ಲೋಕದರ್ಶನ ವರದಿ
ಗಂಗಾವತಿ: ಕನಕದಾಸರನ್ನು ಒಂದು ಕೋಮಿಗೆ ಸೀಮಿತಗೊಳಿಸಬಾರದು ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು. ಹೊಸಳ್ಳಿ ರಸ್ತೆಯಲ್ಲಿನ ಕನಕದಾಸ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿಯಲ್ಲಿ ಪಾಲ್ಗೊಂಡ ಅವರು, ಕನಕದಾಸನ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಅವರು ಸರ್ವ ಜನಾಂಗದ ಸ್ಪೂರ್ತಿ ಮತ್ತು ದಾರಿ ದೀಪವಾಗಿದ್ದಾರೆ. ಅವರ ತತ್ವಗಳು, ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮೆಲ್ಲರ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಮಾನವತೆಯ ಮೇರು ಪರ್ವತವಾಗಿದ್ದ ಕನಕದಾಸರು ಮಾನವ ಕೋಟಿಯ ಉದ್ಧಾರಕ್ಕಾಗಿ ಈ ಭೂಮಿಗೆ ಅವತರಿಸಿದರು. ಭಕ್ತಿ ಎಂಬುದನ್ನು ಕನಕದಾಸರನ್ನು ನಾವುಗಳು ನೀಡಿ ಕಲಿಯಬೇಕು. ಭಕ್ತ ಕನಕದಾಸರು ಭಕ್ತಿ ಪಂಥದ ಹರಿದಾಸರಲ್ಲಿ ಪ್ರಮುಖರು. ಸಂತ ಕವಿಶ್ರೇಷ್ಠರಾಗಿದ್ದ ಅವರು ಜಗತ್ತಿಗೆ ಮಾನವೀಯತೆ ಸಂದೇಶ ನೀಡಿದರು. ಜಾತಿ ತಾರತಮ್ಯಕ್ಕೆ ತೀವ್ರವಾಗಿ ವಿರೋಧಿಸಿದ್ದ ಅವರು "ಕುಲ ಕುಲ ಎಂದು ಬಡಿದಾಡದಿರಿ" ಎಂಬ ಸಂದೇಶವನ್ನು ಅಂದಿನ ಸಂದರ್ಭದಲ್ಲಿ ಅವರು ನೀಡಿದ್ದರು. ಇವರು ಮಾರ್ಗದರ್ಶಕರು ಮತ್ತು ಸಮಾಜ ಸುಧಾರಕರು ಸಹ ಆಗಿದ್ದರು. ಈ ಮಹಾಪುರುಷನ ಜಯಂತಿಯಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಿರುವದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ ಎಂದು ಶಾಸಕರು ತಿಳಿಸಿದರು. ನಗರಸಭೆ ಮಾಜಿ ಅಧ್ಯಕ್ಷ(ಸಂಡೆ ಮಾರ್ಕೆಟ್) ಕೆ.ವೆಂಕಟೇಶ, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಕುರುಬರ ಸಮಾಜದ ಹಿರಿಯ ಮುಖಂಡ ವಿಠಲಾಪುರ ಯಮನಪ್ಪ, ಕುರುಬರ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಕೆ.ಮಂಜುನಾಥ ಪಾಲ್ಗೊಂಡಿದ್ದರು.