾರಿಬಿಟ್ಟಳು.  ಅಂತ್ಯಕ್ರಿಯೆವರೆಗೆ ಅಶ್ವಿನಿಗೆ ಮಾತೇ ಹೊರಡಲಿಲ್ಲ. ಮಕ್ಕಳೂ ಕೂಡ ಮಾತು ಬಾರದೆ ಅಮ್ಮನೊಟ್ಟಿಗೆ ಮೌನಕ್ಕೆ ಜಾರಿದರು. ಇತ್ತ ಹೆಗಲಿಗೆ ಹೆಗಲು ಕೊಟ್ಟು ಕೈ ತುತ್ತು ತಿನಿಸಿ ಆಡಿಸಿ ಬೆಳೆಸಿದ ಸಹೋದರಿರ್ವರು ಮಗುವಿನಂತೆ  ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದರೆ, ಲಕ್ಷಾಂತರ ಅಭಿಮಾನಿಗಳ ಒಡಲಿಗೆ ಕೊಳ್ಳಿ ಇಟ್ಟಂತಾಗಿತ್ತು. ಈ ಎಲ್ಲಾ ದೃಶ್ಯಗಳು ಪ್ರತಿಯೊಬ್ಬ ಕನ್ನಡಿಗರ ಅಂತರಾಳದಲ್ಲಿ ಮಾಸದೆ ಇನ್ನೂ ಹಾಗೇ ಇವೆ!

 ಪುನೀತ್ ಇನ್ನಿಲ್ಲ ಅನ್ನೋ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಕರುನಾಡಿಗೇ ಬರ ಸಿಡಿಲು ಬಡಿದಂತಾಯಿತು. ಆ ಕ್ಷಣಕ್ಕೆ ಸಮಸ್ತ ಕನ್ನಡಿಗರ ಮನಸ್ಥಿತಿ, ದೂರದ ಊರಿನ ದೊಡ್ಡ ಸಂತೆಯೊಂದರಲ್ಲಿ ಕಳೆದು ಹೋದ ಪುಟ್ಟ ಮಗುವಿನ ಸ್ಥಿತಿಯಂತಾಗಿಬಿಟ್ಟಿತು! ಯಾರೊಬ್ಬರಿಗೂ ಆ ಸಾವನ್ನು ಒಪ್ಪಿಕೊಳ್ಳಲಾಗಲಿ, ಅರಗಿಸಿಕೊಳ್ಳಲಿಕ್ಕಾಗಲಿ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿಬಿಟ್ಟಿತ್ತು. ಹಿರಿಯರು ಯುವಕ, ಯುವತಿರು, ತಾಯಂದಿರು, ಮಕ್ಕಳು ಸೇರಿದಂತೆ ಎಲ್ಲರ ನೋವಿನ ಆಕ್ರಂದನ ಮುಗಿಲು ಮುಟ್ಟಿತ್ತು. "ಯುವ ರಾಜ ನೀನು, ರಾಜ ವಂಶದವನು, ಒಳ್ಳೆತನ ಇರುವಾ ಒಳ್ಳೆ ಮನೆಯವನು, ಕಾದರು ನೋಡಲು ನಿನ್ನ ಮುಖ, ತಿಳಿಯೋ ಅವರ ಕಷ್ಟ ಸುಖ, ಒಲವ ಬಿಟ್ಟವಾ ಬಂಗಾರದ ಮನುಷ್ಯ". ಅನ್ನೊ ಹಾಡಿನ ಆ ಸಾಲುಗಳು ಆ ಸಂದರ್ಭಕ್ಕೆ ಹಿಡಿದ ಕೈಗನ್ನಡಿಯಂತಿದ್ದವು. ಆ ಬಂಗಾರದ ಮನುಷ್ಯನ, ಬಂಗಾರದಂತಹ ಮಗ ಪರಮಾತ್ಮನ  ಪಾದ ಸೇರಿಬಿಟ್ಟಿದ್ದ. 'ಅಪ್ಪು ಇನ್ನಿಲ್ಲ' ಅನ್ನೋ ಕಟುಸತ್ಯವನ್ನ ಒಪ್ಪಿಕೊಳ್ಳಲು  ಯಾರೊಬ್ಬರೂ ಸಿದ್ಧರಿರಲಿಲ್ಲ. 

