ಬೆಳಗಾವಿ, ಅ 27 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಪತನಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಜಾತ್ಯತೀತ ಜನತಾದಳದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಯಡಿಯೂರಪ್ಪ ನಾಯಕತ್ವದ ರಾಜ್ಯ ಬಿಜೆಪಿ ಸರ್ಕಾರ ಪತನಗೊಳ್ಳಲು ಅವಕಾಶ ನೀಡುವುದಿಲ್ಲ. ಅಲ್ಲದೆ, ಕಾಂಗ್ರೆಸ್ ಪಕ್ಷ ಬಯಸಿರುವಂತೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಬಿಜೆಪಿ ಸರ್ಕಾರದ ಅಳಿವು ಉಳಿವು ನನ್ನ ಕೈಯಲ್ಲಿದೆ. ಹಾಗಾಗಿ, ಬಿಜೆಪಿ ಸರ್ಕಾರ ಪತನವಾಗಲು ಅವಕಾಶ ನೀಡುವುದಿಲ್ಲ, ಮಧ್ಯಂತರ ಚುನಾವಣೆ ಬಯಸುತ್ತಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕನಸು ನನಸಾಗದು ಎಂದು ಹೇಳಿದರು. ರಾಜ್ಯ ಉಂಟಾಗಿರುವ ಸದ್ಯದ ನೆರೆ ಪರಿಸ್ಥಿತಿ ಗಂಭೀರವಾಗಿದ್ದು, ರಾಜ್ಯ ಸರ್ಕಾರ ಸಂಗ್ರಹಿಸಿರುವ ಎಲ್ಲ ಸಂಪನ್ಮೂಲಗಳನ್ನು ನೆರೆ ಬಾಧಿತರ ಪುನರ್ ವಸತಿಗೆ ಬಳಸಬೇಕು. ನೆರೆಯಿಂದ ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ನೀಡಬೇಕು. ಸೂರು ಕಳೆದುಕೊಂಡವರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕು ಎಂದು ಹೇಳಿದರು. ಮಧ್ಯಂತರ ವಿಧಾನಸಭಾ ಚುನಾವಣೆಗೆ 250 ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚವಾಗಲಿದೆ. ಈ ಮೊತ್ತವನ್ನು ನೆರೆ ಸಂತ್ರಸ್ಥ ಜನರ ಕಣ್ಣೀರು ಒರೆಸಲು ಬಳಸಬಹುದಾಗಿದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಸಲು ಇದು ಸರಿಯಾದ ಸಮಯ ಅಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಕೆಲವೇ ತಿಂಗಳ ಹಿಂದಷ್ಟೇ ಅಧಿಕಾರಕ್ಕೆ ಬಂದಿದೆ. ಹಿಂದೆಂದೂ ಕಾಣದ ನೆರೆ ಪರಿಸ್ಥಿತಿಯಿಂದಾಗಿ ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಹೆಚ್ಚಿನ ಸಮಯದ ಅಗತ್ಯವಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಉಂಟಾಗಿದ್ದ ನೆರೆಯಿಂದ 35ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ರಾಜ್ಯ ಸರ್ಕಾರ ಈ ಮೊದಲು ಅಂದಾಜು ಮಾಡಿತ್ತು. ನಂತರ ಉಂಟಾಗಿರುವ ನೆರೆಯಿಂದ ಆಗಿರುವ ಹಾನಿಯನ್ನು ಸರ್ಕಾರ ಅಂದಾಜಿಸಬೇಕು ಎಂದರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದುವರಿಯಲಿ, ಮಧ್ಯಂತರ ಚುನಾವಣೆಗೆ ಹೋಗಿ ನೂರಾರು ಕೋಟಿ ವೆಚ್ಚಮಾಡುವುದರ ಬದಲು, ಆ ಹಣವನ್ನು ನರೆ ಸಂತ್ರಸ್ಥರ ರಕ್ಷಣೆ ಪರಿಹಾರ ಕಾರ್ಯಗಳಿಗೆ ವೆಚ್ಚಮಾಡಲಿ ಎಂದು ಸಲಹೆ ನೀಡಿದರು. ಪ್ರವಾಹ ಸಂತ್ರಸ್ಥ ಗ್ರಾಮಗಳಿಗೆ ಭೇಟಿ ನೀಡಿದ ಕುಮಾರಸ್ವಾಮಿ, ಜನರ ಕುಂದುಕೊರತೆ ಆಲಿಸಿದರು.