ಸಂವಿಧಾನವು ಜಗತ್ತಿನಲ್ಲಿಯೇ ಶ್ರೇಷ್ಠ, ಪವಿತ್ರವಾದ ಗ್ರಂಥ

ಲೋಕದರ್ಶನ ವರದಿ

ಶೇಡಬಾಳ 28: ಭಾರತ ಸಂವಿಧಾನವು ಜಗತ್ತಿನಲ್ಲಿಯೇ ಶ್ರೇಷ್ಠ ಮತ್ತು ಪವಿತ್ರವಾದ ಗ್ರಂಥವಾಗಿದೆ. ಭಾರತದ ಪ್ರಗತಿ ಮತ್ತು ಏಕತೆಗೆ ಸ್ಫೂರ್ತಿ, ಉಜ್ವಲ ಭವಿಷ್ಯಕ್ಕೆ ಮತ್ತು ಭವ್ಯ ಭಾರತದ ನಿರ್ಮಾಣಕ್ಕೆ ಏಕೈಕ ಸೆಲೆಯಾದ ಸಂವಿಧಾನ ನಮ್ಮ ಶ್ರೇಷ್ಠ ಪರಂಪರೆ ಮತ್ತು ಸಾವಿರಾರು ವರ್ಷಗಳ ಇತಿಹಾಸವನ್ನು ಸಾರುವಂತಿದೆ ಎಂದು ಕಾಗವಾಡ ಶಿವಾನಂದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಓ.ಹಲಸಗಿ ಅವರು ಹೇಳಿದರು.

 ಅವರು ಬುಧವಾರ ದಿ. 28 ರಂದು ಕಾಗವಾಡ ಶಿವಾನಂದ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ "ಒಂದು ದೇಶ-ಒಂದು ಸಂವಿಧಾನ ಅಭಿಯಾನ" ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಭಾರತದ ಆಯಾ ಜನರಿಗೆ ಅವರದೆಯಾದಂತಹ ಧರ್ಮ ಗ್ರಂಥಗಳಿವೆ. ಆದರೆ ಭಾರತ ಸಂವಿಧಾನ ಸರ್ವರಿಗೂ ಅನ್ವಯಿಸುವ, ಪೂಜಿಸುವ, ಮನ್ನಿಸುವ ಸಂವಿಧಾನವಾಗಿದೆ. 

ಈ ಸಂವಿಧಾನ ಇಂದು ಎಪ್ಪತ್ತು ವರ್ಷ ದಾಟಿದೆ. ಇದು ಇನ್ನೂ ಸಾವಿರ ವರ್ಷ ಕಳೆದರೂ ಪ್ರಖರ ಬೆಳಕು ನೀಡುವ ಗ್ರಂಥವಾಗಿದ್ದು, ಎಲ್ಲರಿಗೂ ದಾರಿದೀಪವಾಗಿದ್ದು ವಿಶ್ವದ ದೊಡ್ಡ ಪ್ರಜಾಪ್ರಭುತ್ವವೆಂಬ ಹೆಗ್ಗಳಿಕೆ ಗಳಿಸಲು ಕಾರಣೀಕರ್ತರಾದ ಸಂವಿಧಾನ ನಿರ್ಮಾತೃಗಳಿಗೆ ನಮನ ಹೇಳಿ ಋಣಮುಕ್ತರಾಗಬೇಕಾಗಿದೆ. ಅದರ ಯಥಾವತ್ತ ಜಾರಿಯ ಜವಾಬ್ದಾರಿ ಭಾರತದ ಪ್ರಜೆಗಳಾದ ನಮ್ಮ ಕೈಯಲ್ಲಿದೆಯೆಂದು  ಹೇಳಿದರು. 

ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪದವಿ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಪಿ.ತಳವಾರ ಅವರು ಮಾತನಾಡಿ, ಭಾರತ ಸಂವಿಧಾನ ಸರ್ವಧರ್ಮಗಳನ್ನು, ಸಂಸ್ಕೃತಿಗಳನ್ನು ಸಮಾನವಾಗಿ ಪರಿಗಣಿಸುವ ಸಂವಿಧಾನವಾಗಿದೆ. ನಮ್ಮ ಸಂವಿಧಾನವು ಸಮಾನತೆ, ಸ್ವಾತಂತ್ರ್ಯತೆೆ ಮತ್ತು ಭ್ರಾತೃತ್ವವನ್ನು ತನ್ನೆಲ್ಲ ನಾಗರೀಕತೆ ನೀಡಿದ್ದು, ಅದರ ಪೀಠಿಕೆಗೆ ಯಾರೂ ಧಕ್ಕೆ ತರಲಾರದಂತಹ ಧೃಡ ಸಂವಿಧಾನ ನಮ್ಮದೆಂದು ಹೇಳುತ್ತಾ ಪೀಠಿಕೆಯಲ್ಲಿನ ಪ್ರಮುಖ ಮೌಲ್ಯಗಳನ್ನು ಎಳೆ- ಎಳೆಯಾಗಿ ಬಿಚ್ಚಿಟ್ಟರು. 

ಉಪಸ್ಥಿತಿಯನ್ನು ನೀಡಿದ ಪ.ಪೂ.ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಪಿ.ಬಿ.ನಂದಾಳೆ ಅವರು ಮಾತನಾಡಿ ವಿವಿಧತೆಯಲ್ಲಿ ಎಕತೆಯನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವೆಂದು ಹೇಳಿದರು. 

ಈ ಕಾರ್ಯಕ್ರಮದಲ್ಲಿ ಪ್ರೊ. ಜೆ.ಎನ್.ನಾಯಿಕ್, ಪ್ರೊ. ಎಂ.ಎ.ಪಾಟೀಲ, ಪ್ರೊ. ಅಮರ ಕೊರವಿ ಮತ್ತಿತರು ಉಪಸ್ಥಿತರಿದ್ದರು.  ಆರಂಭದಲ್ಲಿ ದಿವ್ಯಾಶಾಸ್ತ್ರಿ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಪ್ರೊ. ಪಿ.ಬಿ.ನಂದಾಳೆ ಅವರು ಸ್ವಾಗತಿಸಿದರು. ಪ್ರೊ. ಶ್ರೀಮತಿ. ಎಸ್.ಎಸ್.ಗಣೆ ವಂದಿಸಿದರು. ಪ್ರೊ. ಮಹಾಂತೇಶ ಮಾಳಿ ಕಾರ್ಯಕ್ರಮವನ್ನು ನಿರೂಪಿಸಿದರು.