 ಸಾವಿನ ಹಿಂದಿನ ದಿನ, ಎದೆ ನೋವು, ಸ್ವಲ್ಪ ಸುಸ್ತು ಕಾಣಿಸಿಕೊಂಡಿದ್ದರಿಂದ ಮರುದಿನ ಮುಂಜಾನೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದು ಸ್ವಲ್ಪ ವಿಶ್ರಾಂತಿ ಪಡೆದರೆ ಎಲ್ಲವೂ ಸರಿ ಹೊಗಿಬಿಡಬಹುದೆಂದು  ಭಾವಿಸಿಯೇ ಅಂದು ಮುಂಜಾನೆ ಹನ್ನೊಂದು ಗಂಟೆಗೆ ಆಸ್ಪತ್ರೆಯತ್ತ ತೆರಳಿದ್ದ ಪುನೀತ್. ಆದರೆ ಅಪ್ಪುವಿಗೆ  ತನ್ನ ಜೊತೆ ಜೊತೆಯೇ ಸಾವು ಹಿಂಬಾಲಿಸುತ್ತಲಿದೆ ಎಂಬ ಒಂದೇ ಒಂದು ಸಣ್ಣ ಸುಳಿವನ್ನೂ ಸಹ ಸಿಗಲಿಲ್ಲ. ಅತಿ ಅವಸರ ಗಡಿ ಬಿಡಿಯಲ್ಲಿ ಜಿದ್ದಿಗೆ ಬಿದ್ದವನಂತೆ ಆತನ ಕೈಹಿಡಿದುಕೊಂಡು ಅತ್ತ ಇತ್ತ ಸುತ್ತಾಡಿಸಿದಂತೆ ನಾಟಕವಾಡಿದ ಕ್ರೂರ ವಿಧಿ ಆಸ್ಪತ್ರೆ ತಲುಪುವ ಮಾರ್ಗ ಮಧ್ಯೆಯೇ ತನ್ನ ನಾಟಕ ನಿಲ್ಲಿಸಿ ಪುನೀತರನ್ನ ಕರೆದುಕೊಂಡು ಹೋಗಿಯೇ ಬಿಟ್ಟಿತ್ತು. ತನ್ನ ಅಪ್ಪನನ್ನು ನೋಡಲು ದೀಪಾವಳಿ ಹಬ್ಬಕ್ಕೆ ಬರುತ್ತೇನೆ ಅಂತ ಅಪ್ಪನಿಗೆ ಮಾತು ಕೊಟ್ಟಿದ್ದ ಮಗಳನ್ನು, ಆ ಕ್ರೂರ ವಿಧಿ ದೀಪಾವಳಿಗೂ ಮುನ್ನವೇ ಕರಿಸಿಕೊಂಡುಬಿಟ್ಟಿತ್ತು.

ಅಪ್ಪು ಸಾವನ್ನು ಎಲ್ಲ ಸಾವಿನಂತೆ ಒಪ್ಪಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅವರ ಸಹಜವಾದ ಬದುಕಿನೊಂದಿಗೆ ಅಥವಾ ಚಿತ್ರರಂಗದ ಬದುಕಿನೊಂದಿಗೆ ನಾವು ಹೊಂದಿರುವ ರೀತಿಯೇ ಅವರ ಸಾವನ್ನು ಅರಗಿಸಿಕೊಳ್ಳುವುದಕ್ಕೆ ಇವತ್ತಿಗೂ ಬಿಡುತ್ತಿಲ್ಲ! ಆದರೆ ಅವರ ಈ ಸಾವು ಪುಣ್ಯದ ಸಾವು ಇಂತಹ ಸಾವು ಲಕ್ಷ-ಕೋಟಿಗೊಂದು ಎಂದು ಉತ್ಕಟವಾದ ಭಾವದಲ್ಲಿ ಭಾವಿಸಿದರೂ ಕೂಡಾ ಅವರ ಅಗಲಿಕೆಯನ್ನ ಮಾತ್ರ ಅರಗಿಸಿಕೊಳ್ಳಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದಂತೂ ಸತ್ಯ.  ಅಪ್ಪು ಅನ್ನುವ ರತ್ನವನ್ನು ಕಳೆದುಕೊಂಡ ಕರುನಾಡು ಬಡವಾಗಿಬಿಟ್ಟಿದೆ. ಅದೆಷ್ಟೋ ತಾಯಂದಿರು ತಮ್ಮ ಸ್ವಂತ ಮಕ್ಕಳನ್ನ ಕಳೆದು ಕೊಂಡಾಗಲೂ ತಮಗೆ ಇಷ್ಟು ನೋವು ಆಗಿರಲಿಲ್ಲ ಅನ್ನುವ ಅಂತರಾಳದ ನೋವನ್ನು ತೊಡಿಕೊಂಡಿದ್ದರು.

