ಲೋಕದರ್ಶನವರದಿ
ಬ್ಯಾಡಗಿ೦೪: ನರೇಗಾ ಯೋಜನೆಯಡಿ ಗ್ರಾಮ ಪಂಚಾಯತ ವತಿಯಿಂದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದಾಗ ನಿಗದಿತ ಅವಧಿಯಲ್ಲಿ ಎಂಐಎಸ್ ಹಾಗೂ ಎಫ್ಟಿಓ ಮಾಡಿಕೊಂಡಲ್ಲಿ ಕಾರ್ಮಿಕರಿಗೆ ಶೀಘ್ರವಾಗಿ ಅನುದಾನ ಬಿಡುಗಡೆಯಾಗಲು ಸಹಕಾರಿಯಾಗುತ್ತದೆ. ಇಲ್ಲದೇ ಹೋದಲ್ಲಿ ಅನಗತ್ಯ ವಿಳಂಬಕ್ಕೆ ಗ್ರಾ.ಪಂ.ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆಂದು ಸಾಮಾಜಿಕ ಲೆಕ್ಕಪರಿಶೋಧನೆಯ ತಾಲೂಕಾ ಸಂಯೋಜಕ ಬಸವರಾಜ ಅಮಾತಿ ತಿಳಿಸಿದರು.
ಬುಧವಾರ ತಾಲೂಕಿನ ಮಲ್ಲೂರ ಗ್ರಾಮದಲ್ಲಿ ನಡೆದ ನರೇಗಾ ಯೋಜನೆ ಹಾಗೂ ಸಾಮಾಜಿಕ ಭದ್ರತೆ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಸಭೆಯಲ್ಲಿ ಮಾತನಾಡಿದ ಅವರು ನರೇಗಾ ಯೋಜನೆಯಡಿ ಕಾಮಗಾರಿ ನಿರ್ವಹಿಸಿದ ಅಕುಶಲ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡಲು ಮೊದಲ ಆದ್ಯತೆ ನೀಡಲಾಗುವುದು. ನಂತರ ಸಾಮುಗ್ರಿಗಳ ವೆಚ್ಚದ ಮೊತ್ತವನ್ನು ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುವುದೆಂದರು.
ಕಳೆದ ಸಾಲಿನ ಅಕ್ಟೋಬರ್ ತಿಂಗಳಿನಿಂದಾ ಪ್ರಸಕ್ತ ಸಾಲಿನ ಮಾರ್ಚ ತಿಂಗಳವರೆಗೆ ನರೇಗಾ ಯೋಜನೆಯಡಿ ಗ್ರಾಪಂ.ಸೇರಿದಂತೆ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಿರುವ ಕಾಮಗಾರಿಗಳ ಲೆಕ್ಕ ಪರಿಶೋಧನೆಯನ್ನು ನಡೆಸಲಾಗಿದ್ದು, ಒಟ್ಟು 107 ಕಾಮಗಾರಿಗಳನ್ನು ನಿರ್ವಹಿಸಿ ಅದಕ್ಕಾಗಿ 22.24 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ರೇಷ್ಮೆ ಇಲಾಖೆಯವರು ಅನುಷ್ಠಾನಗೊಳಿಸಿರುವ ಕಾಮಗಾರಿಯ ಕಡತವನ್ನು ನೀಡದೇ ಇರುವುದರಿಂದಾ ಸದರಿ ಕಾಮಗಾರಿಗೆ ವೆಚ್ಚ ಮಾಡಲಾಗಿರುವ 14900 ರೂ.ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ಕೃಷಿ ಇಲಾಖೆ ಅನುಷ್ಠಾನಗೊಳಿಸಿರುವ 2 ಕಾಮಗಾರಿಗಳಿಗೆ ನಾಮ ಫಲಕಗಳನ್ನು ಅಳವಡಿಸದೇ ಇರುವುದರಿಂದಾ ಅದಕ್ಕೆ ಬಳಸಿರುವ 5 ಸಾವಿರ ರೂ.ಗಳನ್ನು ವಸೂಲಾತಿಗೆ ಸೂಚಿಸಿದೆ ಎಂದು ಸಭೆಗೆ ತಿಳಿಸಿದರು.
