ಕೆ.ಆರ್. ಪೇಟೆ, 10 ತಂಬಾಕು ಉತ್ಪನ್ನಗಳಿಂದ ಉಂಟಾಗುವ ಮಾರಣಾಂತಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು
ನಗರದಲ್ಲಿಂದು " ಗುಲಾಬಿ ಆಂದೋಲನ " ಆಯೋಜಿಸಲಾಗಿತ್ತು.
ಶಾಲಾ ವಿದ್ಯಾರ್ಥಿಗಳು, ಆಶಾ ಮತ್ತು ಆರೋಗ್ಯ ಕಾರ್ಯಕರ್ತರನ್ನೊಳಗೊಂಡ ಜಾಥಾಗೆ ತಹಶೀಲ್ದಾರ್ ಎಂ. ಶಿವಮೂರ್ತಿ ಚಾಲನೆ ನೀಡಿದರು.ಬಳಿಕ ಮಾತನಾಡಿದ ಮಾತನಾಡಿದ ಅವರು, ಬೀಡಿ, ಸಿಗರೇಟು, ಗುಟ್ಕಾ, ಕಡ್ಡಿಪುಡಿ, ಹೊಗೆಸೊಪ್ಪು ಸೇರಿದಂತೆ ಯಾವುದೇ ತಂಬಾಕುಗಳ ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ. ಇವುಗಳ ಚಟ ಅಂಟಿಸಿಕೊಂಡು ಜನಸಾಮಾನ್ಯರು ತಮ್ಮ ಅಮೂಲ್ಯವಾದ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ನಿಯಮಿತವಾದ ಆಹಾರ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ನೂರ್ಕಾಲ ಆರೋಗ್ಯವಂತರಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಮನವಿ ಮಾಡಿದರು.
ಸಿಗರೇಟ್ ಸೇವನೆ, ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳ ಬಳಕೆಯಿಂದ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜತೆಗೆ ಕ್ಯಾನ್ಸರ್, ನಪುಂಸಕತ್ವ ಮುಂತಾದ ರೋಗರುಜಿನಗಳು ಅಮೂಲ್ಯ ಜೀವಕ್ಕೆ ಕಂಟಕ ತರುತ್ತವೆ ಎಂದರು. ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ಯುವಜನರು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಗುಲಾಬಿ ಹೂವುಗಳನ್ನು ನೀಡಿ ಬೀಡಿ ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳ ಬಳಕೆ ತ್ಯಜಿಸುವಂತೆ ಜಾಗೃತಿ ಮೂಡಿಸಿದರು.
ಜಾಥಾದಲ್ಲಿ ತಾಲ್ಲೂಕು
ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಚಂದ್ರಮೌಳಿ, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್,
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಗನ್ನಾಥ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ,
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಎನ್.ಎಸ್.ಎಸ್ ಅಧಿಕಾರಿ ಚಂದ್ರಶೇಖರ್, ಉಪನ್ಯಾಸಕಿ ಅನುರಾಧ,
ಬಾಲಕಿಯರ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರು, ಹಾಗೂ ಪ್ರಗತಿ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ
ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿ ಗುಲಾಬಿ ಆಂದೋಲನವನ್ನು ಯಶಸ್ವಿಗೊಳಿಸಿದರು.