ಅಯೋಧ್ಯಾ, ಜೂನ್ 10, ಸುಮಾರು ಮೂರು ದಶಕಗಳ ನಂತರ, ಭವ್ಯವಾದ ಶ್ರೀರಾಮ ದೇವಾಲಯದ ನಿರ್ಮಾಣ ಕಾರ್ಯಗಳನ್ನು ಔಪಚಾರಿಕವಾಗಿ ಪ್ರಾರಂಭಿಸಲಾಗಿದೆ. ಈ ಪ್ರಯುಕ್ತ ಬುಧವಾರ ರಾಮ ಜನ್ಮಭೂಮಿಯಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗುತ್ತಿದ್ದು, ಬೆಳಿಗ್ಗೆ ಕುಬರ್ ತಿಲಾದಲ್ಲಿ ರುದ್ರಾಭಿಷೇಕ ನಡೆಸಲಾಯಿತು.ಅಭಿಷೇಕ ಸಮಾರಂಭವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಎಂ. ಶಾಂತ್ ಕಮಲ್ ನಯನ್ ದಾಸ್ ನೇತೃತ್ವದಲ್ಲಿ ಹಲವಾರು ಸಂತರು ಮತ್ತು ಮಹಾಂತರು ನಡೆಸಿದರು.ಕೊರೋನಾ ಬಿಕ್ಕಟ್ಟಿನಿಂದಾಗಿ, ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದ ಭವ್ಯವಾದ "ಭೂಮಿ ಪೂಜನ" ಸಮಾರಂಭವನ್ನು ಮುಂದೂಡಲಾಗಿದೆ. ಹೀಗಾಗಿ ಸಣ್ಣ ರುದ್ರಾಭಿಷೇಕದ ಮೂಲಕ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
'ರುದ್ರಾಭಿಷಭಿಷೇಕ' ದ ನಂತರ ಈಗ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ ಎಂದು ಮಹಂತ್ ಕಮಲ್ ನಯನ್ ದಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ. "ಶ್ರೀರಾಮಚಂದ್ರರು ಯಾವುದೇ ಕಾರ್ಯ ನಡೆಸುವ ಮುನ್ನ ಶಿವನನ್ನು ಪೂಜಿಸುತ್ತಿದ್ದರು. ನಾವೂ ಸಹ ಅದೇ ಸಂಪ್ರದಾನವನ್ನು ಅನುಸರಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.ಕುಬರ್ ತಿಲಾ ಅತ್ಯಂತ ಹಳೆಯ ಶಿವ ದೇವಾಲಯಗಳಲ್ಲಿ ಒಂದಾಗಿದ್ದು, ಧಾರ್ಮಿಕ ಸಮಾರಂಭವನ್ನು ಅಲ್ಲಿ ನಡೆಸಲಾಯಿತು. ರುದ್ರಾಭಿಷೇಕ ಸಮಾರಂಭದಲ್ಲಿ ಶಿವಲಿಂಗಕ್ಕೆ 11 ಲೀಟರ್ ಕಪ್ಪು ಹಸುವಿನ ಹಾಲನ್ನು ಅರ್ಪಿಸಲಾಯಿತು ಮತ್ತು ಭವ್ಯವಾದ ಶ್ರೀರಾಮ ದೇವಸ್ಥಾನದ ನಿರ್ಮಾಣ ಕಾರ್ಯ ಅಡಚಣೆಯಿಲ್ಲದೆ ನಡೆಸಲು ಸಂತರು ಪ್ರಾರ್ಥನೆ ಸಲ್ಲಿಸಿದರು.