‘ಲಾಲ್‌ಬಾಗ್ ಪಿಜ್ಜಾ ಅಲ್ಲ, ತುಂಡು ತುಂಡಾಗಿ ಕತ್ತರಿಸಲು’: ಸುರ್ಯಾ ನೇತೃತ್ವದಲ್ಲಿ ಸುರಂಗ ರಸ್ತೆ ಯೋಜನೆ ವಿರೋಧಿಸಿ ಪ್ರತಿಭಟನೆ
‘Lalbagh Is Not a Pizza to Be Sliced’: Tejasvi Surya Leads Protest Against Tunnel Road Project
ಬೆಂಗಳೂರು, ಆಗಸ್ಟ್ 30: ಪ್ರಸ್ತಾವಿತ ಸುರಂಗ ರಸ್ತೆ ಯೋಜನೆ ಹಾಗೂ ಮೂಲಸೌಕರ್ಯ ಮತ್ತು ಇತರ ಉದ್ದೇಶಗಳಿಗಾಗಿ ಉದ್ಯಾನವನದ ಶೇ.5ರಷ್ಟು ಭೂಮಿಯನ್ನು ಬಳಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಲಾಲ್‌ಬಾಗ್‌ನಲ್ಲಿ ನಾಗರಿಕರ ಪ್ರತಿಭಟನೆಗೆ ನೇತೃತ್ವ ವಹಿಸಿದರು.
ಪರಿಸರವಾದಿಗಳು, ನಿತ್ಯದ ವಾಯುವಿಹಾರಿಗಳು, ವೃತ್ತಿಪರರು ಹಾಗೂ ನೂರಾರು ನಾಗರಿಕರನ್ನುದ್ದೇಶಿಸಿ ಮಾತನಾಡಿದ ಸೂರ್ಯ, ಬೆಂಗಳೂರಿನ ಪ್ರಮುಖ ಹಸಿರು ತಾಣಗಳನ್ನು ವಿಭಜಿಸಿ ಅಭಿವೃದ್ಧಿ ಯೋಜನೆಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
“ಲಾಲ್‌ಬಾಗ್ ಪಿಜ್ಜಾ ಅಲ್ಲ, ತುಂಡು ತುಂಡಾಗಿ ಕತ್ತರಿಸಲು. ಇದು ಬೆಂಗಳೂರಿನ ಆಸ್ತಿ ಮತ್ತು ಜೀವನಾಡಿ,” ಎಂದು ಅವರು ಹೇಳಿದರು.
ಬೆಂಗಳೂರಿನ ಅಭಿವೃದ್ಧಿ ಅಗತ್ಯವಿದ್ದರೂ, ಅದಕ್ಕಾಗಿ ನಗರದ ಉಳಿದಿರುವ ಹಸಿರು ಪ್ರದೇಶಗಳನ್ನು ಬಲಿಕೊಡಬಾರದು ಎಂದು ಸೂರ್ಯ ಹೇಳಿದರು.
“ಅಭಿವೃದ್ಧಿ ಎಂದರೆ ಲಾಲ್‌ಬಾಗ್‌ನಿಂದ ಐದು ಎಕರೆ, ಹೆಬ್ಬಾಳ ಕೆರೆಯಿಂದ ಮೂರೂವರೆ ಎಕರೆ ಭೂಮಿಯನ್ನು ತೆಗೆದುಕೊಳ್ಳುವುದು ಅಥವಾ ಸ್ಯಾಂಕಿ ಟ್ಯಾಂಕ್‌ಗೆ ಧಕ್ಕೆ ತರುವುದು ಅಲ್ಲ. ಹಸಿರು ಪ್ರದೇಶಗಳನ್ನು ರಕ್ಷಿಸುವುದರ ಜೊತೆಗೆ ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದೇ ಅಭಿವೃದ್ಧಿ,” ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಇದನ್ನು ರಾಜಕೀಯೇತರ ನಾಗರಿಕರ ಚಳವಳಿ ಎಂದು ಬಣ್ಣಿಸಿದರು. ಪರಿಸರವಾದಿಗಳು, ವಾಯುವಿಹಾರಿಗಳು, ಐಟಿ ವೃತ್ತಿಪರರು ಹಾಗೂ ಸಾರ್ವಜನಿಕರು ಲಾಲ್‌ಬಾಗ್‌ನ ಪಶ್ಚಿಮ ದ್ವಾರದಿಂದ ರಾಕ್ ಏರಿಯಾ ವರೆಗೆ ಪಾದಯಾತ್ರೆ ನಡೆಸಿದರು. ಲಾಲ್‌ಬಾಗ್ ರಕ್ಷಣೆಯ ಸಂಕೇತವಾಗಿ ಪ್ರತಿಭಟನಾಕಾರರು ಅಲ್ಲಿನ ಬಂಡೆಯನ್ನು ಅಪ್ಪಿಕೊಂಡರು.
