ಬೆಂಗಳೂರು, ಜ 9 ಪೌರತ್ವ ಕಾಯಿದೆ ತಿದ್ದುಪಡಿ ಪರ ಸಹಿ ಸಂಗ್ರಹ ವೇಳೆ ನಗರದ ಜ್ಯೋತಿ ನಿವಾಸ ಕಾಲೇಜಿನಲ್ಲಿ ಬುಧವಾರ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಕಾಲೇಜಿಗೆ ಭೇಟಿ ನೀಡಿದರು.
ಜ್ಯೋತಿ ನಿವಾಸ ಕಾಲೇಜಿಗೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಕಾಲೇಜು ವಿದ್ಯಾರ್ಥಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಇಶಾ ಪಂತ್ ಅವರು ಮಾಹಿತಿ ಕಲೆ ಹಾಕಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯ ಘಟನೆ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಘಟನೆಯ ಕುರಿತಾದ ವಿಡಿಯೋ ಪರಿಶೀಲಿಸಲಾಗಿದೆ ಎಂದು ತಿಳಿಸಿದರು.
ಪರಿಸ್ಥಿತಿ ಸಾಮಾನ್ಯವಾಗಿದೆ. ಆತಂಕ ಪಡುವ ಯಾವುದೇ ವಿಷಯವಿಲ್ಲ. ದೆಹಲಿಯ ಜೆಎನ್ ಯು ಮಾದರಿಯಲ್ಲಿ ಹಲ್ಲೆ, ಬೆದರಿಕೆ ನಡೆದಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.
ಜ್ಯೋತಿ ನಿವಾಸ ಕಾಲೇಜಿಗೆ ಶಾಸಕ ರಾಮಲಿಂಗರೆಡ್ಡಿ ಭೇಟಿ ವಿಚಾರದ ಕುರಿತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವರು ಕಾಲೇಜಿಗೆ ಹೋಗಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.