ರಾಜ್ಯಸಭೆಯಲ್ಲಿ ‘ಪದ್ಮ’ ಪ್ರಶಸ್ತಿ ಪುರಸ್ಕೃತರ ಸಾಧನೆ, ಸೇವೆ ಶ್ಲಾಘನೆ

ನವದೆಹಲಿ, ಫೆ 3,ಪ್ರಸಕ್ತ ಸಾಲಿನ ಪದ್ಮವಿಭೂಷಣ ಮತ್ತು ಪದ್ಮಭೂಷಣ  ಪ್ರಶಸ್ತಿ ಪುರಸ್ಕತರನ್ನು ರಾಜ್ಯಸಭೆ ಸೋಮವಾರ ಶ್ಲಾಘಿಸಿದೆ. ಬೆಳಿಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ದೇಶದ ಎರಡನೇ ಮತ್ತು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಗೆ ಪುರಸ್ಕøತರಾದ ಸದನದ ಹಾಲಿ  ಸದಸ್ಯರ ಹೆಸರುಗಳನ್ನು ಓದಿದರು. ಹಾಲಿ ಸದಸ್ಯೆ ಎಂ.ಎಸ್. ಮೇರಿ ಕೋಮ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದರೆ,  ಮಾಜಿ ಸದಸ್ಯರಾದ ಜಾರ್ಜ್ ಫೆನಾರ್ಂಡಿಸ್, ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ತಮ್ಮ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗೆ ಪ್ರಶಸ್ತಿ ಪುರಸ್ಕತರನ್ನು ಶ್ಲಾಘಿಸಿದ ನಾಯ್ಡು, ಮೇರಿ ಕೋಮ್ ಕೇವಲ ಆರು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್ ವಿಜೇತರು ಮಾತ್ರವಲ್ಲದೆ,  ಈ ಪ್ರಶಸ್ತಿ ಪಡೆದ ಮೊದಲ ಮಹಿಳಾ ಕ್ರೀಡಾಪಟು ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.  ಒಲಿಂಪಿಕ್ಸ್ ಪ್ರಶಸ್ತಿ ವಿಜೇತೆ ಮೇರಿ ಕೋಮ್ ದೇಶಕ್ಕಾಗಿ ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನು ಗಳಿಸಿಕೊಡುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ನಾಯ್ಡು ಹೇಳಿದರು.‘ಸಾರ್ವಜನಿಕ ಜೀವನದಲ್ಲಿ ಸಲ್ಲಿಸಿದ ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ಸದನದ ಮೂವರು ಮಾಜಿ ಸದಸ್ಯರಾದ ಜಾರ್ಜ್ ಫನಾರ್ಂಡಿಸ್, ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  ದಿವಂಗತ ಜಾರ್ಜ್ ಫೆನಾರ್ಂಡಿಸ್ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದರು ಎಂದು ಹೇಳಿದರು.

‘ಅರುಣ್ ಜೇಟ್ಲಿ ಅವರು ಪ್ರಖ್ಯಾತ ವಕೀಲರಾಗಿದ್ದರು, 2014 ರಿಂದ 19ರವರೆಗೆ ಎನ್‍ಡಿಎ ಸರ್ಕಾರದಲ್ಲಿ ಹಣಕಾಸು ಮತ್ತು ರಕ್ಷಣಾ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.  ಹಣಕಾಸು ಸಚಿವರಾಗಿ ಅವರು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, ಬೆನಾಮಿ ಆಸ್ತಿ ಕಾಯ್ದೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಉಭಯ ಸದನಗಳಲ್ಲಿ ಅಂಗೀಕಾರವಾಗಲು ಕಾರಣರಾಗಿದ್ದರು.’ ಎಂದು ನಾಯ್ಡು ಹೇಳಿದರು.ಸಭಾಪತಿಯವರು ಸುಷ್ಮಾ ಸ್ವರಾಜ್ ಅವರ ಸೇವೆಯನ್ನು ಪ್ರಸ್ತಾಪಿಸಿ, ‘ವಿದೇಶಾಂಗ ವ್ಯವಹಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಾರ್ತಾ ಮತ್ತು ಪ್ರಸಾರದಂತಹ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಲೋಕಸಭೆಯ ಪ್ರತಿಪಕ್ಷದ ಮೊದಲ ಮಹಿಳಾ ನಾಯಕಿ ಎಂಬ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ ಎಂದು ಸ್ಮರಿಸಿದರು. 

ಮಾಜಿ ಸದಸ್ಯರಾದ ಎಸ್‍ಸಿ ಜಮೀರ್ ಮತ್ತು ಮನೋಹರ್ ಪರಿಕ್ಕರ್ ಅವರು ಪದ್ಮಭೂಷಣ ಪ್ರಶಸ್ತಿ ಪುರಸ್ಕøತರಾಗಿದ್ದಾರೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.ಆಧುನಿಕ ನಾಗಾಲ್ಯಾಂಡ್‍ನ ಶಿಲ್ಪಿ, ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ಅನೇಕ ರಾಜ್ಯಗಳ ರಾಜ್ಯಪಾಲರಾಗಿದ್ದ ಎಸ್‍ಸಿ ಜಮೀರ್ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಮಾಜಿ ರಕ್ಷಣಾ ಸಚಿವರು ಹಾಗೂ ಮೂರು ಬಾರಿ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರು ಅತ್ಯುತ್ತಮ ಮತ್ತು ವಿಶಿಷ್ಟ ಸೇವೆಯನ್ನು ನೀಡಿದ್ದಾರೆ. ಈ ಎಲ್ಲ ಸಾಧಕರು ದೇಶಕ್ಕೆ ಸಲ್ಲಿಸಿದ ಅಸಾಧಾರಣ ಸೇವೆಗಳನ್ನು ಸದನ ಶ್ಲಾಘಿಸುತ್ತದೆ ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ.