ನನ್ನ ವಿರುದ್ದದ ಆರೋಪಗಳು ರಾಜಕೀಯ ಪ್ರೇರಿತ; ಆಜಂಖಾನ್

ರಾಮಪುರ್, ಉತ್ತರಪ್ರದೇಶ, ಆಗಸ್ಟ್ 12    ಜಿಲ್ಲಾಡಳಿತ  ನ್ಯಾಯಾಲಯದ ಆದೇಶವನ್ನು ಕಡೆಗಣಿಸಿ  ಜೌಹಾರ್ ವಿಶ್ವವಿದ್ಯಾಲಯದ  ಹಾಗೂ ಅದರಲ್ಲಿ ಕಲಿಯುತ್ತಿರುವ  ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು   ಕ್ರಮ ಜರುಗಿಸಲು ಯತ್ನಿಸುತ್ತಿದೆ ಎಂದು  ಹಿರಿಯ ಸಮಾಜವಾದಿ ಪಕ್ಷದ ನಾಯಕ, ಸಂಸದ   ಆಜಂ ಖಾನ್ ದೂರಿದ್ದಾರೆ.  

  ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು,  ತಮ್ಮ ವಿರುದ್ಧ ಜಿಲ್ಲಾಡಳಿತ ದಾಖಲಿಸಿರುವ  ಎಲ್ಲಾ 26 ಎಫ್ ಐ ಆರ್ ಗಳ ಸಂಬಂಧ  ಮೊಹಮದ್ ಅಲಿ ಜೌಹಾರ್  ವಿಶ್ವವಿದ್ಯಾಲಯ ಹಾಗೂ ಅದರ ವಿದ್ಯಾರ್ಥಿಗಳ ವಿರುದ್ದ ಕ್ರಮ ಕೈಗೊಳ್ಳಲು ಯತ್ನಿಸುತ್ತಿದೆ. ಯುವಕರು ಅನಕ್ಷರಸ್ಥರಾಗಿಯೇ  ಉಳಿಯಬೇಕೆಂದು ಬಿಜೆಪಿ ಸರ್ಕಾರ ಬಯಸುತ್ತಿದೆ ಎಂದು ದೂರಿದ್ದಾರೆ. 

  ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳು ರಾಜಕೀಯ ಪ್ರೇರಿತ, ಸತ್ಯಕ್ಕೆ ದೂರವಾಗಿವೆ.  ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ ತಮ್ಮ ಹಾಗೂ ತಮ್ಮ ಕುಟುಂಬವನ್ನು ಗುರಿಯಾಗಿಸಿ ಕ್ರಮ ಜರುಗಿಸುತ್ತದೆ. ಆದರೆ, ದೇಶದ ನ್ಯಾಯಾಂಗದ ಮೇಲೆ ತಮಗೆ ಅಪಾರ ನಂಬಿಕೆಯಿದೆ ಎಂದು  ಆಜಂ ಖಾನ್ ಹೇಳಿದ್ದಾರೆ.