ಥಾಣೆಯಲ್ಲಿ ಗಣೇಶ ವಿಸರ್ಜನಾ ಘಾಟ್‌ ಬಳಿ ಈಜಲು ತೆರಳಿದ್ದ ಮೂವರು ನೀರಿನಲ್ಲಿ ಮುಳುಗಿ ಸಾವು

ಥಾಣೆಯಲ್ಲಿ ಗಣೇಶ ವಿಸರ್ಜನಾ ಘಾಟ್‌ ಬಳಿ ಈಜಲು ತೆರಳಿದ್ದ ಮೂವರು ನೀರಿನಲ್ಲಿ ಮುಳುಗಿ ಸಾವು Three Drown While Swimming in Ganesh Visarjan Ghat Creek in Thane

ಥಾಣೆ, ಆ. 30: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬೈ-ನಾಶಿಕ್ ಹೆದ್ದಾರಿ ಸಮೀಪದ ರೇಟಿಬಂದರ್‌ನ ಗಣೇಶ ವಿಸರ್ಜನಾ ಘಾಟ್‌ ಬಳಿಯ ಕ್ರೀಕ್‌ನಲ್ಲಿ ಈಜಲು ತೆರಳಿದ್ದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಸುಮಾರು 3.08ರ ವೇಳೆಗೆ ನೀರಿನ ಮಟ್ಟ ಹೆಚ್ಚಿದ್ದರೂ ಮೂವರು ಕ್ರೀಕ್‌ಗೆ ಇಳಿದಿದ್ದು, ಈ ವೇಳೆ ದುರ್ಘಟನೆ ಸಂಭವಿಸಿದೆ.

ಘಟನೆ ಕುರಿತು ಮಾಹಿತಿ ದೊರೆತ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಥಾಣೆ ವಿಪತ್ತು ನಿರ್ವಹಣಾ ಪಡೆ (TDRF) ತಂಡಗಳು ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು.

ಬಳಿಕ ಮೂವರ ಮೃತದೇಹಗಳನ್ನು ಪತ್ತೆಹಚ್ಚಿ ಕಲ್ವಾ ಪೊಲೀಸರಿಗೆ ಹಸ್ತಾಂತರಿಸಲಾಯಿತು. ನಂತರ ಮೃತದೇಹಗಳನ್ನು ಆಂಬ್ಯುಲೆನ್ಸ್ ಮೂಲಕ ಕಲ್ವಾದ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಮೃತರನ್ನು ಅಲಂ ಸಯ್ಯದ್ (42), ರಿಜ್ವಾನ್ ಸಯ್ಯದ್ (42) ಹಾಗೂ ಸಾಹಿಲ್ ಪೋಲಂದಾಜ್ (28) ಎಂದು ಗುರುತಿಸಲಾಗಿದೆ. ಮೂವರೂ ಮುಂಬ್ರಾದ ಠಾಕೂರ್ ಪಾಡಾ ನಿವಾಸಿಗಳು ಎಂದು ತಿಳಿದುಬಂದಿದೆ.