ಯಾದಗಿರಿ ಜಿ.ಪಂ ಕಲಿಕಾ ತಂಡ ಜಿಲ್ಲೆಗೆ ಭೇಟಿ

ಬಾಗಲಕೋಟೆ 02: ಯಾದಗಿರಿ ಜಿಲ್ಲಾ ಪಂಚಾಯತಿಯ ಕಲಿಕಾ ತಂಡ ಜಿಲ್ಲೆಯ ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಮದ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸೋಮವಾರ ಭೇಟಿ ನೀಡಿ ಘಟಕವನ್ನು ವೀಕ್ಷಿಸಿತು.

ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಪಂಚಾಯತ ಅಭಿವೃದ್ದಿ ಅಧಿಕಾರಿಗಳನ್ನೊಳಗೊಂಡ ತಂಡವು ತ್ಯಾಜ್ಯ ಘಟಕವನ್ನು ವೀಕ್ಷಿಸಿ ಘನತ್ಯಾಜ್ಯ ಘಟಕ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. 

ಗ್ರಾ.ಪಂ ಸದಸ್ಯರು ಮಾತನಾಡಿ ಯಡಹಳ್ಳಿ ಗ್ರಾಮ ಕೃಷಿ ಪ್ರಧಾನ ಕುಟುಂಬಗಳಿಂದ ಕೂಡಿದ್ದು, ಈ ಗ್ರಾಮದಲ್ಲಿ ತಿಪ್ಪೆಗುಂಡಿಗಳು ಸುವ್ಯವಸ್ಥಿತವಾಗಿರಲಿಲ್ಲ. ರಸ್ತೆ ತುಂಬಾ ಕಸ ಚೆಲ್ಲುತ್ತಿದ್ದರು. ಅದನ್ನು ಹೋಗಲಾಗಡಿಸಲು ಮೊದಲು ತಿಪ್ಪೆಗಳಿದ್ದ ಜಾಗದಲ್ಲಿ 115 ಪಿಟ್ ಅಳತೆಯ ಜಪಾನ ಮಾದರಿ ಜೈವಿಕ ಘಟಕ ರಚಿಸಲಾಗಿದೆ. ಇದಕ್ಕಾಗಿ ಎಸ್.ಬಿ.ಎಮ್ ಯೋಜನೆಯಡಿ ವಿಶೇಷ ಅನುದಾನ ಪಡೆಯಲಾಗಿದೆ ಎಂದು ತಿಳಿಸಿದರು. ಗ್ರಾಮದ ಸ್ವಚ್ಛತೆ ಮತ್ತು ಘನ ತ್ಯಜ್ಯ ನಿರ್ವಹಣೆ ಘಟಕ, ಸಾವಯುವ ಗೊಬ್ಬರ ತಯಾರಿಕೆ, ಬಳಕೆ ಮತ್ತು ನಿರ್ವಹಣೆ, ಬಗ್ಗೆ ಮಾಹಿತಿ ನೀಡಿದರು. ಪ್ರತಿ ತಿಪ್ಪೆಯ ಗುಂಡಿ ಮುಂದೆ ಗಿಡ ನೆಡಲಾಗಿದ್ದು, ಅದನ್ನು ಬೆಳೆಸುವ ಜವಾಬ್ದಾರಿಯನ್ನು ಆಯಾ ತಿಪ್ಪೆ ಗುಂಡಿ ರೈತರಿಗೆ ವಹಿಸಿಕೊಡಲಾಗಿದೆ. ಹಾಗೂ ಈ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಅಮಲಝರಿ ಗ್ರಾಮವು ಕೂಡ ಸೇರಿಕೊಂಡಿದೆ. ಈ ಗ್ರಾಮದಲ್ಲಿ ಒಟ್ಟು 1440 ಕುಟುಂಬಗಳಿದ್ದು, ಗ್ರಾ.ಪಂನ ಎಲ್ಲ ಸದಸ್ಯರು ಗ್ರಾಮದ ಸ್ವಚ್ಛತೆಗೆ ಸದಾ ಕಂಕಣಬದ್ದರಾಗಿ ನಿಂತಿದ್ದರಿಂದ ಈ ಕಾರ್ಯ ಮಾಡಲು ಸಾದ್ಯವಾಯಿತು ಎಂದು ತಿಳಿಸಿದರು. ಈ ಗ್ರಾಮದ ಜನರ ಸಹಕಾರ ಹಾಗೂ ಗ್ರಾಮ ಪಂಚಾಯತ ಸದಸ್ಯರ ಆಸಕ್ತಿಯಿಂದ ಗ್ರಾಮವನ್ನು ಬಯಲು ಬಹೀರ್ದೇಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಸಾದ್ಯವಾಯಿತು. 

ಗ್ರಾಮದಲ್ಲಿ ಸುಸಜ್ಜಿತ ಘನದ್ರವ ತ್ಯಾಜ್ಯ ಘಟಕಗಳನ್ನು ನಿರ್ಮಿಸಲಾಗಿದೆ ಎಂದು ತಂಡಕ್ಕೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಯಡಹಳ್ಳಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸಂತೋಷ ಚೌಗರಿ ಜಿಲ್ಲಾ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.