ಬಸವಾದಿ ಶಿವಶರಣರ ವಚನಗಳು ಬದುಕಿಗೆ ದಾರಿದೀಪ: ಟಿ.ಎಸ್. ವಂಟಗೂಡಿ

ಬಸವಾದಿ ಶಿವಶರಣರ ವಚನಗಳು ಬದುಕಿಗೆ ದಾರಿದೀಪ: ಟಿ.ಎಸ್. ವಂಟಗೂಡಿ The Vachanas of Basava and other Shivasharanas are a guiding light for life: T.S. Vantagudi.

ಪಾಲಬಾವಿ ೨೪: ೧೨ನೇ ಶತಮಾನದ ಬಸವಾದಿ ಶಿವಶರಣರು ಆಡಿದ ಮಾತುಗಳು ವಚನಗಳಾಗಿ ರೂಪುಗೊಂಡಿವೆ. ಪ್ರತಿಯೊಬ್ಬರೂ ವಚನಗಳ ಆಶಯಗಳನ್ನು ಮೈಗೂಡಿಸಿಕೊಂಡು ನಡೆದರೆ ಬದುಕು ಬಂಗಾರವಾಗುತ್ತದೆ ಎಂದು ಸಾಹಿತಿ, ಉಪನ್ಯಾಸಕ ಟಿ.ಎಸ್. ವಂಟಗೂಡಿ ಹೇಳಿದರು. 

ಸುತ್ತಲಿನ ಖನದಾಳ ಗ್ರಾಮದ ಜಗದ್ಗುರು ಹುಲಿಕಾಂತೇಶ್ವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನ ವಹಿಸಿ ಅವರು ಮಾತನಾಡಿದರು. 

ಶರಣರು ಮರಣಕ್ಕೆ ಹೆದರುತ್ತಿರಲಿಲ್ಲ. ‘ಇಂದು ಬರಬೇಕಾದುದು ನಮಗೀಗಲೇ ಬರಲಿ, ನಾಳೆ ಬರಬೇಕಾದುದು ನಾಳೆಯೇ ಬರಲಿ’ ಎಂಬ ಮನೋಭಾವದಿಂದ ಬದುಕಿದವರು. ಮರಣವನ್ನೇ ಮಾನವೀಯ ಹಬ್ಬವೆಂದು ಅರಿತು ಬದುಕಿದ ಮಹನೀಯರಾಗಿದ್ದರು ಎಂದು ಹೇಳಿದರು. 

ಬಸವಾದಿ ಶಿವಶರಣರ ವಚನಗಳು ಕನ್ನಡ ತಾಯಿ ಭುವನೇಶ್ವರಿಯ ಗುಡಿಗೆ ಕಟ್ಟಿದ ಹಸಿರು ತೋರಣದಂತಿವೆ. ಶ್ರಾವಣ ಮಾಸದಲ್ಲಿ ಮಹಾತ್ಮರ ಚರಿತಾಮೃತವನ್ನು ಆಲಿಸುವುದರಿಂದ ಮನಸ್ಸು ಶುದ್ಧವಾಗುತ್ತದೆ. ಮಹಾತ್ಮರ ವಚನಗಳು ನಮ್ಮ ಬದುಕಿಗೆ ದಾರಿದೀಪವಾಗುತ್ತವೆ ಎಂದು ತಿಳಿಸಿದರು. 

ಈರಯ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬರೂ ಸತ್ಸಂಗದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ನಿವೃತ್ತ ಪ್ರಾಚಾರ್ಯ ಬಸವರಾಜ ಅಜೂರ ಹಾಗೂ ವಿಜಯ ಸ್ವಾಮೀಜಿ ಮಾತನಾಡಿದರು. 

ವೇದಿಕೆಯಲ್ಲಿ ರಾಚಯ್ಯ ಹಿರೇಮಠ, ಪರಯ್ಯ ಹಿರೇಮಠ, ಭೀಮಸಿ ಹೊಸಟ್ಟಿ, ಶ್ರೀಶೈಲ ಮಾಂಗ, ಸದಾಶಿವ ಚಿಗರಿ, ಆನಂದ ನಲವಡೆ, ಮಹಾದೇವ ಚಿಗರಿ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು. ಸಚಿನ್ ಜಂಗಮ ಸ್ವಾಗತಿಸಿದರು. ಶಿಕ್ಷಕ ಗೋಪಾಲ ಬೆಕ್ಕೇರಿ ನಿರೂಪಿಸಿ, ವಂದಿಸಿದರು.