   ಅಪ್ಪು ಹುಟ್ಟುತ್ತಲೇ ಒಬ್ಬ ಸ್ಟಾರ್. ಬೆಳೆಯುತ್ತ ಸಾಧನೆಯ ಶಿಖರ ಏರಿದವರು. ಆದರೆ ಯಾವತ್ತಿಗೂ ಕೂಡಾ ಜಗದ ಎದುರಿಗೆ ಬೀಗಿದವರಲ್ಲ. ಮನೆ ಮನೆಯ ಮಗನಾಗಿ, ಬಡವರ ಕಷ್ಟಗಳಿಗೆ ಸ್ಪಂದಿಸುತ್ತ ಎಲೆಮರೆಕಾಯಿಯಂತೆ ಅವರ ನೋವಿಗೆ ನೆರವಾಗುತ್ತಿದ್ದರು. ನಟ ಸಾರ್ವಭೌಮನ ಮಗನಾದರೂ ನಡೆ-ನುಡಿಯಲ್ಲಿ ರಾಮ, ಕೋಟಿ ಇದ್ದರೂ ಕೊಂಚವೂ ಅಹಂಕಾರ ಅನ್ನೋದಿರಲಿಲ್ಲ, ಹಿಟ್ ಸಿನಿಮಾಗಳ ಸರದಾರನಾದರೂ ಸ್ವಲ್ಪವೂ ಅಹಂ ಇರಲಿಲ್ಲ. ಆಡುವ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಪುನಿತ್ ರಾಜಕುಮಾರ ತನ್ನ ಕೆರಿಯರ್ ಲೈಪ್ ನಲ್ಲಿಯೂ ಹೀರೋನೆ ಆಗಿದ್ದರು. ಬಣ್ಣದ ಬದುಕಿನ ಜೊತೆ ಆತನ ಬಂಗಾರದಂತಹ ಸೇವೆಗೆ ರಾಜ್ಯವೇ ತಲೆಬಾಗಿತ್ತು. ನಟನೆಯ ಜೊತೆ ಜೊತೆಯಲ್ಲಿ ಅದೆಷ್ಟೋ ಬಡ, ರೈತ ಕುಟುಂಬಗಳಿಗೆ ಸಹಾಯ ಮಾಡಿದ್ದರು. ಬಡವರ ಕಣ್ಣೀರು ಒರೆಸುತ್ತ, ಗೋವಿನ ಸೇವೆ, ವೃದ್ಧರ ಸೇವೆ, ಮಕ್ಕಳ ಶಿಕ್ಷಣದಂತಹ ಹಲವು ಪುಣ್ಯದ ಕಾರ್ಯಗಳನ್ನು ಮಾಡುತ್ತಾ ಬಂದ ವ್ಯಕ್ತಿಯನ್ನು ಅದ್ಯಾವ ಕಾರಣ, ಸಮಸ್ಯೆಗಳಿಲ್ಲದೆ ಇದ್ದಕ್ಕಿದ್ದಂತೆ ತನ್ನತ್ತ ಕರೆಸಿಕೊಳ್ಳುವುದೆಂದರೆ, ಇದು ಆ ದೇವರ ತಪ್ಪು ನಿರ್ಧಾರವೇ ಅಂತ ಆ ದೇವರನ್ನೇ ಶಪಿಸಿದರು. ಇದು ಭಗವಂತನ ಅನ್ಯಾಯವೆಂದು ಗೋಳಾಡಿದರು. 'ಮಹಾಭಾರತ' ಕುರುಕ್ಷೇತ್ರದ ನಂತರ ಗಾಂಧಾರಿಯ ಮಕ್ಕಳ ಅ-ಧರ್ಮದ ಕಾರ್ಯವಾಗಿದ್ದರಿಂದ ಆಕೆ ಶಾಪ ಶ್ರೀ ಕೃಷ್ಣ ಪರಮಾತ್ಮನಿಗೆ ತಟ್ಟದೆ ಇದ್ದಿರಬಹುದು, ಆದರೆ ಈ ಸಂದರ್ಭದಲ್ಲಿ ಜನಗಳು, ಪುಟ್ಟ ಮಕ್ಕಳು, ದೇವರಿಗೆ ಹಾಕಿದ ಆ ದುಃಖ, ನೋವಿನ ಶಾಪ ಮಾತ್ರ ಆ ಭಗವಂತನಿಗೆ ತಟ್ಟದೇ ಇರಲು ಸಾಧ್ಯವಿಲ್ಲ ಅಂತ ಅನಿಸುತ್ತದೆ! ಹಾಗಾಗಿ ಅಪ್ಪುವನ್ನು ಜನರು ಅದೆಷ್ಟು ಪ್ರೀತಿಸುತ್ತಿದ್ದರು ಅಂತ ಗೊತ್ತಾಗಿದ್ದೆ ಈ ಸಂದರ್ಭದಲ್ಲಿ ಅನ್ನೋದು ಕಟುಸತ್ಯ...

