ಬೆಂಗಳೂರು, ಡಿ. 1-ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಸಕ್ತ ಸಂದರ್ಭದಲ್ಲಿ ಹದಿನೈದು ಸ್ಥಾನಗಳನ್ನು ಗೆಲ್ಲಲೇಬೇಕಿದೆ. ಫಲಿತಾಂಶದ ಬಳಿಕ ಮುಂದಿನ ಭವಿಷ್ಯದ ಬಗ್ಗೆ ತಾವು ಈಗಲೇ ಏನೂ ಹೇಳಲು ಆಗದು. ಆದರೂ ಡಿ 9 ರಂದು ಸಿಹಿಸುದ್ದಿ ಕೊಡುತ್ತೇವೆ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್ ಸೇರಿ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದೆ. ನಿಜವಾಗಲೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಮಹಾರಾಷ್ಟ್ರದಲ್ಲಿ ಮೈತ್ರಿಗೆ ಮನಸಿರಲಿಲ್ಲ. ಆದರೆ ಬಿಜೆಪಿಯನ್ನು ದೂರಿವಿಡಲು, ಫ್ಯಾಸಿಸ್ಟ್ ಧೋರಣೆಯನ್ನು ಮಟ್ಟಹಾಕಲು, ಸಂವಿಧಾನ ಉಳಿವಿಗಾಗಿ ಶಾಸಕರ, ಎಡಪಕ್ಷಗಳ ಒತ್ತಡದ ಮೇರೆಗೆ ಪ್ರಜಾಪ್ರಭುತ್ವ ಸಾಮಾಜಿಕ ನ್ಯಾಯಕ್ಕಾಗಿ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರರಚನೆಯಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಯಾರೇ ಬಂದರೂ ಸ್ವಾಗತ. ಮುಂದಿನ ಭವಿಷ್ಯದ ಬಗ್ಗೆ ಈಗಲೇ ಏನು ಹೇಳಲಾಗದು ಎಂದು ನುಡಿದರು.
ಅಲ್ಲಿ ರಾತ್ರಿ 4.30ಕ್ಕೆ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳಿಸಿ 7.30 ಒಳಗೆ ತರಾತುರಿಯ ಸರ್ಕಾರ ರಚನೆ ಎಂದರೆ ಯಾವ ರೀತಿ ಇದು. ಈ ಎಲ್ಲಾ ಕೆಲಸಗಳು ನಡೆಯಲು ಕನಿಷ್ಠ 12 ತಾಸು ಬೇಕು. ಆದರೆ ಕೇವಲ 3 ತಾಸು ಒಳಗೆ ಅದು ರಾತ್ರೋರಾತ್ರಿ ಸರ್ಕಾರ ರಚನೆ ಎಂದರೆ ಏನರ್ಥ ? ಎಂದು ಪ್ರಶ್ನಿಸಿದರು.
ಉಪಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಜನರಿಗೆ ಸ್ಪಂದಿಸದ ಭ್ರಷ್ಟ ಸರ್ಕಾರವನ್ನು ಉರುಳಿಸಬೇಕು.ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕದ ಮೇಲೆ ಸಿಟ್ಟಿದ್ದು, ಯಡಿಯೂರಪ್ಪ ಅವರ ಮೇಲಿನ ಕೋಪವನ್ನು ನಮ್ಮ ರಾಜ್ಯದ ಮೇಲೆ ಏಕೆ ತೋರಿಸುತ್ತಿದ್ದಾರೆಯೋ ಗೊತ್ತಿಲ್ಲ ಎಂದು ಸೂಚ್ಯವಾಗಿ ಹೇಳಿದರು.
ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸಿ ಅಕ್ರಮ ಮೂಲಕ ಚುನಾವಣೆ ಎದುರಿಸುತ್ತಿದೆ. ಆದರೆ ಜನರಿಗೆ ಮಾತ್ರ ಸ್ಪಂದಿಸುತ್ತಿಲ್ಲ. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಹೆಚ್ಚು ಸ್ಥಾನಗೆಲ್ಲಲೇಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದ ನೆರೆ ಹಾನಿ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದೆ. ಜನರ ಸಮಸ್ಯೆಗೆ ಸ್ಪಂದಿಸದ ರಾಜ್ಯ ಸರ್ಕಾರ ಕೇವಲ ಶಾಸಕರ ಖರೀದಿ ಸರ್ಕಾರ ಭದ್ರಗೊಳಿಸುವಲ್ಲಿ ಹೋರಾಟ ಮಾಡುತ್ತಿದ್ದೆಯಷ್ಟೆ. ರಾಜ್ಯ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು ಸಚಿವರು, ಶಾಸಕರೆಲ್ಲ ಪಕ್ಷಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ತೊಡಗಿಕೊಂಡಿದ್ದರಿಂದ ರಾಜ್ಯದ ಪ್ರಚಾರಕ್ಕೆ ತೊಡಗಿಸಿಕೊಳ್ಳಲಾಗಲಿಲ್ಲ. ಇಂದು ಹಾಗೂ ನಾಳೆ ಹಲವು ಸಭೆಗಳಲ್ಲಿ ಭಾಗಿಯಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.
ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಬಿಜೆಪಿಯವರು ಜನರನ್ನು ಒಡೆದು ಆಳುತ್ತಿದ್ದಾರೆ. ಪರಸ್ಪರ ಎತ್ತಿಕಟ್ಟುವ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ. ಮತದಾರರ ಮೇಲೂ ಒತ್ತಡದ ತಂತ್ರಗಾರಿಕೆ ಹೇರುತ್ತಿದ್ದಾರೆ. ಆದರೆ ಇದ್ಯಾವುದು ಈ ಉಪಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಬಿಜೆಪಿ ವಿರುದ್ಧ ಖರ್ಗೆ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸುವುದು ದೇಶದಲ್ಲಿ ಆಗುತ್ತಿರುವ ದುರಾಡಳಿತ ಬಗ್ಗೆ ಜನರಿಗೆ ಸತ್ಯ ತಿಳಿಸುವುದು ನನ್ನ ಕರ್ತವ್ಯ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಸರ್ಕಾರ ಬರಲಿದೆ. ಹದಿನೈದು ಸ್ಥಾನಗಳು ಬರಲೇಬೇಕು. ಡಿ 9ರ ಬಳಿಕವೇ ಮುಂದಿನ ಬೆಳವಣಿಗೆಗಳು. ಸದ್ಯಕ್ಕೆ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು. ಫಲಿತಾಂಶದ ಬಳಿಕ ನಿಜವಾದ ಬೆಳವಣಿಗೆ ನಡೆಯಲಿದೆ ಎಂದರು.
ದೇಶದಲ್ಲಿ ಅಧಿಕಾರ ದುರುಪಯೋಗ ನಡೆಯುತ್ತಿದೆ, ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳನ್ನು ಹೆದರಿಸುತ್ತಿದೆ. ನಮ್ಮಮುಖಂಡರು,ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದೆ. ಮಹಾರಾಷ್ಟ್ರದಲ್ಲಿ ಕಥೆ ಏನೇನಾಗಿದೆ ಗೊತ್ತಿದೆ.
ಬಿಜೆಪಿಗೆ ಹೋದವರು ಅಲ್ಲಿ ಸೋತಿದ್ದಾರೆ. ಅಲ್ಲಿಗೆ ಹೋದವರಲ್ಲಿ ಶೇ. 70ರಷ್ಟು ಜನ ಸೋತಿದ್ದಾರೆ. ಈಗ ಮೈತ್ರಿ ಸರ್ಕಾರದಿಂದ ಬಿಜೆಪಿಗೆ ಹೋದವರೆಲ್ಲರೂ ಸೋಲುತ್ತಾರೆ. ಜನರೇ ಅವರನ್ನು ಈ ಬಾರಿ ತಿರಸ್ಕರಿಸುತ್ತಾರೆ ಎಂದರು.
ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿ ಹೇಳಿಯೇ ಇನ್ನೂ ಇಲ್ಲೇ ಇದ್ದೀನಿ. ಮೊದಲು ನಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳು ಗೆದ್ದು ಬರಲಿ. ನಂತರ ಪಕ್ಷದ ಹೈ ಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಮೊದಲು ಹೆಚ್ಚು ಸ್ಥಾನ ಗೆಲ್ಲಬೇಕು. ಗೆದ್ದರಷ್ಟೆ ಸರ್ಕಾರ ರಚನೆ ಬಗ್ಗೆ ಚರ್ಚೆ ಆಗಲಿದೆ. ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಹೋರಾಟ ನಡೆಸಲಿದೆ. ಮುಂದೆ ಸಿಎಂ ಯಾರು ಎನ್ನುವ ಪ್ರಶ್ನೆ ಈಗ ಉದ್ಭವಿಸುವುದಿಲ್ಲ ಎಂದು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದರು.
ಸಂಖ್ಯಾಬಲ್ಲ ಇಲ್ಲ ರಾಜ್ಯಸಭೆಗೆ ಹೋಗಲ್ಲ:ವಿಧಾನಸಭೆಯಲ್ಲಿ ನಮಗೆ ಸಂಖ್ಯಾಬಲ ಇಲ್ಲ. ಸಂಖ್ಯಾಬಲ ಕೊಡಿ ಹೋಗುತ್ತೇನೆ ಎನ್ನುವ ಮೂಲಕ ಮಲ್ಲಿಕಾರ್ಜುನ್ ಖರ್ಗೆ ರಾಜ್ಯಸಭೆ ಚುನಾವಣಾ ಸ್ಪರ್ಧೆಗೆ ತಮ್ಮ ಮನಸಿಲ್ಲ ಎಂದು ಪರೋಕ್ಷವಾಗಿ ಹೇಳಿದರು.