ಸ್ನೇಹ ಸ್ಪರ್ಶ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಮಧು ಸೂದನ್ ಟಿ ಅವರು ನಿರ್ಮಿಸಿರುವ `ನಮೋ` ಚಿತ್ರ ಈ ವಾರ (ಜ. 31) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪುಟ್ಟರಾಜ್ ಸ್ವಾಮಿ ರಚನೆ ಹಾಗೂ ನಿರ್ದೇಶನವಿರುವ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ಜನರ ಮನಸು ಗೆದ್ದಿವೆ. ಯುವ ಪ್ರತಿಭೆಗಳ ಈ ನಮೋ ಹೊಸಬರಿಂದ ಕೂಡಿದ್ದು, ಹೊಸಬರ ಸಿನಿಮಾ ಅಲ್ಲ ಎಂದೇ ಹೇಳಬಹುದು. ಯಾಕೆ ಅಂತಿರಾ! ಈ ಚಿತ್ರದಲ್ಲಿ ಹೊಸ ಕಲಾವಿದರು ನಟಿಸಿದ್ದರೂ, ಅವರಿಗೆ ಚಿತ್ರೀರಂಗ ಹೊಸದಲ್ಲ. ಜತೆಗೆ ನಿರ್ದೇಶಕರು, ನಿರ್ಮಾಪಕರು ಹೊಸಬರು ಆಗಿರಬಹುದು. ಆದರೆ, ಇದಕ್ಕೆ ಕೆಲಸ ಮಾಡಿದ ತಂತ್ರಜ್ಞರು ಈಗಾಗಲೇ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದಾರೆ.
ಹೌದು 'ಮಫ್ತಿ', 'ಉಗ್ರಂ' ಮುಂತಾದ ಚಿತ್ರಗಳಿಗೆ ಸಾಹಿತ್ಯ ಬರೆದಿದ್ದ ಸಾಯಿ ಸರ್ವೇಶ್ ಈ ಚಿತ್ರದ ಆರು ಹಾಡುಗಳಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಹಾಗೆಯೇ 'ರಣವಿಕ್ರಂ' 'ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ' ಮುಂತಾದ ಚಿತ್ರಗಳಿಗೆ ಸಹ ಕ್ಯಾಮೆರಾಮೆನ್ ಆಗಿ ಕೆಲಸ ಮಾಡಿದ ಕಾಲಿವುಡ್ನ ಶಕ್ತಿ ಶೇಖರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡಿದ ಸುರೇಶ್.ಡಿ.ಹೆಚ್. ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಗೋವಾದ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿರುವ ನಮೋಗೆ 'ಕತ್ತಲಿನಿಂದ ಬೆಳಕಿನಡೆಗೆ' ಎಂಬುದು ಅರ್ಥ ಬರುತ್ತದೆ. ಸಕಾರಾತ್ಮಕ ಶಕ್ತಿ ಎನ್ನಲೂ ಬಹುದು. ಸಾರ್ವತ್ರಿಕ ವಿಷಯ ಮತ್ತು ಸಾಮಾಜಿಕ ಕಳಕಳಿವುಳ್ಳ ಕಥೆ ಇದರಲ್ಲಿದ್ದು, ಚಿತ್ರವನ್ನು ಮೊದಲಬಾರಿ ನಿದರ್ೇಶನ ಮಾಡಿದ್ದಾರೆ ಪುಟ್ಟರಾಜ್ ಸ್ವಾಮಿ. ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಮಧು ಸೂದನ್ ಟಿ. ಇವರು ಮೂಲತಃ ಡ್ಯಾನ್ಸ್ ಮಾಸ್ಟರ್ ಆಗಿದ್ದು, ಬ್ಯುಸಿನೆಸ್ ಮಾಡಿಕೊಂಡು ಇದ್ದಾರೆ. ಮೊದಲಿನಿಂದಲೂ ಸಿನಿಮಾ ನಂಟು ಹೊಂದಿರುವ ಮಧು ಸೂದನ್ ಪ್ರೀತಿಯಿಂದ ಈ ಸಿನಿಮಾ ಮಾಡಿದ್ದಾರೆ.
ಇನ್ನು ಚಿತ್ರದಲ್ಲಿ ಹೊಸಬರು ಇದ್ದಾರೆ. ಆದರೇ, ಎಲ್ಲರಿಗೂ ಸಿನಿಮಾ ನಂಟಿದೆ. ಕೆಲವೊಬ್ಬರು ಡ್ಯಾನ್ಸ್ ನಿಂದ ಬಂದರೆ ಇನ್ನು ಕೆಲವರಿಗೆ ಥಿಯೇಟರ್ ನಂಟಿದೆ. ಸಿನಿಮಾ ಕಥೆ ಬಗ್ಗೆ ಹೇಳುವುದಾದರೆ, ಯುವಕರು ದಿಢೀರನೆ ಶ್ರೀಮಂತರಾಗಲು ತಪ್ಪು ದಾರಿಗೆ ಹೋಗುತ್ತಾರೆ. ಮುಂದೆ ತಮ್ಮ ತಪ್ಪಿನ ಅರಿವಾಗಿ ಒಳ್ಳೆ ದಾರಿಗೆ ಹೋಗುವುದನ್ನು ಪಾಸಿಟೀವ್ ಆಗಿ ಕಾಣುತ್ತದೆ. ಇದರಲ್ಲಿ ಕಥೆಯೇ ಹೀರೋ ಆಗಿದೆ. ಚಿತ್ರದಲ್ಲಿ ಮುಖ್ಯ ಪಾತ್ರಧಾರಿಗಳಾಗಿ ನಾಲ್ಕು ಜನ ಕಾಣಿಸಿಕೊಂಡಿದ್ದಾರೆ. ಚಪಲ ಹುಡುಗನಾಗಿ ಮಹೇಶ್, ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡುವ ಹಾಸನದ ಮಣಿ ಕಲರ್ಫುಲ್ ಜಗತ್ತನ್ನು ನೋಡುವ ಸಲುವಾಗಿ ಬೆಂಗಳೂರಿಗೆ ಬಂದು ಕಷ್ಟದಲ್ಲಿ ಸಿಲುಕುವ ಪಾತ್ರ, ಶ್ರೀಮಂತರ ಮಗನಾಗಿ ಭೈರವ, ವಾಹಿನಿ ನಿರೂಪಕಿಯಾಗಿ ರಶ್ಮಿತಾ, ಮೀಟರ್ ಬಡ್ಡಿಯವನಾಗಿ ರೇಣು ಹಾಗೂ ನಿರ್ದೇಶಕರ ಪಾತ್ರವನ್ನು ಗೌಪ್ಯವಾಗಿಟ್ಟಿದ್ದಾರೆ. ಉಳಿದಂತೆ ಚಿತ್ರಕ್ಕೆ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಹಾಗೂ ಮುನಿರಾಜು, ಜಗನ್, ರಾಜು ಅವರ ನೃತ್ಯ ನಿರ್ದೇಶನವಿದೆ. ತಾರಾಬಳಗದಲ್ಲಿ ಭೈರವ್, ಮಣಿಕಂಠ, ಮಹೇಶ್, ಪುಟ್ತರಾಜ್ ಸ್ವಾಮಿ, ಡ್ಯಾನಿ, ರಶ್ಮಿಕ, ರಾಮ್ ಶರ್ಮ ಮುಂತಾದವರಿದ್ದಾರೆ.