ೀರಭದ್ರಸ್ವಾಮಿ ಸಾಮೂಹಿಕ ಗುಗ್ಗಳ ಮಹೋತ್ಸವ


ಧಾರವಾಡ, 24: ಒಂದೆಡೆ ನಿರಂತರ ನುಡಿಸುವ ಸಂಬಾಳ ವಾದನ, ಮತ್ತೊಂದೆಡೆ ಕರಡಿಮಜಲಿನ ಸದ್ದು, ಇನ್ನೊಂದೆಡೆ ವೀರಗಾಸೆಯನ್ನು ಧರಿಸಿದ್ದ ಪುರವಂತರ ಒಡಪುಗಳ ಧ್ವನಿ, ಜೊತೆಗೆ ಭಕ್ತಗಣದ ಜಯಘೋಷದ ನಾಮಸ್ಮರಣೆ...ಈ ಭಾವುಕ ಸನ್ನಿವೇಶ ನಿಮರ್ಾಣವಾದದ್ದು ಸಮೀಪದ ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕ್ಷೇತ್ರನಾಥ ವೀರಭದ್ರಸ್ವಾಮಿಯ ದೇವಾಲಯದಲ್ಲಿ. 

ಶುಕ್ರವಾರ ನ.23ರಂದು ಗೌರಿಹುಣ್ಣಿಮೆಯ ಪರ್ವಕಾಲದಲ್ಲಿ ಸಮಸ್ತ ಭಕ್ತಗಣದ ಸೇವೆಗಳೊಂದಿಗೆ ವಿಶಿಷ್ಟವಾಗಿ ಜರುಗಿದ ವೀರಭದ್ರಸ್ವಾಮಿಯ ಸಾಮೂಹಿಕ ಗುಗ್ಗಳ ಮಹೋತ್ಸವವು ಭಕ್ತರ ಭಕ್ತಿಯ ಸೇವೆಗಳಲ್ಲಿ ಯಶಸ್ವಿಯಾಯಿತು.  

ವೀರಭದ್ರಸ್ವಾಮಿಯ ದೇವಾಲಯದ 5ನೆಯ ವಾಷರ್ಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಈ ಗುಗ್ಗಳ ಮಹೋತ್ಸವವನ್ನು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು 4 ಗುಗ್ಗಳ ಕೊಡಗಳಿಗೆ ಜ್ಯೋತಿ ಪ್ರಜ್ವಲನಗೊಳಿಸಿ ಉದ್ಘಾಟಿಸಿದರು. 

ಹಿರಿಯ ಪುರವಂತ ಜನಪದ ಕಲಾವಿದರಾದ ಮರೇವಾಡ ಗ್ರಾಮದ ಬಸವಂತಪ್ಪ ಕಂಬಾರ,  ಕೆಲಗೇರಿಯ ಮಹಾದೇವಪ್ಪ ಸಾವಕ್ಕನವರ, ಕರಡಿಗುಡ್ಡದ ಮಡಿವಾಳಪ್ಪ ಕುರುವಿನಕೊಪ್ಪ, ತಡಕೋಡದ ಮಹಾರುದ್ರಪ್ಪ ಬಳಿಗಾರ, ಫಕ್ಕೀರಪ್ಪ ನರಗುಂದ, ಶಿವಪ್ಪ ಕುಂಬಾರ, ದೇವೇಂದ್ರಪ್ಪ ಬಡಿಗೇರ ಅವರು ವೀರಭದ್ರಸ್ವಾಮಿಯ ಒಡಪುಗಳನ್ನು ಹೇಳಿ ಗುಗ್ಗಳ ಮಹೋತ್ಸವಕ್ಕೆ ಕಳೆತುಂಬಿದರು. ಶರಣಪ್ಪ ಕಂಬಾರ, ನಿಂಗಪ್ಪ ಕಮ್ಮಾರ, ಶಿವಲಿಂಗಪ್ಪ ಉಂಡೋಡಿ, ಮಲ್ಲಪ್ಪ ಸವದಿ ಅವರು ಸಂಬಾಳ ನುಡಿಸಿ ಸಾತನೀಡಿದರು.

ಪ್ರಾತಃಕಾಲದಲ್ಲಿ ವೀರಭದ್ರಸ್ವಾಮಿಯ ಶಿಲಾವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ಅಷ್ಟೋತ್ತರ ಶತನಾಮಾವಳಿ, ಅಲಂಕಾರಪೂಜೆ, ಮಹಾಮಂಗಳಾರತಿ ಮುಂತಾದ ಕೈಂಕರ್ಯಗಳು ವೈದಿಕರಾದ ಶಿವಾನಂದಸ್ವಾಮಿ ಹಿರೇಮಠ ಹಾಗೂ ಸೋಮಲಿಂಗಶಾಸ್ತ್ರಿ ಗುಡ್ಡದಮಠ ಅವರಿಂದ ಜರುಗಿದವು. 

ಶಸ್ತ್ರಸೇವೆ : ತನ್ನ ಗಲ್ಲದಲ್ಲಿ ತಾಮ್ರದ ಡಬ್ಬಣದ ಶಸ್ತ್ರಹಾಕಿಕೊಂಡು 2001 ಫೂಟು ದಪ್ಪನೆಯ ನೂಲಿನ ದಾರವನ್ನು ಪೋಣಿಸುವ ಮೂಲಕ ವೀರಭದ್ರಸ್ವಾಮಿಯ ಭಕ್ತ ಈರಯ್ಯ ಹಿರೇಮಠ ನೆರೆದ ಭಕ್ತರ ಗಮನಸೆಳೆದರು. ನಾಲಿಗೆ, ಗಲ್ಲಕ್ಕೆ ಹಾಗೂ ಕೈಗಳಿಗೆ ಶಸ್ತ್ರಹಾಕಿಕೊಂಡ ಭಕ್ತರು ತಮ್ಮ ಶಸ್ತ್ರಸೇವೆ ಸಲ್ಲಿಸಿದರು. 

ಅಮ್ಮಿನಬಾವಿ ಗ್ರಾಮದ ಭಕ್ತ ಸಮೂಹದ ಭಕ್ತಿಯ ದಾಸೋಹ ಸೇವೆಯಲ್ಲಿ ಗೋದಿಹುಗ್ಗಿ ಪ್ರಸಾದದ ಅನ್ನಸಂತರ್ಪಣೆ ವಿಶೇಷವಾಗಿ ನಡೆಯಿತು. ಹುಬ್ಬಳ್ಳಿ-ಧಾರವಾಡ ಅವಳಿನಗರ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳ ಭಕ್ತ ಸಮೂಹ ಈ ಗುಗ್ಗಳ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.