ಸಾಮಾಜಿಕ ಭದ್ರತೆ ಯೋಜನೆಯಡಿ ಬರುವ ವಿವಿಧ ಮಾಶಾಸನಗಳ ಪಡೆಯುವ ಫಲಾನುಭವಿಗಳ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು ಮಲ್ಲೂರ ಗ್ರಾ.ಪಂ.ವ್ಯಾಪ್ತಿಯಲ್ಲಿ 970 ವಿವಿಧ ಫಲಾನುಭವಿಗಳಿದ್ದಾರೆ.
ಇದರಲ್ಲಿ 42 ಫಲಾನುಭವಿಗಳು ನಿಧನರಾಗಿದ್ದು 10 ಫಲಾನುಭವಿಗಳು ಗ್ರಾಮಗಳಲ್ಲಿ ವಾಸವಿರುವುದಿಲ್ಲ. ಅಲ್ಲದೇ 3 ಫಲಾನುಭವಿಗಳು ಡಬಲ್ ಮಾಶಾಸನವನ್ನು ಪಡೆಯುತ್ತಿರುವ ಬಗ್ಗೆ ತಮ್ಮ ಪ್ರಾಥಮಿಕ ಹಂತದ ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸಲಾಗುತ್ತಿದೆ ಎಂದರು.
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ದೇವರಾಜ ಸಣ್ಣಕರಿಗಾರ ಮಾತನಾಡಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗಿದ್ದು ಪ್ರಗತಿಯ ಹಂತದಲ್ಲಿವೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನಿಗಧಿತ ಅವಧಿಯಲ್ಲಿ ಕೂಲಿ ಕೆಲಸವನ್ನು ಒದಗಿಸಿಕೊಡಲಾಗುತ್ತಿದೆ ಎಂದರು.
ಗ್ರಾ.ಪಂ.ಅಧ್ಯಕ್ಷ ಲಕ್ಷ್ಮಣ ಮೇಗಳಮನಿ, ಸದಸ್ಯರಾದ ಸಿದ್ದಲಿಂಗಪ್ಪ ಗುರೇಮಟ್ಟಿ, ಬಸವರಾಜ ಸಂಕಣ್ಣನವರ, ಗಣೇಶಪ್ಪ ಬಡಿಗೇರ, ಸಾವಿತ್ರಮ್ಮ ಬಡಿಗೇರ, ಶಶಿಕಲಾ ವೀರನಗೌಡ್ರ, ಪಾರಮ್ಮ ಮರಿಯಮ್ಮನವರ, ನರೇಗಾ ಇಂಜನೀಯರ ಕಡೇಮನಿ. ತೋಟಗಾರಿಕೆ ಇಲಾಖೆಯ ಎಚ್.ಕೆ.ಹೊಟ್ಟೆಪ್ಪನವರ. ಅರಣ್ಯ ಇಲಾಖೆಯ ಗಣೇಶ ಬೊಮ್ಮನಹಳ್ಳಿ, ಸಾಮಾಜಿಕ ಲೆಕ್ಕಪರಿಶೋಧನೆಯ ತಂಡದ ಸದಸ್ಯರಾದ ಮಲ್ಲೇಶ ಅಳಲಗೇರಿ, ಮಂಜು ಡಮ್ಮಳ್ಳಿ, ಗ್ರಾ.ಪಂ.ಸಿಬ್ಬಂದಿ ಮಂಜು ಕುಮ್ಮೂರ, ಪ್ರಕಾಶ ಸೇರಿದಂತೆ ಇತರರಿದ್ದರು.