ಕಳೆದ ಒಂದು ವರ್ಷದ ಹಿಂದೆಯಷ್ಟೇ ನಿಧನರಾದ ಚಿರಂಜೀವಿ ಸರ್ಜಾ, ಸಂಚಾರಿ ವಿಜಯರವರ ಅಗಲಿಕೆಯ ನೋವು ಮಾಸುವ ಮುನ್ನವೇ ಇದೀಗ ಮತ್ತೊಂದು ಆಘಾತಕಾರಿ ಸುದ್ದಿಯನ್ನು ಕೇವಲ ಕನ್ನಡಿಗರಿಗಷ್ಟೇ ಅಲ್ಲದೆ ಭಾರತದ ಸಮಸ್ತ ಚಿತ್ರರಂಗ, ಅಭಿಮಾನಿಗಳಿಗೆ ಸಹಿಸಿಕೊಳ್ಳಲಾಗದಷ್ಟು ನೋವನ್ನು ತಂದಿದೆ. ಯಾರದ್ದೇ ಸಾವು ಆಗಿರಲಿ, ಅದು ನೋವಿನ ಸಂಗತಿಯೇ ಸರಿ. ಆದರೆ ಅಪ್ಪು ಸಾವು ಮಾತ್ರ ಪ್ರತಿಯೊಬ್ಬರ ಹೃದಯಕ್ಕೆ ಬಹಳ ನೋವನ್ನುಂಟು ಮಾಡಿದೆ. ಸಾವನ್ನು ಯಾರೂ ನೋಡಿಲ್ಲ, ಅದು ಹೇಗಿದೆ ಅಂತ ಯಾರೊಬ್ಬರಿಗೂ ತಿಳಿದಿಲ್ಲ. ಒಮ್ಮೆ ಅದನ್ನು ನೋಡಲು ಬಯಸಿದವರು ತಮ್ಮ ಜೀವನದ ಮೇಲಿನ ಆಸೆಯನ್ನ ಸಂಪೂರ್ಣವಾಗಿ ಕಳೆದುಕೊಂಡು ಬಿಡುತ್ತಾರೆ. ಪ್ರತಿ ಮನುಷ್ಯ ಒಮ್ಮೆ ಹುಟ್ಟಿದ ಮೇಲೆ ಸಾಯಲೇಬೆಕು, ಆತ ತನ್ನ ಬದುಕನ್ನು ಹೇಗೆಯೇ ಕಟ್ಟಿಕೊಂಡರೂ ಒಂದೊಮ್ಮೆ ಅದು ಸಾವಿನಲ್ಲಿಯೇ ಕೊನೆಯಾಗುತ್ತದೆ. ಎಲ್ಲಾ ಜೀವಗಳು ಕೊನೆಗೊಮ್ಮೆ ಸಾವಲ್ಲಿಯೇ ಐಕ್ಯಗೊಳ್ಳುವವು. ಪ್ರತಿಯೊಬ್ಬ ಮನುಷ್ಯ ಹುಟ್ಟುವಾಗಲೇ ಆತನ ಸಾವು ನಿಶ್ಚಿತವಾಗಿರುತ್ತದೆ. ಆದರೂ ಕೂಡಾ ಸಾವು ತಂದೊಡ್ಡುವ ನೋವಿಗೆ ಮಾತ್ರ ಕೊನೆ ಎಂಬುದೇ ಇಲ್ಲ. ಇದೀಗ ಆಗಿದ್ದು ಅದೇ! 

ಚಿರಂಜೀವಿ ಸರ್ಜಾರವರದ್ದಾಗಲಿ, ಸಂಚಾರಿ ವಿಜಯರವರದ್ದಾಗಲಿ, ಅಪ್ಪು ಅವರದ್ದಾಗಲಿ ಸಾವಿನ ಕೊನೆಯ ಹಂತದದಲ್ಲಿರುವ ಬದುಕಂತೂ ಆಗಿರಲೇ ಇಲ್ಲ. ಸಾವು ಜೊತೆಗೆ ಇದೆ ಎಂಬ ಯಾವುದೇ ಸೂಚನೆ ಇರದೆ ಇರುವ ಹೊತ್ತಿನಲ್ಲಿ ಬರುವ ಸಾವಿನ ಸಂದರ್ಭ ಯಾವತ್ತಿಗೂ ನ್ಯಾಯಯುತವಾದುದ್ದಲ್ಲ... ಅಪ್ಪು ಅವರದು ಸಾಯುವ ವಯಸ್ಸು ಅಲ್ಲ. ಯಾವುದನ್ನೂ ಅನುಭವಿಸುವ, ಅನುಭವಿಸಿ ಗೆಲ್ಲುವ, ಗೆದ್ದು ಅರಗಿಸಿಕೊಳ್ಳುವ, ಅರಗಿಸಿಕೊಂಡು ಈ ಸಮಾಜವನ್ನು ಪ್ರೀತಿಸುತಿದ್ದ ವಯಸ್ಸು ಅಪ್ಪು ಅವರದ್ದಾಗಿತ್ತು. ಪುನೀತರದ್ದು ಬಲು ಉತ್ಸಾಹ, ಚೈತನ್ಯದಿಂದ ಕೂಡಿದ ವ್ಯಕ್ತಿತ್ವ ಸ್ವಭಾವವಾಗಿತ್ತು. ಸಮಾಜದ ಹಿತ, ಸರ್ವರ ಶಿಕ್ವಣ, ರೈತರ ಸಬಲೀಕರಣ ಒಟ್ಟಾರೆ ಕನ್ನಡ ನಾಡಿನ ಭಾಗ್ಯೋದಯದ ಕನಸು ಹೊತ್ತು ನಡೆದಿದ್ದ ಈ ಹಂತದಲ್ಲಿ ಬಂದ ಸಾವು ಸಮಂಜಸವಾದುದ್ದಲ್ಲ.

