ಬ್ಯಾಡಗಿ: ದಾನಗಳಲ್ಲಿ ಬಹುಶ್ರೇಷ್ಠ ದಾನ ರಕ್ತದಾನ ವಾಗಿದ್ದು, ರಕ್ತದಾನದಿಂದ ಒಂದು ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯ ಎಂದು ಹಾವೇರಿಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಹೇಳಿದರು.
ಭ್ರಷ್ಟಾಚಾರ ವಿರೋಧಿ ಜನ ಆಂದೋಲನ (ನ್ಯಾಸ) ರಾಜ್ಯ ಘಟಕದ ಆಶ್ರಯದಲ್ಲಿ ಸ್ಥಳೀಯ ತಾಲೂಕಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ವ್ಯಕ್ತಿಯು ಇನ್ನೊಬ್ಬರ ಜೀವ ಉಳಿಸಲು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದು ಮಹಾನ್ ಕಾರ್ಯವಾಗಿದೆ. ರಕ್ತದಾನ ಮಾಡುವುದರಿಂದ ಪ್ರತಿಯೊಬ್ಬರಿಗೂ ಹಲವಾರು ಉಪಯೋಗಗಳಿವೆ. ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡಲು ಅವಕಾಶವಿದ್ದು, ಈ ಬಗ್ಗೆ ಜನರು ಅರಿವು ಮೂಡಿಸಿಕೊಂಡು ರಕ್ತದಾನ ಮಾಡಬೇಕೆಂದು ತಿಳಿಸಿದರು.
ಶಿಬಿರದ ರೂವಾರಿಗಳಾದ ನ್ಯಾಸ ರಾಜ್ಯ ಘಟಕದ ಮುಖ್ಯ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಮಾತನಾಡಿ, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ ಮಾನವೀಯ ಸಮಾಜವನ್ನು ಕಾಣಲು ಸಾಧ್ಯ, ದಾನಗಳಲ್ಲಿ ವಿದ್ಯಾದಾನ, ನೇತ್ರದಾನಗಳಂತೆ ರಕ್ತದಾನವು ಜಗತ್ತಿನಲ್ಲಿ ಬಹು ದೊಡ್ಡ ದಾನವಾಗಿದೆ ಎಂದರು.
ಈ ಶಿಬಿರದಲ್ಲಿ 150 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಅದರಲ್ಲಿ 28 ಆರೋಗ್ಯವಂತ ಜನರಿಂದ ರಕ್ತದಾನವನ್ನು ಪಡೆಯಲಾಯಿತು. ಶಿಬಿರದಲ್ಲಿ ವಿಶೇಷವಾಗಿ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಶಿಕ್ಷಕ ದಂಪತಿಗಳು, ವಿವಿಧ ಇಲಾಖೆಗಳ ನೌಕರರು, ಸಾರ್ವಜನಿಕರು ಭಾಗವಹಿಸಿ ರಕ್ತದಾನ ಮಾಡಿದರು.
ಶಿಬಿರದಲ್ಲಿ ಡಾ. ಬಸವರಾಜ ಕಮತದ ಮತ್ತು ಸಿಬ್ಬಂದಿವರ್ಗ ದವರು, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಸುರೇಶ ಡಂಬಳ, ಫರಿದಾಭಾನು ನದ್ದಿಮುಲ್ಲಾ, ಪ್ರಕಾಶ ಮಠದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಶಿಬಿರವನ್ನು ಯಶಸ್ವಿಗೊಳಿಸಿದರು.