ಮುಂಬೈ, ಫೆ 6, ಆರ್ಥಿಕತೆಗೆ ದೊಡ್ಡ ಸವಾಲಾಗಿರುವ ಹಣದುಬ್ಬರವನ್ನು ಎದುರಿಸುವ ನಿಟ್ಟಿನಲ್ಲಿ ಅರ್ಥಶಾಸ್ತ್ರಜ್ಞರ ನಿರೀಕ್ಷೆಯಂತೆ ರಿಸರ್ವ್ ಬ್ಯಾಂಕ್ ಗುರುವಾರ ರೆಪೊ ದರದಲ್ಲಿ ಬದಲಾವಣೆ ಮಾಡದೆ ಶೇ 5.15ರಷ್ಟು ಮುಂದುವರಿಸಿದೆ. ರಿವರ್ಸ್ ರೆಪೊ ದರ ಸಹ ಶೇ 4.90ರಲ್ಲಿ ಯಥಾಸ್ಥಿತಿಯಲ್ಲಿದೆ. ಫೆ 4 ರಂದು ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ತನ್ನ ಆರನೇ ದ್ವೈ ಮಾಸಿಕ ನೀತಿ ಸಭೆಯಲ್ಲಿ, ರೆಪೊ ದರ (ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ವನ್ನು ಪ್ರಸಕ್ತ ವರ್ಷ ಸತತ ಎರಡನೇ ಬಾರಿ ಶೇ 5.15ರಷ್ಟು ಬದಲಾವಣೆ ಮಾಡದೆ ಮುಂದುವರೆಸಿದೆ . ಇದರ ಪರಿಣಾಮವಾಗಿ, ರಿವರ್ಸ್ ರೆಪೊ ದರ (ಬ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ನಲ್ಲಿ ಇರಿಸಬೇಕಾದ ಹಣದ ಮೇಲಿನ ಬಡ್ಡಿ ದರ) ಸಹ ಬದಲಾಗದೆ ಶೇ 4.90ರಷ್ಟು ಮುಂದುವರೆದಿದೆ.
ಬಡ್ಡಿದರಗಳ ಯಥಾಸ್ಥಿತಿ ಪರವಾಗಿ ಸಮಿತಿ 6-0 ಮತ ಚಲಾಯಿಸಿತು.ಷೆಡ್ಯೂಲ್ಡ್ ಬ್ಯಾಂಕ್ ಗಳ ನಗದು ಮೀಸಲು ಅನುಪಾತ (ಸಿಆರ್‌ಆರ್) ವನ್ನು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿ ಮುಂದುವರೆಸಿದ್ದಾರೆ.ದೇಶದ ಚಿಲ್ಲರೆ ಹಣದುಬ್ಬರ ಡಿಸೆಂಬರ್‌ನಲ್ಲಿ ಐದು ವರ್ಷಗಳಲ್ಲೇ ಗರಿಷ್ಠ ಮಟ್ಟವಾದ ಶೇ.7.35 ಕ್ಕೆ ಏರಿದೆ. ನವೆಂಬರ್ ನಲ್ಲಿ ಇದು ಶೇ 5.54 ರಷ್ಟಿತ್ತು. ಆರ್ಥಿಕತೆ ಬೆಳವಣಿಗೆ ದರ ಇದರಿಂದ ಕುಂಠಿತಗೊಂಡಿತ್ತು. ಹಣದುಬ್ಬರ ಕುರಿತು ಹೆಚ್ಚುತ್ತಿರುವ ಆತಂಕದ ನಡುವೆ ರಿಸರ್ವ್ ಬ್ಯಾಂಕ್ ಡಿಸೆಂಬರ್ ನಲ್ಲಿ ನಡೆದ ಸಭೆಯಲ್ಲಿ ರೆಪೋ ದರದಲ್ಲಿ ಬದಲಾವಣೆ ಮಾಡದೆ ಶೇ 5.15ರಲ್ಲಿ ಮುಂದುವರೆಸಿತ್ತು. ಡಿಸೆಂಬರ್ ಗೂ ಮುನ್ನ 2019ರಲ್ಲಿ ರೆಪೋ ದರವನ್ನು ಐದು ಬಾರಿ ಕಡಿತಗೊಳಿಸಿ 135 ಮೂಲಾಂಕಗಳಷ್ಟು ಕಡಿತಗೊಳಿಸಲಾಗಿತ್ತು.