ಸಾಮಾನ್ಯವಾಗಿ ಮನುಷ್ಯನ ವಯಸ್ಸು ಹೆಚ್ಚಾದಂತೆ ಅನುಭವಗಳು ಪಕ್ವವಾಗಿ ಪ್ರೌಢಿಮೆ ಬೆಳೆಯುತ್ತಾ ಹೊಗುತ್ತದೆ. ಸಂವೇದನಾ ಶೀಲತೆಯ ಮನೋಭಾವ ಕೂಡಾ ವೃದ್ದಿಯಾಗುತ್ತದೆ. ಅದನ್ನು ನಾವು ಪುನೀತ್ ರಾಜಕುಮಾರರ ಸಾಕಷ್ಟು ಚಿತ್ರಗಳಲ್ಲಿ, ಕನ್ನಡದ ಕೋಟ್ಯಧಿಪತಿಯಂತಹ ಕಾರ್ಯಕ್ರಮಗಳಲ್ಲಿ ನಾವದನ್ನು ಕಂಡಿದ್ದೇವೆ. ಅವರ ಪ್ರತಿಯೊಂದು ಸಿನಿಮಾಗಳನ್ನು ನಾವೆಲ್ಲರೂ ನೋಡಿದ್ದೇವೆ, ಮಿಲನ, ಅರಸು, ವಂಶಿ, ಪೃಥ್ವಿ, ರಾಜಕುಮಾರ, ಯುವರತ್ನ ಇನ್ನೂ ಹಲವು ಚಿತ್ರಗಳು, ಅವು ಸಮಾಜಕ್ಕೆ ಮಹತ್ತರವಾದಂತಹ ಸಂದೇಶಗಳನ್ನು ಕೊಟ್ಟಿವೆ, ಆ ಸಿನಿಮಾಗಳು ಅದೆಷ್ಟೋ  ಜನರ ಜೀವನದಲ್ಲಿ ಸಾಕಷ್ಟು ಪಾಸಿಟಿವ್ ಪ್ರಭಾವವನ್ನು ಬೀರಿದ್ದವು. 

