ಬಡ ಕಂದಮ್ಮಗಳ ಬಾಳಿಗೆ ಮೃತ್ಯು ಮನೆ ಆಯ್ತಾ ಜಿಲ್ಲಾ ಆಸ್ಪತ್ರೆ

ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ 3 ತಿಂಗಳಲ್ಲಿ 41 ಹಸುಗೂಸುಗಳ ಸಾವು : ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ವಾ ಇಲ್ಲಿ

ಪಾರೇಶ ಭೋಸಲೆ

ಬೆಳಗಾವಿ : ರಾಜ್ಯದ 2ನೇ ರಾಜಧಾನಿ ಎಂದೇ ಕರೆಯಿಸಿಕೊಳ್ಳುವ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ 3 ತಿಂಗಳಲ್ಲಿ ಸುಮಾರು 41 ಹಸುಗೂಸಗಳು ಮೃತಪಟ್ಟಿರುವದು ದೊಡ್ಡ ದುರಂತ ಎಂದು ಹೇಳಲಾಗಿದೆ. ಇಲ್ಲಿ ಬಡ ಹಾಗೂ ಸಾಮಾನ್ಯ ಜನರು ಈ ಜಿಲ್ಲಾ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗುತ್ತಿದ್ದು, ಕಣ್ಣು ಬಿಟ್ಟು ಪ್ರಪಂಚ ನೋಡುವ ಮುಂಚೆ ಬಾರದ ಲೋಕ ಸೇರುತ್ತಿರುವ ಬಡವರ ಹಸುಗೂಸುಗಳ ಜೀವಕ್ಕೆ ಇಲ್ಲಿ ಬೆಲೆನೆ ಇಲ್ಲವಾ ಎನ್ನುವದು ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದೆ.

   ಹೌದು ಓದುಗರೆ... ಬೆಳಗಾವಿಯ ಬಿಮ್ಸ್ನಲ್ಲಿ ಮೆಡಿಕಲ್ ಏರ್ ಕಾಂಪ್ರೆಸರ್ ಕೈಕೊಟ್ಟ ಕಾರಣಕ್ಕೆ ಮಕ್ಕಳ ಸಾವು ಆರೋಪ ಕೇಳಿ ಬಂದಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಸುಮಾರು 41 ಕಂದಮ್ಮಗಳು ಅಸುನೀಗಿದ್ದು, ಇದಕ್ಕೆ ಕಾರಣ ಏನು ಎನ್ನುವ ಪ್ರಶ್ನೆಯು ಎಲ್ಲರಲ್ಲೂ ಮನೆ ಮಾಡಿದೆ. ಇಷ್ಟೆಲ್ಲ ಬಡ ಮಕ್ಕಳು ಮೃತಪಟ್ಟರೂ ಜಿಲ್ಲಾ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಹಾಗೂ ಮೇಲಾಧಿಕಾರಿಗಳು ಕಣ್ಮುಚ್ಚಿ ಕುಳಿತಿರುವದು ನಾಗರಿಕರ ಆಕ್ರೋಶಕ್ಕೆ ಗುರಿ ಮಾಡಿದೆ.

    ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಇದೇ ವರ್ಷ ಅಂದರೆ 2024ರ ಅಗಸ್ಟ್ ತಿಂಗಳಲ್ಲಿ 12 ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ 18 ಮತ್ತು ಅಕ್ಟೋಬರ್ 24ನೇ ತಾರೀಖಿನವರೆಗೆ 11 ಹೀಗೆ ಮೂರು ತಿಂಗಳಲ್ಲಿ ಒಟ್ಟು 41 ಬಡವರ ಕಂದಮ್ಮಗಳು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಣವನ್ನು ಕಳೆದುಕೊಂಡಿವೆ. ಹಾಗೀದ್ದರೆ ಇಲ್ಲಿ ಕೈಯಲ್ಲಿ ಕಾಸು ಇಲ್ಲದೆ ದಿನಗೂಲಿ ಮಾಡುವ ಬಡ ಸಾಮಾನ್ಯ ಜನರು ಸರಕಾರದ ಸೌಲಭ್ಯದೊಂದಿಗೆ ಉಚಿತ ಚಿಕಿತ್ಸೆ ಪಡೆಯಲು ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆಗಾಗಿ ದಾಖಲು ಆಗುವ ಹೆಣ್ಣು ಮಕ್ಕಳ ಕಂದಮ್ಮಗಳ ಜೀವಕ್ಕೆ ಬೆಲೆ ಇಲ್ಲವಾ ಎನ್ನುವ ಪ್ರಶ್ನೆ ಮೂಡತೊಡಗಿದೆ.  

    ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಹಸುಗೂಸುಗಳು ಐಸಿಯುನಲ್ಲಿ ಸಕಾಲಕ್ಕೆ ಆಕ್ಸಿಜನ್ ದೊರೆಯದೆ ದಾರುಣವಾಗಿ ಮೃತಪಟ್ಟಿವೆ ಎನ್ನುವ ಆರೋಪ ಕೇಳಿ ಬಂದಿದೆ. ಬಡವ ಬಲ್ಲಿದ ಹೆಣ್ಣು ಮಕ್ಕಳ ಹಸುಗೂಸುಗಳಿಗೆ ಜಿಲ್ಲಾ ಆಸ್ಪತ್ರೆಯು ಅಕ್ಷರಶಃ ನರಕದ ಮನೆಯಾಗುತ್ತಿದೆ ಎನ್ನುವ ಮಾತು ದಟ್ಟವಾಗಿ ಕೇಳಿಬರತೊಡಗಿದೆ. ಈ ಅಚ್ಚರಿಯ ಸಂಗತಿ ಹೊರಬರುತ್ತಿದ್ದಂತೆ ಕೆಲ ಹೆಣ್ಣು ಮಕ್ಕಳು ಹೆರಿಗೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಆಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಕೂಗು ಕೇಳತೊಡಗಿದೆ.

      ಕಳೆದ ಆಗಸ್ಟನಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಏರ್ ಕಂಪ್ರೆಸರ್ ಹಾಳಾಗಿ ಹೋಗಿದೆ. ಇಲ್ಲಿಯವರೆಗೂ ಏರ್ ಕಂಪ್ರೆಸರ್ ಬದಲಿಸಿಲ್ಲ. ಆಸ್ಪತ್ರೆಯ ಆಡಳಿತ ಯಂತ್ರವು ಕೀಳುಮಟ್ಟದ ಪೈಪ್ ಅಳವಡಿಸಿರುವುದು ನವಜಾತ ಶಿಶುಗಳ ಪಾಲಿಗೆ ಮಾರಕವಾಗಿ ಪರಿಣಮಿಸಿರುವುದು ಬಾಣಂತಿಯರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇಷ್ಠೇಲ್ಲಾ ಕಂದಮ್ಮಗಳು ಇಲ್ಲಿ ಅಸುನೀಗಿದರೂ ಇದರ ಕುರಿತು ಬೆಳಗಾವಿ ಜಿಲ್ಲಾಡಳಿತ ಆಗಲಿ ಅಥವಾ ಜಿಲ್ಲಾ ಆಸ್ಪತ್ರೆಯ ಮೇಲಾಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವದು ಬಡವರ ಬಾಳಿಗೆ ದೊಡ್ಡ ದುರಂತ ಎಂದು ಹೇಳಲಾಗುತ್ತಿದೆ.  

ಮಕ್ಕಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ ಡಾ. ಅಶೋಕ ಶೆಟ್ಟಿ :

    ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಿಂದ ನವಜಾತ ಶಿಶುಗಳು ಮೃತಪಟ್ಟಿದ್ದು ನಿಜಾ. ಆದರೆ ಇದಕ್ಕೆ ಆಕ್ಸಿಜನ್ ಕೊರತೆಯಿಂದ ಅಲ್ಲಾ ಎಂದು ಬಿಮ್ಸ್ ನಿರ್ದೇಶಕ ಡಾ. ಅಶೋಕ ಶೆಟ್ಟಿ ಹೇಳಿದರು.

    ನಗರದ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿಯಾಗಿರುವ ಕಂಪ್ರೆಸರ್ ಪದೇ ಪದೇ ಹಾಳಾಗುತ್ತಿದೆ. ಕಳೆದ ಅ.16ರಂದು ದುರಸ್ತಿ ಮಾಡಲು ಒಂದು ಕಂಪನಿಗೆ ಆದೇಶ ಕೊಟ್ಟಿದ್ದೇವೆ. ನಮ್ಮಲ್ಲಿರುವ ಆಕ್ಷಿಜನ್ ಟ್ಯಾಂಕ್ ಎಂಸಿಎಚ್ ಬ್ಲಾಕ್ ಪಕ್ಕದಲ್ಲಿರುವುದರಿಂದ ಆಕ್ಸಿಜನ್ ಸಮಸ್ಯೆ ಇಲ್ಲ ಎಂದರು. ನವಜಾತ ಶಿಶುಗಳಿಗೆ ಎಷ್ಟು ಆಕ್ಸಿಜನ್ ಬೇಕೋ ಅಷ್ಟು ಆಕ್ಸಿಜನ್ ಸರಬರಾಜು ಆಗುತ್ತಿದೆ. ನಮಲ್ಲಿ ನುರಿತ ತಜ್ಞರಿದ್ದಾರೆ. ಸುಸಜ್ಜಿತವಾಗಿ ಚಿಕಿತ್ಸೆ ಕೊಡುತ್ತಿದ್ದಾರೆ ಎಂದರು. ಹೆಚ್ವುವರಿ ಕಂಪ್ರೆಸರ್ ಕಳೆದ ಮೂರು ತಿಂಗಳ ಹಿಂದೆ ಹಾಳಾಗಿತ್ತು. ಅದನ್ನು ದುರಸ್ತಿ ಮಾಡಿದ್ದೇವೆ. ಈಗ ಮತ್ತೇ ಕಳೆದ ಕೆಲವು ದಿನಗ ಹಿಂದೆ ಹಾಳಾಗಿದೆ. ಅದನ್ನು ದುರಸ್ತಿ ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದರು.