ಹುನಗುಂದ29: ಮತದಾನದ ಹಕ್ಕು ಪವಿತ್ರವಾದದ್ದು, ಅಮೂಲ್ಯವಾದ ಹಕ್ಕನ್ನು ಅರ್ಹರರಿಗೆ ನೀಡುವದರಿಂದ ದೇಶದ ಭವಿಷ್ಯ ಭದ್ರಗೊಳ್ಳುತ್ತದೆ ಎಂದು ಜೆಎಂಎಫ್ಸಿ ದಿವಾಣಿ ನ್ಯಾಯಾಧೀಶ ಬಿ. ಮೋಹನ್ ಬಾಬು ಹೇಳಿದರು. ಇಲ್ಲಿನ ವಿದ್ಯಾನಗರದ ಸರಕಾರಿ ಪ್ರಥಮ ದರ್ಜೆ ಕಾಲೇನಲ್ಲಿ ತಾಲೂಕ ಆಡಳಿತ ನಡೆಸಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡುತ್ತ ಪ್ರತಿಸಲ ಬರುವ ಗ್ರಾಪಂ, ಜಿಪಂ ಮತ್ತು ವಿಧಾನಸಭಾ ಚುನಾವಣೆಗೆ ತಾಲೂಕಾ ಆಡಳಿತದಲ್ಲಿರುವ ಚುನಾವಣಾ ವಿಭಾಗದಲ್ಲಿ 18ವರ್ಷ ತುಂಬಿದ ಪುರುಷ ಮಹಿಳೆಯರು ಕಡ್ಡಾಯವಾಗಿ ನೋಂದಾಯಿಸಿ ತಮ್ಮ ಮತದಾನದ ಹಕ್ಕನ್ನು ಪಡೆಯಬೇಕು. ಯಾವುದೇ ಜಾತಿ-ಮತ-ಪಂಥದ ಜೊತೆಗೆ ಯಾವುದೇ ಆಶೆ-ಆಮಿಷಗಳಿಗೆ ಒಳಗಾಗದೆ ಅರ್ಹರಿಗೆ ಮತ ನೀಡಿ ದೇಶದ ಭವ್ಯವಾದ ಭವಿಷ್ಯಕ್ಕೆ ಪಾತ್ರರಾಗಿ ಸದೃಢ ಸರಕಾರ ರಚನೆಗೆ ಸಹಕರಿಸಬೇಕೆಂದು ನ್ಯಾಯಾಧೀಶ ಮೋಹನ್ಬಾಬು ತಿಳಿಸಿದರು. ತಹಶೀಲ್ದಾರ ಬಸವರಾಜ ನಾಗರಾಳ ಮಾತನಾಡಿ 18ವರ್ಷ ತುಂಬಿದ ಯುವಕ-ಯುವತಿಯರಿಗೆ ಮತದಾನ ನೋಂದಣಿಯನ್ನು ಬಹಳ ಸರಳೀಕರಣಗೊಳಿಸಿದೆ. ತಮ್ಮ ದಾಖಲೆಗಳೊಂದಿಗೆ ತಾಲೂಕ ಕಚೇರಿಯಲ್ಲಿರುವ ಚುನಾವಣೆ ವಿಭಾಗದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ದೇಶ ಕಟ್ಟುವಲ್ಲಿ ಹೊಸ-ಹೊಸ ವಿಚಾರವಿರುವ ಯುವಪೀಳಿಗೆ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಗ್ರಾಮೀಣದಲ್ಲಿ ಜಾಗೃತಿ ಮತ್ತು ಅರಿವಿನ ಕೊರತೆಯಿಂದ ಮತದಾನ ಕಡಿಮೆಯಾದರೆ ನಗರದಲ್ಲಿ ನಿರ್ಲಕ್ಷದಿಂದ ಮತದಾನ ಕಡಿಮೆಯಾಗುತ್ತಿದೆ. ಹೀಗಾಗದಂತೆ ಚುನಾವಣಾ ಆಯೋಗ ತಾಲೂಕ ಜಿಲ್ಲಾಮಟ್ಟದಲ್ಲಿ ವಿವಿಧ ಹಂತದಲ್ಲಿ ಮತದಾನ ಜಾಗೃತಿ ಕಾರ್ಯ ನಡೆಸುತ್ತಿದೆ ಎಂದರು. ಪ್ರಾಚಾರ್ಯ ಪ್ರೋ. ಎಸ್ಕೆ ಜಮಾದಾರ ಅಧ್ಯಕ್ಷತೆ ವಹಿಸದ್ದರು. ಡಾ: ಶರಣು ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ದೈಹಿಕ ಶಿಕ್ಷಕ ಬಿ.ವೈ. ಆಲೂರ ಉಪಸ್ಥಿತರಿದ್ದರು. ವಿದ್ಯಾರ್ಥಿ ಗಳಿಂದ ಮತದಾನ ಕುರಿತು ಕಿರು ನಾಟಕ ನಡೆಯಿತು. ಗ್ರಂಥಪಾಲಕಿ ಕಡಿವಾಲ ನಿರೂಪಿಸಿದರು. ಪ್ರೋ. ಖಾಜಾವಲಿ ಈಚನಾಳ ಸ್ವಾಗತಿಸಿದರು.
ಪದವಿ ವಿದ್ಯಾರ್ಥಿಗಳು ಮನ:ಪೂರ್ವಕವಾಗಿ ವಿದ್ಯಾಭ್ಯಾಸ ಮಾಡಬೇಕು. ನಮ್ಮಿಂದ ಅದು ಸಾಧ್ಯವಿಲ್ಲ ಎಂಬ ಸಂಕುಚಿತಕ್ಕೆ ಒಳಗಾಗದೆ ತಮ್ಮ ಆಸಕ್ತಿಯಂತೆ ಉತ್ತಮ ಕೋರ್ಸ್ ತರಬೇತಿ ಪಡೆದು ಐಎಎಸ್, ಐಪಿಎಸ್ ಮತ್ತು ಕೆಎಎಸ್ ನಂತಹ ಉನ್ನತ ಪದವಿ ಪಡೆದು ಇದು ನನಗೂ ಸಾಧ್ಯ ಎಂದು ಇತರರಿಗೂ ಮಾದರಿಯಾಗಬೇಕು.
-ಬಿ. ಮೋಹನ್ಬಾಬು ನ್ಯಾಯಾಧೀಶ.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಎನ್ಸಿಸಿ ಮತ್ತು ಎನ್ಎಸ್ಎಸ್ ಗಳಲ್ಲು ಭಾಗವಹಿಸುವರಿಂದ ಸಮಾಜ ಮುಖಿ ಮನೋಭಾವ ಬೆಳೆಯುತ್ತದೆ. ಉನ್ನತ ವ್ಯಾಸಂಗದೊಂದಿಗೆ ಸ್ವಯಂ ಉದ್ಯೋಗದ ಕಡೆ ಗಮನಹರಿಸಬೇಕು.
-ಬಸವರಾಜ ನಾಗರಾಳ ತಹಶೀಲ್ದಾರ.