ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ್ದ ವ್ಯಕ್ತಿ ಉಪ ಮುಖ್ಯಮಂತ್ರಿ; ಸಿದ್ದರಾಮಯ್ಯ ಲೇವಡಿ

ಬೆಳಗಾವಿ, ಆಗಸ್ಟ್   27  ವಿಧಾನಸಭೆಯಲ್ಲಿ  ಕುಳಿತು ಕೊಂಡು  ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ  ವ್ಯಕ್ತಿಯನ್ನು ರಾಜ್ಯದ  ಉಪ ಮುಖ್ಯಮಂತ್ರಿಯನ್ನಾಗಿ  ಮಾಡಿರುವ  ಬಿಜೆಪಿ ನಾಯಕರುಗಳಿಗೆ  ಮಾನ,  ಮಾರ್ಯಾದೆ ಇದೆಯೇ ..? ಎಂದು  ಖಾರವಾಗಿ ಪ್ರಶ್ನಿಸಿರುವ  ಮಾಜಿ ಮುಖ್ಯಮಂತ್ರಿ  ಸಿದ್ಧರಾಮಯ್ಯ   ಇಂತಹವರನ್ನು ಒಳಗೊಂಡಿರುವ  ಈ  ಸರ್ಕಾರದಿಂದ  ರಾಜ್ಯದ ಜನ ಇನ್ನೇನು ನಿರೀಕ್ಷಿಸಲು ಸಾಧ್ಯ?  ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಪ್ರವಾಸದಲ್ಲಿರುವ ಅವರು  ಅಥಣಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.  ಕಾಂಗ್ರೆಸ್ - ಜೆಡಿಎಸ್   ಮೈತ್ರಿ ಸರ್ಕಾರ   ಪತನಗೊಳ್ಳಲು  ಕಾರಣವಾಗಿ,     ರಾಜೀನಾಮೆ ನೀಡಿ ಅನರ್ಹಗೊಂಡಿರುವ ಕಾಂಗ್ರೆಸ್   ಶಾಸಕರಿಗೂ  ತಕ್ಕ ಪಾಠ ಕಲಿಸುತ್ತೇವೆ  ಎಂದು ಅವರು ಎಚ್ಚರಿಕೆ ನೀಡಿದರು.  ವಾಮಮಾರ್ಗದಿಂದ   ಅಧಿಕಾರಕ್ಕೆ ಬಂದಿರುವ  ರಾಜ್ಯ   ಬಿಜೆಪಿ ಸರ್ಕಾರಕ್ಕೆ ಹೆಚ್ಚು ದಿನ ಬದುಕುವುದಿಲ್ಲ. ಈಗಾಗಲೇ ಸಾಕಷ್ಟು ಬಿಜೆಪಿ  ಶಾಸಕರಿಗೆ ಅಸಮಾಧಾನ ಶುರುವಾಗಿದೆ  ಎಂದು ಆಡಳಿತಾರೂಢ ಪಕ್ಷದ  ಬಿಕ್ಕಟ್ಟನ್ನು ಪ್ರಸ್ತಾಪಿಸಿದರು.  ಬಿಜೆಪಿ ಶಾಸಕ  ಉಮೇಶ್ ಕತ್ತಿ ಅವರನ್ನು ಭೇಟಿಯಾಗಲು  ನಾನು ಕರೆ ಮಾಡಿಲ್ಲ. ಕಣ್ಣು ಆಪರೇಷನ್ ಒಳಗಾಗಿದ್ದ  ತಮ್ಮ  ಆರೋಗ್ಯ ವಿಚಾರಿಸಲು ಉಮೇಶ್ ಕತ್ತಿ ಕರೆ ಮಾಡಿದ್ದರು. ಆಗ  ಬನ್ನಿ  ಮಾತನಾಡೋಣ ಎಂದು ಹೇಳಿದ್ದೆ. ಆದರೆ,   ಅವರು  ಬರಲಿಲ್ಲ.   ಹಾಗಾಗಿ  ಉಮೇಶ್ ಕತ್ತಿ ತಮಗೆ  ದೂರವಾಣಿ ಕರೆ ಮಾಡಿರುವುದಕ್ಕೆ  ರಾಜಕೀಯ ಬಣ್ಣ  ಬೇಡ  ಸಿದ್ದರಾಮಯ್ಯ ಹೇಳಿದರು. ಮಾಜಿ ಸಚಿವ ಡಿಕೆ ಶಿವಕುಮಾರ್ ಮತ್ತು  ತಮ್ಮ   ನಡುವೆ ಯಾವುದೇ  ಭಿನ್ನಾಭಿಪ್ರಾಯ ಅಥವಾ  ಒಡಕಿಲ್ಲ. ನನಗೆ ಎಲ್ಲರೂ ಸ್ನೇಹಿತರ   ನಾವೆಲ್ಲರೂ ಕಾಂಗ್ರೆಸ್ಸಿಗರು,  ಒಗ್ಗಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.   