ಬಹುಮುಖ್ಯವಾಗಿ ಈ ಸಮಾಜಕ್ಕೆ ತೋರಿದ ಅವರ ಮಾನವಿಯ ಕಳಾಕಳಿಗಳಿದೆಯಲ್ಲ ಅವುಗಳೇ ಇವತ್ತು ಮತ್ತು ಮುಂದೆಂದಿಗೂ ಅವರನ್ನು ಜೀವಂತವಾಗಿರಿಸುತ್ತವೆ. ಸಾಲದ ಬಾಧೆಯನ್ನು ತಾಳಲಾರೆ ರೈತರ ಆತ್ಮಹತ್ಯೆಯಂತಹ ಪ್ರಕರಣಗಳು ನಡೆದಿದ್ದ ಆ ಸಂದರ್ಭದಲ್ಲಿ ಅದೆಷ್ಟೋ ಕುಟುಂಬಗಳಿಗೆ ಧೈರ್ಯ ತುಂಬಿ ಅವರಿಗೆ ಸಹಾಯ ಮಾಡಿದ್ದರು. ದಾವಣಗೆರೆ ಮೂಲದ ಬಡ ಕುಟುಂಬದ ಪುಟ್ಟ ಬಾಲಕಿಯೊಬ್ಬಳು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಅವರನ್ನ ಬೆಂಗಳೂರಿಗೆ ಕರೆಸಿಕೊಂಡು ಅವಳ ಕಿಡ್ನಿ ಕಸಿಗಾಗಿ 12 ಲಕ್ಷ ರೂಪಾಯಿ ಸಹಾಯ ಮಾಡುವುದರೊಂದಿಗೆ ಈ ವಿಷಯವನ್ನು ಎಲ್ಲೂ ಪಬ್ಲಿಕ್ ಮಾಡಬೇಡಿ ಅಂತ ಅವರಿಗೆ ಹೇಳಿ ಕಳುಹಿಸಿದ್ದ ಅಪ್ಪು.  ತಾವು ಶೂಟಿಂಗ್ ಗೆ ಹೋದ ಸ್ಥಳದಲ್ಲೆಲ್ಲ ಅಲ್ಲಿನ ಸುತ್ತಮುತ್ತಲಿನ ಜನರಿಗೆ ಏನಾದರೂ ಸಮಸ್ಯೆ ಇದೆ ಅಂತ ಗೊತ್ತಾದರೆ ಸಾಕು ಅವರಿಗೆ ಸಹಾಯ ಸಹಕಾರ ನೀಡದೆ  ಹಿಂತಿರುಗುತ್ತಿರಲಿಲ್ಲ.  'Down to Earth' ಅಂತಾರಲ್ಲ ಹಾಗೆ,  ಅದೆಷ್ಟೇ ಎತ್ತರಕ್ಕೆರಿದರೂ ನಾನಿನ್ನು ಚಿಕ್ಕವನೇ ಅನ್ನುತ್ತ ಬಲಗೈ ದಾನ ಎಡಗೈಗೆ ಗೊತ್ತಾಗಬಾರದಂತಿತ್ತು ಅಪ್ಪುರವರ ಮನಸ್ಥಿತಿ. ಯಾಕೆಂದರೆ ಇಂದು ಪ್ರಚಾರಕ್ಕಾಗೇ ಎಲ್ಲವನ್ನು ಮಾಡುವ ಹಲವು ಬಗೆಯ ಜನಗಳ ಮಧ್ಯೆ ತನ್ನ ಸರಳತೆಯನ್ನು ತನ್ನೊಳಗೇ ಇರಿಸಿಕೊಂಡು, ತೊರಿಕೆಗಾಗಿ ಮತ್ತೊಬ್ಬರಿಗೆ ಕಾಣದಂತೆ, ಪ್ರಚಾರವಾಗದಂತೆ ಮಾಧ್ಯಮಗಳಿಗೆ ಗೊತ್ತಾಗದಂತೆ ಇದ್ದರಲ್ಲ ಈ ಅಪ್ಪು ಅದಕ್ಕೆ ಅಲ್ಲವೆ ಅವರನ್ನ 'ರಾಜಕುಮಾರ' ಅಂತ ಹೇಳುವುದು.. ಆದರೆ, ಸತ್ಯ ಪ್ರಾಮಾಣಿಕತೆ ಅನ್ನೋದು ಯಾವಾಗಲೂ ಅದೊಂತರ ಬೂದಿ ಮುಚ್ಚಿದ ಕೆಂಡ. ಪುನೀತ್ ಇನ್ನಿಲ್ಲ ಅನ್ನೋ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ತಡ, ಅವರು ಮಾಡಿದ ಸಹಾಯ, ದಾನ ಸತ್ಕಾರ್ಯಗಳನ್ನು ಜನ ಮಾಧ್ಯಮ ಗಳಲ್ಲಿ ಒಂದೊಂದಾಗಿ ಹೇಳಲಾರಂಬಿಸಿದರು. ಅದರಲ್ಲೂ ಪುನೀತ್ ರವರು ನಡೆಸುತ್ತಿದ್ದ ಮೈಸೂರಿನ ಶಕ್ತಿ ಧಾಮದಿಂದ ಬಂದ ಹೆಣ್ಣು ಮಕ್ಕಳು ಕಣ್ಣೀರಿನ ಕಂಬನಿ ಮಿಡಿದರಲ್ಲ, ಆ ದೃಶ್ಯಗಳಂತೂ ಪುನೀತರ ಹೃದಯ ಶ್ರೀಮಂತಿಕೆಯನ್ನು ಬಿಚ್ಚಿಟ್ಟಿದೆ.

 ನಟ ಸಾರ್ವಭೌಮ ಡಾ. ರಾಜ್ ರವರ ಪುತ್ರ ಎಂಬ ಪ್ರಭಾವಳಿ, ದೊಡ್ಮನೆ ಹುಡುಗ ಎಂಬ ಹೆಗ್ಗಳಿಕೆಗಳಿದ್ದರೂ ಅವರು ಯಾವತ್ತೂ 'ನಾನು ವಿನೀತ ನಿಮ್ಮ ಪುನೀತ' ಎಂಬಂತೆಯೇ ಬಾಳಿದರು. ಚಿತ್ರರಂಗದಲ್ಲಿ, ವೈಯಕ್ತಿಕ ಜೀವನದಲ್ಲಿ ಡಾ. ರಾಜ್ ರವರ ಮೇಲ್ಪಂಕ್ತಿಯ ಸಮರ್ಥ ಉತ್ತರಾಧಿಕಾರಿಯಾಗಿ ಆದರ್ಶ ಮೆರೆಯುತ್ತಿದ್ದ ಪುನೀತರಿಗ 'ಇಷ್ಟು ಬೇಗ ಯಾಕೆ..ಏನಿತ್ತು ಅವಸರ..' ಎಂಬ ಪ್ರಶ್ನೆಗಳನ್ನು ಜನರ ಮುಂದೆ ಇಳಿಸಿ, 'ನಿನ್ನನ್ನು ಪಡೆದ ನಾವು ಪುನೀತ..ಬಾಳು ನಗುನಗುತ' ಎಂಬ ವಾಕ್ಯವನ್ನು ಪೂರ್ಣಗೊಳಿಸುವ ಮೊದಲೇ ಹೊರಟು ಹೊಗಿದ್ದು ನಮ್ಮ ದುರಂತವೇ ಸರಿ.

