ನವದೆಹಲಿ, ಫೆ 3 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶ ಈಗಾಗಲೇ ಲೋಕಪಾಲವನ್ನು ಪಡೆದಿದ್ದರೆ, ರಾಷ್ಟ್ರ ರಾಜಧಾನಿಯ ಜನರು ಇನ್ನೂ ಲೋಕಪಾಲ್‌ಗಾಗಿ ಕಾಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2013ರಲ್ಲಿ ಪಕ್ಷ ಆರಂಭಗೊಳ್ಳುವಾಗ ಈ ಪಕ್ಷದ ಪ್ರಮುಖ ಘೋಷಣೆಯೂ ಲೋಕಪಾಲ್ ಆಗಿತ್ತು. ಆದರೂ ಇದುವರೆಗೆ ದೆಹಲಿಯಲ್ಲಿ ಲೋಕಪಾಲ ಜಾರಿಗೊಳಿಸಲು ಅದಕ್ಕೆ ಸಾಧ್ಯವಾಗಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಮೊದಲ ಬಾರಿಗೆ ರಾಷ್ಟ್ರಕ್ಕೆ ಲೋಕಪಾಲ್ ಸಿಕ್ಕಿದೆ. ದೇಶದ ಜನರಿಗೆ ಲೋಕಪಾಲ ದೊರೆತರೂ ದೆಹಲಿಯ ಜನರು ಇನ್ನೂ ಅದಕ್ಕಾಗಿ ಕಾಯುತ್ತಿದ್ದಾರೆ. ಅದಕ್ಕಾಗಿ ಎಷ್ಟು ದೊಡ್ಡ ಆಂದೋಲನ, ಪ್ರತಿಭಟನೆ ನಡೆಯಿತು. ಈಗ ಅವರೆಲ್ಲರಿಗೂ ಏನಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೆಸರು ಪ್ರಸ್ತಾಪಿಸದೆ ಕರ್ಕಾರ್ಡುಮಾದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರದಲ್ಲಿ ಪ್ರಶ್ನಿಸಿದರು.
ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಜಾರಿಗೆ ತರಲು ದೆಹಲಿ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ದೆಹಲಿಯಲ್ಲಿ ಈ ಸರ್ಕಾರ ಅಧಿಕಾರದಲ್ಲಿರುವವರೆಗೂ ಅವರು ಕಲ್ಯಾಣ ಕಾರ್ಯಗಳಿಗೆ ಅಡ್ಡಿಪಡಿಸುವುದನ್ನು ಮುಂದುವರಿಯಲಿದೆ. ರಾಜಕೀಯ ಮಾಡುವುದನ್ನು ಬಿಟ್ಟರೆ ಅವರಿಗೆ ಏನೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯನ್ನು ಉಲ್ಲೇಖಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೆಹಲಿಯ ಎಲ್ಲಾ ಏಳು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ದೆಹಲಿಯ ಮತಗಳು ದೇಶವನ್ನು ಉಳಿಸಿಕೊಳ್ಳಲು ಸಹಾಯ ಮಾಡಿದೆ. ಈಗ ಅವರ ಮತವು ರಾಷ್ಟ್ರೀಯ ರಾಜಧಾನಿಯನ್ನು ಆಧುನೀಕರಣಗೊಳಿಸಲು, ಬದಲಾಯಿಸಲು, ಸುರಕ್ಷಿತವಾಗಿಸಲು, ಜನರ ಜೀವನವನ್ನು ಸುಲಭಗೊಳಿಸಲು ಸಹಾಯ ಮಾಡಲಿದೆ ಎಂದು ಪ್ರಧಾನಿ ಹೇಳಿದರು.