ಯಡಿಯೂರಪ್ಪ  ಅವರಿಗೆ  ಮತ್ತೊಮ್ಮೆ ಮುಖ್ಯಮಂತ್ರಿಯಾಗ ಬೇಕು ಎಂಬ ಅವರ  ಆಸೆ ಈಡೇರಿತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರು ಕೇವಲ  ನೆಪಮಾತ್ರದ  ಮುಖ್ಯಮಂತ್ರಿ. ಸರ್ಕಾರ ಮೇಲಿನ  ಸಂಪೂರ್ಣ  ನಿಯಂತ್ರಣ   ಬಿಜೆಪಿ ವರಿಷ್ಠರು ಹೊಂದಿದ್ದಾರೆ  ಎಂದು  ಲೇವಡಿ ಮಾಡಿರುವ ಸಿದ್ದರಾಮಯ್ಯ,   ಯಡಿಯೂರಪ್ಪ  ಅವರಿಗಾಗುತ್ತಿರುವ  ಅಪಮಾನ, ಅನ್ಯಾಯದ ಬಗ್ಗೆ ಅನುಕಂಪ ವ್ಯಕ್ತಪಡಿಸಿದರು. ಬಿಎಸ್ ಯಡಿಯೂರಪ್ಪ   ಅಧಿಕಾರ ವಹಿಸಿಕೊಂಡ  ಒಂದು ತಿಂಗಳ ಬಳಿಕ ಈಗ   ಸಚಿವ ಸಂಪುಟ ಹಾಗೂ ಖಾತೆಗಳು  ಹಂಚಿಕೆಯಾಗಿದೆ. ಆತುರದಲ್ಲಿ ಸರ್ಕಾರ ರಚನೆಮಾಡಿದೆ ಎಂದು ಟೀಕಿಸಿದರು.  ಸರ್ಕಾರದಲ್ಲಿ  ಯಡಿಯೂರಪ್ಪ   ಅವರ  ಮಾತಿಗಿಂತ ಆರ್ಎಸ್ಎಸ್ ನಾಯಕರ ಮಾತಿಗೆ  ಹೆಚ್ಚಿನ ಮಾನ್ಯತೆ ಹೊಂದಿದೆ. ಇದೇ ಕಾರಣಕ್ಕೆ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ,   ಅಶ್ವತ್ಧ ನಾರಾಯಣ ರಂತಹ  ಶಾಸಕರಿಗೆ  ಲಾಭಾದಾಯಕ ಹುದ್ದೆಗಳುಲಭಿಸಿವೆ. ಮುಖ್ಯಮಂತ್ರಿ  ಯಡಿಯೂರಪ್ಪ  ಅವರು ಸೂಚಿಸಿದ ನಾಯಕರಿಗೆ  ಬಿಜೆಪಿ ವರಿಷ್ಠರು  ಯಾವುದೇ ಪ್ರಮುಖ ಖಾತೆಯನ್ನು ನೀಡಿಲ್ಲ. ಅಲ್ಲದೇ  ವಿಧಾನಸಭೆ ಚುನಾವಣೆಯಲ್ಲಿ  ಸೋತಿರುವ  ಲಕ್ಷ್ಮಣ ಸವದಿ ಸಂಪುಟಕ್ಕೆ ಸೇರಿಸಿಕೊಂಡರೆ ಭಿನ್ನಮತ ಹೆಚ್ಚಾಗುತ್ತದೆ ಎಂಬ ಯಡಿಯೂರಪ್ಪ  ಮಾತಿಗೂ ಮನ್ನಣೆ ಸಿಕ್ಕಿಲ್ಲ ಎಂದರು. ಸರ್ಕಾರವನ್ನು ನಿಯಂತ್ರಣದಲ್ಲಿಡಲೇ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ    ಹಿಂದೂತ್ವವಾದಿ   ನಳಿನ್ ಕುಮಾರ್ ಕುಮಾರ್ ನೇಮಿಸಲಾಗಿದೆ.  ಯಡಿಯೂರಪ್ಪ ಅಧಿಕಾರದ ಮೇಲೆ  ಹಿಡಿತ ಸಾಧಿಸಲು  ಮೂವರು ಡಿಸಿಎಂಗಳನ್ನು ನೇಮಕ ಮಾಡಲಾಗಿದೆ. ಈ ಮೂಲಕ ಜನಪ್ರತಿನಿಧಿಗಳ ಧ್ವನಿಯನ್ನು ಉಡುಗಿಸುವ ಕೆಲಸವನ್ನು ಮಾಡಲಾಗಿದೆ. ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕ  ಎಂದು ಸಿದ್ದರಾಮಯ್ಯ  ದೂರಿದರು  ಬಿಜೆಪಿ ಸರ್ಕಾರದಲ್ಲಿ ಮೂಡಿರುವ ಭಿನ್ನಮತ ಸರಿದೂಗಿಸುವುದು ಸುಲಭವಲ್ಲ ಸಚಿವರ ನೇಮಕಕ್ಕೆ 26 ದಿನ,  ಖಾತೆ ಹಂಚಿಕೆಗೆ 6 ದಿನ ಸಮಯ ತೆಗೆದುಕೊಂಡ  ಯಡಿಯೂರಪ್ಪ  ಸರ್ಕಾರ, ಅಸಮಾಧಾನಿತ ಸಚಿವರ ಓಲೈಕೆಗೆ ಎಷ್ಟುದಿನ ತೆಗೆದುಕೊಳ್ಳಲಿದ್ದಾರೆ.  ಎಲ್ಲದರ ನಡುವೆ ರಾಜ್ಯದ ಆಡಳಿತ ಹೇಗೆ ನಡೆಯಲಿದೆ  ಎಂದು ಪ್ರಶ್ನಿಸಿ  ಇಂತಹ ಸರ್ಕಾರ ಇರುವುದಕ್ಕಿಂತ ಚುನಾವಣೆಗೆ ಹೋಗುವುದು ಒಳಿತು ಎಂದು ಹೇಳಿದ್ದಾರೆ.