   ಪ್ರೀತಿಯ ಅಪ್ಪುಗೆ ಹೀಗಾಯಿತಲ್ಲ ಅಂತ ಆ ವಿಧಿಯನ್ನು ಶಪಿಸಲಾಗಿತ್ತು. ಮತ್ತೊಂದೆಡೆ ಅದೇ ವಿಧಿಯ ಕ್ರೂರತೆ ಈ ಸಮಾಜಕ್ಕೆ ಅದೆಂತಹ ಮಾನವೀಯತೆಯನ್ನು ಕಲಿಸಿತ್ತು ಎಂಬ ಅಂಶವನ್ನು ಮಾತ್ರ ಯಾರೊಬ್ಬರೂ ಮರೆಯುವ ಹಾಗಿಲ್ಲ. ಯಾರ ಸಾವು ಯಾವಾಗ! ಅದು ಎಂತಹ ಸಂದರ್ಭದಲ್ಲಿ ಆಗಬೇಕು? ಯಾವ ಸಾವಿನಿಂದ ಈ ಸಮಾಜಕ್ಕೆ ಪ್ರೇರಣೆ ಆಗಬಲ್ಲದು! ಯಾವ ಸಾವಿನ ಅವಶ್ಯಕತೆ ತುಂಬಾ ಇದೆ ಎಂಬುದು ಆ ವಿಧಿಗೆ ಚೆನ್ನಾಗಿ ಗೊತ್ತಿದೆ! ಕೊರೋನಾ ಮಹಾಮಾರಿಯಿಂದಾಗಿ ಕಳೆದ ಎರಡು ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಗಣ್ಯರು, ರಾಜಕಾರಣಿಗಳು, ಉದ್ಯಮದಾರರು ಅಗಲಿದ್ದರು. ಆಗ ಲಾಕ್ ಡೌನ್ ನಿಯಮಗಳಿದ್ದವು. ಮದುವೆಗೆ ಐವತ್ತು, ಸತ್ತಾಗ ಮುವತ್ತು ಜನ ಮಾತ್ರ ಸೇರಬೇಕೆಂಬ ಷರತ್ತುಗಳಿದ್ದವು. ಆದರೆ ಅಪ್ಪು ಸಾಯಲು ಯಾವುದೇ ಒಂದೇ ಒಂದು ಸಣ್ಣ ಕಾರಣವಿರಲಿಲ್ಲ. ಆರಾಮಾಗಿ ಹೆಂಡತಿಯೊಂದಿಗೆ ಮಾತನಾಡುತ್ತ ಅವರ ತೊಡೆಯಮೇಲೆ ಪ್ರಾಣಬಿಟ್ಟಿದ್ದರು. ಇದೀಗ ಯಾವುದೇ ಕೊರೋನಾ ನಿಯಮಗಳಿರಲಿಲ್ಲ. ಪರಿಣಾಮವಾಗಿ ಸಾಗರದ ಪ್ರವಾಹದಂತೆ ಲಕ್ಷಾಂತರ ಜನರು ಅಗಲಿದ ಪುಣ್ಯಾತ್ಮನಿಗೆ ನಮನ ಸಲ್ಲಿಸಲಿಕ್ಕಾಗಿ, ಆ ಸಂದರ್ಭದಲ್ಲಿ ಮಾತ್ರ ಪುನೀತ್ ಯಾವುದೆಲ್ಲವನ್ನು ಮುಚ್ಚಿಟ್ಟಿದ್ದರೋ, ಆತನ ಬಲಗೈ ದಾನ ಎಡಗೈಗೆ ಗೊತ್ತಾಗ ಬಾರದೆಂದುಕೊಡಿದ್ದರೋ ಅದನ್ನು ಗೊತ್ತು ಮಾಡಿಸುವುದಕ್ಕಾಗಿ ಅವರೆಲ್ಲರನ್ನು ಒಂದೆಡೆ ಸೇರುವಂತೆ ಆ ವಿಧಿಯು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿಸಿಬಿಟ್ಟಿತು. ಒಂದುವೇಳೆ ಕೊರೋನಾ ಸಂದರ್ಭದ ಸ್ಥಿತಿ ಇದ್ದರೆ, ನೂರಾರು ಜನರಿಗಿಂತ ಹೆಚ್ಚು ಜನ ಸೇರದಂತಾಗಿದ್ದರೆ,  ಪುನೀತರ ಪ್ರಾಮಾಣಿಕ ಸೇವೆಯ ಪರಿಚಯ ಬಹುಶಃ ಈ ಸಮಾಜಕ್ಕೆ ಆಗುತ್ತಿರಲಿಲ್ಲವೇನೊ ಅಂತ ಅನಿಸುತ್ತದೆ. ಅದಕ್ಕೆ ಅಲ್ಲವೆ ಡಾ. ರಾಜಕುಮಾರ ರವರು ಹೇಳಿದ್ದು 'ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ' ಅಂತ...


