ಲೋಕದರ್ಶನ ವರದಿ
ರಾಯಬಾಗ 13: ರಾಮಾಯಣದಲ್ಲಿ ಶ್ರೀರಾಮನಂಥ ನಾಯಕ, ಲಕ್ಷ್ಮಣನಂಥ ಸಹೋದರ, ಹನುಮನಂಥ ಸ್ವಾಮೀಭಕ್ತ ಇಂಥ ನೂರಾರು ಅದ್ಭುತ ಪಾತ್ರಗಳನ್ನು ಸೃಷ್ಟಿಸಿದ ಆದಿ ಕವಿ ಮಹರ್ಷಿ ವಾಲ್ಮೀಕಿ ಅವರ ಪ್ರತಿಭೆ ಅನನ್ಯವಾದದ್ದು ಎಂದು ಹಾರೂಗೇರಿ ಸಿದ್ದೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ತುಕಾರಾಮ ಒಂಟಗೂಡೆ ಹೇಳಿದರು.
ರವಿವಾರ ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕಾ ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆದಿಕವಿ ಮಹರ್ಷಿ ವಾಲ್ಮೀಕಿರವರ ಜಯಂತಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮಾಯಣ ಗ್ರಂಥವು ಮಹರ್ಷಿ ವಾಲ್ಮೀಕಿಯವರು ಲೋಕಕ್ಕೆ ನೀಡಿದ ಮಹಾನ ಕೃತಿಯಾಗಿದೆ.
ರಾಮಾಯಣದ ಬರುವ ಪಾತ್ರಗಳು ಇಂದಿಗೂ ಸಹಿತ ಪ್ರಸ್ತುತವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ಗಳನ್ನು ನೀಡದೇ, ಅವರಿಗೆ ದಾರ್ಶನಿಕರ, ಚಿಂತಕರ ತತ್ವಗಳನ್ನು ಬೋಧಿಸುವ ಪುಸ್ತಕಗಳನ್ನು ನೀಡಿ, ನಮ್ಮ ದೇಶದ ಭವ್ಯ ಸಂಸ್ಕೃತಿಯನ್ನು ತಿಳಿಸಬೇಕೆಂದರು.
ತಹಶೀಲ್ದಾರ ಡಿ.ಎಚ್.ಕೋಮರ, ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ಸಮಾಜದ ಮುಖಂಡ ರಾಮಣ್ಣಾ ಗಸ್ತಿ, ತಾ.ಪಂ.ಇಒ ಸುದೀಪ ಚೌಗಲಾ, ತಾಲೂಕು ಅಧಿಕಾರಿಗಳಾದ ಎಮ್.ಎಸ್.ಪಾಟೀಲ, ಪರಮಾನಂದ ಮಂಗಸೂಳೆ, ಆರ್.ಎಸ್.ಪಾಟೀಲ, ಎ.ಎಮ್.ದೇಶಿಂಗೆ, ಎಚ್.ಎ.ಭಜಂತ್ರಿ, ಡಾ.ಎಸ್.ಎಸ್.ಬಾನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ.ಪಂಗಡದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಸಮಾಜಕಲ್ಯಾಣ ಇಲಾಖೆ ಪ್ರಭಾರಿ ಸಹಾಯಕ ನಿದೇರ್ಶಕ ಎಮ್.ಎಸ್.ಪಾಟೀಲ ಸ್ವಾಗತಿಸಿದರು, ಶಂಕರಕೊಡತೆ ನಿರೂಪಿಸಿದರು, ವಾಯ್.ಬಿ.ಭಜಂತ್ರಿ ವಂದಿಸಿದರು.