ಪರಿಸರ ಹೋರಾಟಗಾರ ಎ.ಎಸ್. ಎಲ್ಲಪ್ಪ ರೆಡ್ಡಿ ಹಾಗೂ ಬೆಂಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಪಿ.ಸಿ. ಮೋಹನ್ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಉದ್ಯಾನವನದ ಭೂಮಿಯನ್ನು ಮೂಲಸೌಕರ್ಯ ಮತ್ತು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವ ನಿಯಮವನ್ನು ಹಿಂಪಡೆಯುವುದು ಹಾಗೂ ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಯನ್ನು ಕೈಬಿಡುವುದು ಪ್ರತಿಭಟನಾಕಾರರ ಎರಡು ಪ್ರಮುಖ ಬೇಡಿಕೆಗಳಾಗಿವೆ ಎಂದು ಸೂರ್ಯ ಹೇಳಿದರು.
“ನಾವು ಈಗ ತೋರಿಸುತ್ತಿರುವುದು ಕೇವಲ ಟ್ರೇಲರ್. ಉದ್ಯಾನವನದ ನಾಲ್ಕರಿಂದ ಐದು ಶೇಕಡಾ ಭೂಮಿಯನ್ನು ತೆಗೆದುಕೊಳ್ಳುವ ಪ್ರಸ್ತಾವನೆಯನ್ನು ಸರ್ಕಾರ ಹಿಂಪಡೆಯದಿದ್ದರೆ, ಪ್ರತಿವಾರ ವಿವಿಧ ಉದ್ಯಾನವನಗಳಲ್ಲಿ ಇದೇ ರೀತಿಯ ಪ್ರತಿಭಟನೆಗಳನ್ನು ನಡೆಸಿ ದೊಡ್ಡ ಜನಾಂದೋಲನ ರೂಪಿಸುತ್ತೇವೆ,” ಎಂದು ಅವರು ಎಚ್ಚರಿಸಿದರು.
ಲಾಲ್‌ಬಾಗ್ ರಕ್ಷಣೆಯ ಅಭಿಯಾನದ ಅಂಗವಾಗಿ ಪ್ರತಿಭಟನೆಯಲ್ಲಿ ಕನ್ನಡ ಗೀತೆಗಳನ್ನೂ ಹಾಡಲಾಯಿತು. ಸೂರ್ಯ ಕೂಡ ಪ್ರತಿಭಟನಾಕಾರರೊಂದಿಗೆ ಸೇರಿ ರಾಜ್‌ಕುಮಾರ್ ಅಭಿನಯದ ಚಿತ್ರದ ಹಾಡೊಂದನ್ನು ಹಾಡಿದರು.
ಪ್ರತಿಭಟನಾಕಾರರಿಗೆ, ತಮ್ಮನ್ನೂ ಒಳಗೊಂಡಂತೆ, ಪೊಲೀಸರು ನೋಟಿಸ್ ನೀಡಿರುವುದಕ್ಕೂ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದರು. ನಾಗರಿಕರು ಉದ್ಯಾನವನವನ್ನು ರಕ್ಷಿಸುವ ಉದ್ದೇಶದಿಂದ ಸ್ವಯಂಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಅವರು ಹೇಳಿದರು.
“ಲಾಲ್‌ಬಾಗ್ ರಕ್ಷಿಸುವುದು ಅಪರಾಧವಾಗಿದ್ದರೆ, ನಾವು ಪ್ರತಿದಿನ ಆ ಅಪರಾಧ ಮಾಡಲು ಸಿದ್ಧ. ಕಬ್ಬನ್ ಪಾರ್ಕ್ ರಕ್ಷಿಸುವುದು ಅಪರಾಧವಾಗಿದ್ದರೆ, ನಾವು ಪ್ರತಿದಿನ ಆ ಅಪರಾಧ ಮಾಡುತ್ತೇವೆ,” ಎಂದು ಅವರು ಹೇಳಿದರು.
ಮುಂದಿನ ಹಂತದಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಅಭಿಯಾನ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸದಿದ್ದರೆ ಕರ್ನಾಟಕದಾದ್ಯಂತ ಇದೇ ರೀತಿಯ ಪ್ರತಿಭಟನೆಗಳನ್ನು ನಡೆಸುವುದಾಗಿ ಅವರು ಎಚ್ಚರಿಸಿದರು.
ವಿವಿಧ ವೃತ್ತಿ, ಸಮುದಾಯ ಹಾಗೂ ವಯೋಮಾನದ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಯಾವುದೇ ರಾಜಕೀಯ ಪಕ್ಷದ ಹಿತಾಸಕ್ತಿಗಾಗಿ ಅಲ್ಲ, ಬೆಂಗಳೂರಿನ ಪರಿಸರ ಮತ್ತು ಹಸಿರು ಪ್ರದೇಶಗಳ ರಕ್ಷಣೆಗಾಗಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 