ಬೆಂಗಳೂರು, ಡಿ 8 : ವಿಶೇಷ ಚೇತನರಿಗೆ ನೆರವು ನೀಡುವಲ್ಲಿ ಜಿಲ್ಲಾ ಮರುವಸತಿ ಕೇಂದ್ರಗಳು (ಡಿ ಆರ್ ಸಿ) ಗಳು ಪ್ರಮುಖ ಪಾತ್ರ ವಹಿಸಿವೆ ಎಂದು ರಾಜ್ಯ ಸರ್ಕಾರದ ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕಿ ಡಾ|| ಕೆ ಲೀಲಾವತಿ ಹೇಳಿದ್ದಾರೆ. ನಾರಾಯಣ ನೇತ್ರಾಲಯ ಆಯೋಜಿಸಿದ್ದ ಆಶ್ರಯ ಸಪೋರ್ಟ್ಸ್ಪ್ನ ಸಭೆಯಲ್ಲಿ ಡಿ ಆರ್ ಸಿ ಪಾತ್ರ ಕುರಿತು ಚರ್ಚಿಸಲಾಯಿತು. ಈ ಸಭೆಯಲ್ಲಿ ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್, ಮಾತೃ ಎಜುಕೇಷನ್ ಟ್ರಸ್ಟ್ ಫಾರ್ ಬ್ಲೈಂಡ್, ಡಾ.ರೆಡ್ಡೀಸ್ ಫೌಂಡೇಷನ್ ಮುಂತಾದ ಸಂಸ್ಥೆಗಳು ಭಾಗವಹಿಸಿದ್ದವು. ನಾರಾಯಣ ನೇತ್ರಾಲಯದ ಸಿಎಂಡಿ ಡಾ.ಭುಜಂಗ ಶೆಟ್ಟಿ ಈ ಸಂದರ್ಭದಲ್ಲಿ ಮಾತನಾಡಿ, ಅಂಗವಿಕಲತೆಯುಳ್ಳ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016 ರಲ್ಲಿ 21 ಅಂಗವೈಕಲ್ಯಗಳನ್ನು ಗುರುತಿಸಲಾಗಿದ್ದು 1995 ರ ಕಾಯ್ದೆಯಲ್ಲಿ 7 ಮಾತ್ರ ಗುರುತಿಸಲ್ಪಟ್ಟಿತ್ತು ಎಂದರು. ನಾರಾಯಣ ನೇತ್ರಾಲಯ ರೋಗಿಗಳಿಗೆ ದೃಷ್ಟಿ ನೀಡಲು ಶಸ್ತ್ರಚಿಕಿತ್ಸೆ ಮಾಡುತ್ತಿದೆ. ಆದರೆ ಕೆಲ ನೇತ್ರ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ಅಥವಾ ಔಷಧದಿಂದ ದೃಷ್ಟಿ ದೋಷ ಸರಿಪಡಿಸಲು ಸಾಧ್ಯವಿಲ್ಲ ಎಂದರು. ನಾರಾಯಣ ನೇತ್ರಾಲಯ 2009 ರಲ್ಲಿ ದೃಷ್ಟಿ ಮರುವಸತಿ ವಿಭಾಗವನ್ನು ಪ್ರಾರಂಭಿಸಿದ್ದು ಇದರ ಮೂಲಕ ಕಳೆದ ಒಂದು ದಶಕದಿಂದ ಫಿಸಿಯೋಥೆರಪಿ, ಆಕ್ಯುಪೇಷನಲ್ಥೆರಪಿ, ಸ್ಪೀಚ್ ಥೆರಪಿ, ಕಾಗ್ನಿಟಿವ್ಥೆರಪಿ, ವಿಶೇಷ ಶಿಕ್ಷಣ ಮತ್ತು ಕ್ಲಿನಿಕಲ್ ಸೈಕಾಲಜಿ ಹೊಂದಿದ್ದು ವಿವಿಧ ಅಂಗವೈಕಲ್ಯ ಹೊಂದಿದ ಮಕ್ಕಳಿಗೆ ಸಮಗ್ರ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಇದು ಆಶ್ರಯ ಸಪೋರ್ಟ್ ಗ್ರೂಪ್ನ ಒಂಭತ್ತನೇ ಸಭೆಯಾಗಿದ್ದು ದಿವ್ಯಾಂಗರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಸರ್ಕಾರದಿಂದ ವಿಶೇಷ ಚೇತನರಿಗೆ ಲಭ್ಯವಿರುವ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ಸಭೆ ನಡೆಯಿತು. ಈ ಸಭೆಯಲ್ಲಿ ದೃಷ್ಟಿ ಸಮಸ್ಯೆಯುಳ್ಳ ಮಕ್ಕಳನ್ನು ಹೊಂದಿದ ಪೋಷಕರು, ದೃಷ್ಟಿ ಸಮಸ್ಯೆಯುಳ್ಳ ರೋಗಿಗಳನ್ನು ಒಳಗೊಂಡು ಸುಮಾರು 140 ಜನರು ಸಹ ಭಾಗವಹಿಸಿದ್ದರು.