ಮೈಸೂರು, ನ. 27: ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂ.ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡ ಘಟನೆ ಹುಣಸೂರು ತಾಲೂಕಿನ ಮನುಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಬುಧವಾರ ನಡೆದಿದೆ.
ಎಂ.ಡಿ.ಸಿ.ಸಿ.ಬ್ಯಾಂಕ್ ನ ಇಬ್ಬರು ನೌಕರರು ಬೊಲೆರೋ ವಾಹನದಲ್ಲಿ 3 ಚೀಲದಲ್ಲಿದ್ದ ಎರಡು ಕೋಟಿ ಹಣವನ್ನು ಪಿರಿಯಾಪಟ್ಟಣ ಬ್ಯಾಂಕ್ ಗೆ ಸಾಗಿಸುತ್ತಿದ್ದರು. ಮನುಗನಹಳ್ಳಿ ಚೆಕ್ ಪೋಸ್ಟ್ ಬಳಿ ಚುನಾವಣಾಧಿಕಾರಿಗಳು ವಾಹನವನ್ನು ತಪಾಸಣೆ ನಡೆಸಿದ ವೇಳೆ ಸೂಕ್ತ ದಾಖಲೆಗಳಿಲ್ಲದ ಹಣ ಕಂಡು ಬಂದಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಪಿರಿಯಾಪಟ್ಟಣ ಬ್ಯಾಂಕಿಗೆ ಸಾಗಿಸುತ್ತಿರುವುದಾಗಿ ತಿಳಿಸಿದರಾದರೂ ಹಣ ಸಾಗಿಸುವ ಮುನ್ನ ಬ್ಯಾಂಕ್ ಅಧಿಕಾರಿಗಳು ಚುನಾವಣಾಧಿಕಾರಿಗಳ ಅನುಮತಿ ಪಡೆದಿಲಿಲ್ಲ. ಅಲ್ಲದೆ ಯಾವುದೇ ಭದ್ರತೆಯಿಲ್ಲದೆ ಇಷ್ಟೊಂದು ಮೊತ್ತದ ಹಣ ಸಾಗಾಟ ಮಾಡಲಾಗುತ್ತಿತ್ತು. ಹಣವನ್ನು ಚೀಲದಲ್ಲಿ ಸಾಗಿಸುವ ಅವಶ್ಯಕತೆ ಏನು ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದ್ದರಿಂದ ಚುನಾವಣಾಧಿಕಾರಿಗಳು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಈ ವಾಹನದಲ್ಲಿ ಚಾಲಕ ಸೇರಿದಂತೆ ನಾಲ್ಕುಮಂದಿ ಇದ್ದರು. ಸೂಕ್ತ ದಾಖಲೆಗಳಿಲ್ಲದೆ ಹಣ ಸಾಗಿಸುತ್ತಿದ್ದ ಕುರಿತು ವಿವರ ನೀಡುವಂತೆ ಎಂ.ಡಿ.ಸಿ.ಸಿ. ಬ್ಯಾಂಕ್ ನ ಇಬ್ಬರು ನೌಕರರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ.