ಪ್ರವಾಹ ಪೀಡಿತ ಪರಿಸ್ಥಿತಿಗಳ ದೈನಂದಿನ ಪರಿಸ್ಥಿತಿಯ ಅವಲೋಕನಕ್ಕಾಗಿ ಸಮಿತಿ ರಚನೆ


ಬೆಂಗಳೂರು, ಆ.18- ಅತಿವೃಷ್ಟಿ, ಪ್ರವಾಹ ಪೀಡಿತ ಪರಿಸ್ಥಿತಿಗಳ ದೈನಂದಿನ ಪರಿಸ್ಥಿತಿಯ ಅವಲೋಕನಕ್ಕಾಗಿ ಮುಖ್ಯ ಕಾರ್ಯದಶರ್ಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. 

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಬಿಡುಗಡೆ ಸೇರಿ ಅಗತ್ಯವಿರುವ ತುತರ್ು ಕ್ರಮ ಕೈಗೊಳ್ಳಲು ಈ ಸಮಿತಿಗೆ ಅಧಿಕಾರ ನೀಡಲಾಗಿದೆ. ಅಲ್ಲದೆ ನೆರೆ, ಪ್ರವಾಹ, ಭೂ ಕುಸಿತ, ಅತಿವೃಷ್ಟಿ ಇರುವ ಕಡೆ ರಕ್ಷಣಾ ಮತ್ತು ಪರಿಹಾರ  ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಪ್ರತಿ ಕ್ಷಣದ ಮಾಹಿತಿಯನ್ನು ಸಮಿತಿಯಿಂದ ಪಡೆಯಲಾಗುವುದು ಎಂದರು. 

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಜಾಜರ್್ ಆ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಆ ಜಿಲ್ಲೆಗೆ 88 ಕೋಟಿ ರೂ. ನಷ್ಟ ಹಾನಿಯಾಗಿರುವುದಾಗಿ ತಿಳಿಸಿದ್ದಾರೆ.  ಶಿವಮೊಗ್ಗ  ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮಣ್ಣ ಅವರು ಆ ಜಿಲ್ಲೆಗೆ ಮಳೆ ಅನಾಹುತದಿಂದಾಗಿ 65 ಕೋಟಿ ನಷ್ಟ ಸಂಭವಿಸಿದೆ, ಉಡುಪಿ ಜಿಲ್ಲಾ  ಉಸ್ತುವಾರಿಯಾಗಿ ಜಯಮಾಲ ಅವರು ಆ  ಜಿಲ್ಲೆಗೆ 75 ಕೋಟಿಯಷ್ಟು ಹಾನಿ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು. 

ಜನರ ಹಣಕ್ಕೆ ಲೆಕ್ಕ ಕೊಡಲಾಗುವುದು. ಪ್ರವಾಹ ಹಾಗೂ ನೆರೆ ಪೀಡಿತ ಜನರ ರಕ್ಷಣೆಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಪ್ರತಿ ಹಣಕ್ಕೂ ಲೆಕ್ಕ ಕೊಡಲಾಗುವುದು  ಎಂದರು. 

ಸಾರ್ವಜನಿಕರು ನೀಡುವ ಹಣವು ದುರ್ಬಳಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. 

ಯಾವುದೇ ಕಾರಣಕ್ಕೂ ಬಿಡಿಗಾಸು ದುರ್ಬಳಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು. 

ಕೊಡಗು ಜಿಲ್ಲೆಗೆ 31 ಕೋಟಿ ನೀಡಲಾಗಿದೆ. ಗುಡ್ಡ ಕುಸಿತದಿಂದ ರಸ್ತೆ ಹಾಳಾಗಿದ್ದು, ಮೂರು ದಿನಗಳಲ್ಲಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆ ಹಾಗೂ ಸೇತುವೆಗಳು ಹಾಳಾಗಿವೆ. ಅಗತ್ಯಬಿದ್ದರೆ ವೈಮಾನಿಕ ಸಮೀಕ್ಷೆ ನಡೆಸುವಂತೆ ಪ್ರಧಾನಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. 

ಪರಿಹಾರ ಕಾರ್ಯದಲ್ಲಿ ವಿಳಂಬವಿಲ್ಲ: 

ಅತಿವೃಷ್ಟಿ ಮತ್ತು ನೆರೆಪೀಡಿತ ಪ್ರದೇಶಗಳಲ್ಲಿ  ಪರಿಹಾರ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡುವುದಿಲ್ಲ. ಕೇಂದ್ರ ಗೃಹ ಇಲಾಖೆಯೊಂದಿಗೆ ಕಳೆದ ಒಂದು ವಾರದಿಂದ ಸಂಪರ್ಕದಲ್ಲಿದ್ದು ಮಾಹಿತಿ ನೀಡಲಾಗುತ್ತಿದೆ ಎಂದರು.