ಮಹಾ ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು

ಲೋಕದರ್ಶನ ವರದಿ

ಚಿಕ್ಕೋಡಿ, ಜುಲೈ  10: ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ ಭಾರಿ ಮಳೆ ಸುರಿದಿದೆ. ಹೀಗಾಗಿ ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ಶುಕ್ರವಾರ 3.5 ಅಡಿಯಷ್ಟು ಏರಿಕೆಯಾಗಿದ್ದು, ಮೂರು ನದಿಗಳಿಗೆ 71 ಸಾವಿರ ಕ್ಯುಸೆಕ್ ನೀರು ಹರಿದು ಬರಲಾರಂಭಿಸಿದೆ.

ಕೃಷ್ಣಾ ನದಿ ಉಗಮಸ್ಥಾನ ಮಹಾಬಳೇಶ್ವರ ವ್ಯಾಪ್ತಿಯಲ್ಲಿ ಮಳೆ ನಿರಂತರವಾಗಿ ಬಿದ್ದಿದೆ. ಅದರಂತೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಚಿಕ್ಕೋಡಿ, ಅಂಕಲಿ, ನಾಗರಮುನ್ನೋಳ್ಳಿ, ಸದಲಗಾ ಹಾಗೂ ನಿಪ್ಪಾಣಿ ಭಾಗದಲ್ಲಿ ಗುರುವಾರ ಮಧ್ಯಾಹ್ನ ಮತ್ತು ರಾತ್ರಿ ಭಾರಿ ಮಳೆ ಸುರಿದೆ. ಪರಿಣಾಮ ಗಡಿ ಭಾಗದ ನದಿಗಳು ಅಬ್ಬರವಾಗಿ ಹರಿಯತೊಡಗಿವೆ.

ವೇಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಜತ್ರಾಟ-ಭೀವಸಿ ಸೇತುವೆ ಮುಳುಗುವ ಹಂತದಲ್ಲಿದೆ. ಈಗಾಗಲೇ ಚಿಕ್ಕೋಡಿ ಉಪವಿಭಾಗದ ಆರು ಸೇತುವೆಗಳು ಮುಳುಗಡೆಗೊಂಡಿವೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಲ್ಲೋಳ-ಯಡೂರ, ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ವೇಧಗಂಗಾ ನದಿಯ ಸಿದ್ನಾಳ-ಅಕ್ಕೋಳ, ಭೋಜವಾಡಿ-ಕುನ್ನೂರ, ಬಾರವಾಡ-ಕುನ್ನೂರ ಸೇತುವೆಗಳು ಮುಳುಗಡೆಗೊಂಡು ಸಂಚಾರ ಕಡಿತಗೊಂಡಿದ್ದು, ಜನರು ಸುತ್ತುಬಳಸಿ ಪ್ರಯಾಣ ಮಾಡುತ್ತಿದ್ದಾರೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜದಿಂದ ಕೃಷ್ಣಾ ನದಿಗೆ 53500 ಕ್ಯುಸೆಕ್ ನೀರು ಹದಿದು ರಾಜ್ಯ್ಕಕೆ ಬರುತ್ತಿದೆ. ದೂಧಗಂಗಾ ಮತ್ತು ವೇಧಗಂಗಾ ನದಿ ಮೂಲಕ 18 ಸಾವಿರ ಕ್ಯುಸೆಕ್ ನೀರು ಹರಿದು ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೂಡುತ್ತದೆ.  ಹೀಗಾಗಿ ರಾಜ್ಯದ ಗಡಿ ಭಾಗದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಒಟ್ಟು 71600 ಕ್ಯುಸೆಕ್ ನೀರು ಹರಿದು ಬರಲಾರಂಭಿಸಿದೆ. ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ ಮೂಲಕ 64ಸಾವಿರ ಕ್ಯುಸೆಕ್ ನೀರನ್ನು ಆಲಮಟ್ಟಿಗೆ ಹರಿದು ಬಿಡಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಮಾಹಿತಿ ನೀಡಿದರು.

ಮಳೆ ವಿವರ: ಕೋಯ್ನಾ-41 ಮಿಮೀ, ನವಜಾ-81 ಮಿಮೀ, ಮಹಾಬಲೇಶ್ವರ-55ಮಿಮೀ, ವಾರಣಾ-15 ಮಿಮೀ, ಸಾಂಗ್ಲೀ-13 ಮಿಮೀ, ಕೊಲ್ಲಾಪೂರ-8 ಮಿಮೀ, ಕಾಳಮ್ಮವಾಡಿ-44 ಮಿಮೀ, ರಾಧಾನಗರದಿ-82 ಮಿಮೀ, ಪಾಟಗಾಂವ-101 ಮಿಮೀ ಮಳೆಯಾಗಿದೆ. 

ಚಿಕ್ಕೋಡಿ ತಾಲೂಕು: ಚಿಕ್ಕೋಡಿ-33.7 ಮಿಮೀ, ಅಂಕಲಿ-54.2 ಮಿಮೀ, ನಾಗರಮುನ್ನೋಳ್ಳಿ-55.4 ಸದಲಗಾ-42 ಮಿಮೀ, ಜೋಡಟ್ಟಿ-40 ಮಳೆ ಸುರಿದಿದೆ