ನಾಮಪತ್ರ ಸಲ್ಲಿಸಿದ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು 25: ರಾಜ್ಯದಲ್ಲಿ ಉಪ ಚುನಾವಣೆ ಅಖಾಡ ರಂಗೇರಿದೆ. ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಇಂದು ರಾಮನಗರ ಜಿಲ್ಲೆ ಚನ್ನಪಟ್ಟಣದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಎನ್ ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಸಂಸದ ಬಿ. ರಾಘವೇಂದ್ರ ಹಾಗೂ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನಾ ಕೆಂಗಲ್ ಅಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸುವ ಬೃಹತ್ ಶಕ್ತಿ ಪ್ರದರ್ಶನ ನಡೆಸಿದರು. ಪಟ್ಟಣದ ಶೇರು ಹೋಟೆಲ್ ವೃತ್ತದಿಂದ ಸಾತನೂರು ವೃತ್ತದ ಬಳಿ ಇರುವ ಚುನಾವಣಾ ಅಧಿಕಾರಿ ಕಚೇರಿ ಕಚೇರಿಯವರೆಗೂ ಸುಮಾರು ಅರ್ಧ ಕಿಲೋ ಮೀಟರ್ ದೂರ ನಡೆದ ರೋಡ್ ಶೋ ನಲ್ಲಿ ವಿಪಕ್ಷ ನಾಯಕ ಆರ್. ಅಶೋಕ್. ಸದಾನಂದಗೌಡ, ಅಶ್ವತ್ಥ ನಾರಾಯಣ ಮತ್ತಿತರ ನಾಯಕರು ಪಾಲ್ಗೊಂಡರು.

ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನನಗೆ ಅನಿರೀಕ್ಷಿತವಾಗಿ ಟಿಕೆಟ್ ಸಿಕ್ಕಿದೆ. ಆದರೆ, ಗೆಲ್ಲುವ ವಿಶ್ವಾಸದಿಂದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮನ್ನು ಆಯ್ಕೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ದೇವೇಗೌಡ, ಕುಮಾರಸ್ವಾಮಿ ಅವರು ಕ್ಷೇತ್ರದ ಅಭಿವೃದ್ಧಿ ಮಾಡಿದ್ದು, ಅವರು ಮಾಡಿರುವ ಕೆಲಸಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ತಿಳಿಸಿದರು.