ಎಲ್ಲ ವಿಷಯಗಳ ಬಗ್ಗೆ ಪ್ರತಿಪಕ್ಷಗಳ ಅಭಿಪ್ರಾಯಗಳನ್ನು ಆಲಿಸಲು ಸರ್ಕಾರ ಸಿದ್ಧ-ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ

ನವದೆಹಲಿ, ಜ 30: ದೇಶದಲ್ಲಿನ ಸದ್ಯದ ಪರಿಸ್ಥಿತಿ ಮತ್ತು ಆರ್ಥಿಕ ವಿಷಯಗಳ ಬಗ್ಗೆ ವಿರೋಧ ಪಕ್ಷಗಳ ಅಭಿಪ್ರಾಯಗಳನ್ನು ಆಲಿಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. 

ಬಜೆಟ್ ಅಧಿವೇಶನದ ಮುನ್ನಾದಿನದಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ನರೇಂದ್ರ ಮೋದಿ ಈ ಹೇಳಿಕೆ ನೀಡಿದ್ದಾರೆ. ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ರಾಜ್ಯಸಭೆಯಲ್ಲಿನ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಮತ್ತು ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಆರ್ಥಿಕ ವಿಷಯಗಳು ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತ ಹೇಗೆ ಇದರ ಲಾಭ ಪಡೆಯಬಹುದು ಎಂಬುದರ ಬಗ್ಗೆ ಸಮಗ್ರ ಚರ್ಚೆಗೆ ಪ್ರಧಾನಿ ಕರೆ ನೀಡಿದ್ದಾರೆ ಎಂದು ಹೇಳಿದರು.

ಶುಕ್ರವಾರದಿಂದ ಆರಂಭವಾಗು ಬಜೆಟ್ ಅಧಿವೇಶನದಲ್ಲಿ ಸರ್ಕಾರ ಕನಿಷ್ಠ 45 ಮಸೂದೆಗಳನ್ನು ಮಂಡಿಸುವ  ಸಾಧ್ಯತೆಯಿದೆ.

2020-21ರ ಹಣಕಾಸು ವರ್ಷದ ಬಜೆಟ್ ಅನ್ನು ಫೆ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆ ಮತ್ತು ದೇಶದ ವಿವಿಧೆಡೆ ವಿಶ್ವವಿದ್ಯಾಲಯಗಳ ಕ್ಯಾಂಪಸ್‍ಗಳಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ನಡುವೆಯೇ ಸಂಸತ್ ಬಜೆಟ್ ಅಧಿವೇಶನ ನಡೆಯಲಿದೆ.

ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಎಲ್ಲ ಪ್ರಕ್ರಿಯೆಗಳ ನಂತರÀ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಲಾಗಿರುವುದರಿಂದ ಹೊಸ ಕಾನೂನಿನ ಬಗ್ಗೆ ಪ್ರತಿಪಕ್ಷಗಳು ಸಂಸತ್ ನ ಹೊರಗೆ ತಮ್ಮ ನಿಲುವಿನ ಕುರಿತು 'ಆತ್ಮಾವಲೋಕನ' ಮಾಡಿಕೊಳ್ಳಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿ ಜೋಶಿ ಹೇಳಿದ್ದಾರೆ.