ನಮ್ಮ ದೇಶದ ಚರಿತ್ರೆಯಲ್ಲಿ ಮಹಾನ್ ಪರಿವರ್ತನೆ ತರಲಿಕ್ಕಾಗಿ ಹುತಾತ್ಮರಾದ ಬಹುತೇಕ ಮಹಾತ್ಮರು ಮತ್ತು ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಸಣ್ಣ ವಯಸ್ಸಿನವರೇ ಎಂಬುದು ಸತ್ಯ. ಪುನಿತ್ ರವರ ಸಾವು ಇಷ್ಟು ಚಿಕ್ಕ ವಯಸ್ಸಿನಲ್ಲಿ ಏಕಾಯಿತು  ಎಂಬುದಕ್ಕೆ ಇದಕ್ಕಿಂತ ಬೆರೆ ಉದಾಹರಣೆ ಸೂಕ್ತವಲ್ಲ ಅಂತ ಅನಿಸುತ್ತದೆ.

  ಪುನೀತರ ಸಾವು ಈ ಸಮಾಜಕ್ಕೆ ಕಲಿಸಿದ್ದು ಮಾತ್ರ ಬಹಳಷ್ಟು. ನೈಜ ಸೇವೆ, ನಿಜವಾದ ದಾನ, ಪ್ರೀತಿಯ ಸತ್ಯತೆ, ನಿಜವಾದ ಹಣ-ಆಸ್ತಿ ಯಾವುದೆಂಬ ಕಲ್ಪನೆ ಮತ್ತು ಅದರ ಮಹತ್ವ. ಹೀಗೆ ಪುನೀತರು ಕೈಗೊಂಡಿದ್ದ ಮಾನವಿಯ ಕಾರ್ಯಗಳ ಶ್ರೇಷ್ಠತೆಯ ಪ್ರಭಾವ ಎಲ್ಲಾ ಧರ್ಮ, ವರ್ಗಗಳ ಜನರ ಮೇಲೆ ಬೀರಿದೆ. ಪರಿಣಾಮವಾಗಿ ಬಹುತೇಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳುತ್ತಿದ್ದಾರೆ.

 'ಯಾವ ಕಣ್ಣುಗಳನ್ನು ನೋಡಿದರೆ ಸ್ವಲ್ಪವೂ ಕಲ್ಮಶ ಕಾಣಿಸುತ್ತಿರಲಿಲ್ಲವೋ, ಯಾವ  ಕಣ್ಣುಗಳನ್ನು ನೋಡಿದರೆ ಅಕ್ಕಪಕ್ಕದಲ್ಲಿದ್ದಂತಹ ಹಲವರ ದುಃಖ ಮಾಯವಾಗಿಬಿಡುತ್ತಿತ್ತೋ! ಆ ನಗುವಿಗೆ ತಕ್ಕಹಾಗೆ ಅರಳುತ್ತಿದ್ದ ಆ ಕಣ್ಣುಗಳು ಇದೀಗ ನಾಲ್ಕು ಜನರ ಬಾಳಿಗೆ ಬೆಳಕು ನೀಡಿವೆ. ಪುನೀತರವರು ಸಾವಿನಲ್ಲೂ ಕೂಡಾ ಸಾರ್ಥಕತೆಯನ್ನು ಮೆರೆದು ಹೋದರು.  ಅದರ ಪರಿಣಾಮವಾಗಿ ಇಂದು ನೇತ್ರದಾನಿಗಳ ಸಂಖ್ಯೆ ಹೆಚ್ಚಾಗಿದೆ. ಒಟ್ಟಾರೆಯಾಗಿ ಈ ಸಮಾಜದಲ್ಲಿ ಒಂದು ಪಾಸಿಟಿವ್ ವೈಬ್ರೇಷನ್ ಬಹಳ ಆ್ಯಕ್ಟೀವ್ ಆಗಿ ಕ್ರಿಯೇಟ್ ಆಗಿದೆ.

ಅಪ್ಪು ಇದೀಗ ಭೂ ತಾಯಿಯ ಮಡಿಲು ಸೇರಿದ್ದಾರೆ, ನಮ್ಮೆಲ್ಲರನ್ನ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ, ಆದರೆ ಪ್ರತಿಯೊಬ್ಬರ ಹೃದಯ ಸಿಂಹಾಸನದಲ್ಲಿ ವಿರಾಜಮಾನನಾಗಿ ಕುಳಿತಿರುವ ಅಪ್ಪು ನೆನಪು ಮಾತ್ರ ಆ ಸೂರ್ಯ-ಚಂದ್ರರಿರುವಷ್ಟೂ ಶಾಶ್ವತ.

ಡಾ. ಜಗದೀಶ ಮಾನೆ
ಧಾರವಾಡ