ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಮಹಾ ಚೇತನವೇ ಗುರು: ರಾಜಶೇಖರ ಪಾಟೀಲ

ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಮಹಾ ಚೇತನವೇ ಗುರು: ರಾಜಶೇಖರ ಪಾಟೀಲ The Guru is the great soul who kindles the light of knowledge: Rajashekhar Patil

ಲೋಕದರ್ಶನ ವರದಿ 

ಬೆಳಗಾವಿ 03: ಭಾರತೀಯ ಸಂಸ್ಕೃತಿಯಲ್ಲಿ ಗುರುವನ್ನು ಕೇವಲ ಒಬ್ಬ ವ್ಯಕ್ತಿಯನ್ನಾಗಿ ನೋಡದೆ, ಭವಿಷ್ಯ ರೂಪಿಸುವ ದೇವರಿಗೆ ಸಮಾನವೆಂದು ಗೌರವಿಸಲಾಗುತ್ತದೆ. ಉತ್ತಮ ಗುರುವಿನ ಮಾರ್ಗದರ್ಶನವಿದ್ದರೆ ಸಾಮಾನ್ಯ ವ್ಯಕ್ತಿಯೂ ಜಗತ್ತನ್ನೇ ಬದಲಾಯಿಸಬಲ್ಲ. ಗುರು ಕೇವಲ ಪುಸ್ತಕದ ವಿದ್ಯೆಯನ್ನು ಮಾತ್ರ ಕಲಿಸುವುದಿಲ್ಲ.

ಬದಲಿಗೆ ಸತ್ಯ, ಧರ್ಮ, ಶಿಸ್ತು, ಮಾನವೀಯತೆ ಹಾಗೂ ಪ್ರಾಮಾಣಿಕತೆಯಂತಹ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಾರೆ. ಅದಲ್ಲದೇ ನಮ್ಮೊಳಗಿನ ಅಜ್ಞಾನ, ಅಂಧಶೃದ್ದೆಯನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಮಹಾ ಚೇತನವೇ ಗುರು ಎಂದು ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ರಾಜಶೇಖರ ಪಾಟೀಲ ಅಭಿಪ್ರಾಯ ಪಟ್ಟರು. 

ಅವರು ಶನಿವಾರ ಇಲ್ಲಿನ ಶಿವಬಸವ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಶಿವಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಹಮ್ಮಿಕೊಂಡ ಮಾತೃವಂದನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. 

 ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯವನ್ನು ಪ್ರಾರಂಭಿಸಿ ಸಾವಿರಾರು ವ್ಯಕ್ತಿಗಳಿಗೆ ಅನ್ನ, ಅಕ್ಷರ ಹಾಗೂ ಆಶ್ರಯ ನೀಡಿ ಅವರ ಬದುಕು ರೂಪಿಸಿದ ಮಹಾಗುರು ಡಾ. ಶಿವಬಸವ ಮಹಾಸ್ವಾಮಿಗಳು ಈ ಶತಮಾನದ ಸಂತರಿದ್ದಂತೆ. ಗುರುಪೂರ್ಣಿಮೆಯ ಈ ಪವಿತ್ರ ದಿನದಂದು ಅವರ ಸ್ಮರಣೆ ಮಾಡುವುದು ಒಂದು ಭಾಗ್ಯ ಎಂದರು.  

ಶಾಲೆಯ ಪ್ರಾಚಾರ್ಯೆ ಪೂಜಾ ನಾಯಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ರೋಹಿಣಿ ಚಾಜಗೌಡ, ಸ್ವಾತಿ ಪೂಜಾರ, ಕರಿಷ್ಮಾ ಎಮ್ ಹಾಗೂ ಕಾರ್ತಿಕ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಮನೆಯ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ಗುರುಪೂರ್ಣಿಮೆಯ ಅಂಗವಾಗಿ ತಾಯಂದಿರನ್ನು ಗೌರವಿಸುವ ದ್ಯೋತಕವಾಗಿ ಮಾತೃ ವಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ತಮ್ಮ ತಾಯಂದಿರ ಪಾದ ಪೂಜೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 

ಶಾಲೆಯ ವಿದ್ಯಾರ್ಥಿಗಳಾದ ಅಮೀತ ಎಸ್ ಹಾಗೂ ಆಕಾಶ ನಂದಿ ಗುರುವಿನ ಮಹತ್ವ ಹಾಗೂ ತಂದೆ ತಾಯಿಗೆ ಗೌರವ ಎಂಬ ವಿಷಯಗಳ ಕುರಿತು ಸೊಗಸಾಗಿ ಮಾತನಾಡಿದರು. ವಿದ್ಯಾರ್ಥಿನಿ ಖುಷಿ ಲಮಾಣಿ ಸ್ವಾಗತಿಸಿದರು. ರಿತಿಕಾ ಮೇತ್ರಿ ನಿರೂಪಿಸಿದರು. ಚೈತ್ರಾ ಲಮಾಣಿ ವಂದಿಸಿದರು.