ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವಂತೆ ಕಾಂಗ್ರೆಸ್‌ ನಿಯೋಗದಿಂದ ಆಯೋಗಕ್ಕೆ ಮನವಿ

ಬೆಂಗಳೂರು, ಮೇ 22,ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಿಗದಿತ ಅವಧಿಗೆ ನಡೆಸುವಂತೆ ಕಾಂಗ್ರೆಸ್ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆಮನವಿ ಮಾಡಿದೆ. ಚುನಾವಣಾ ಆಯುಕ್ತರನ್ನು ಭೇಟಿಮಾಡಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗ, ಗ್ರಾಮ  ಪಂಚಾಯತಿಗಳ ಅಧಿಕಾರಾವಧಿಯು ಮುಕ್ತಾಯಗೊಳ್ಳುತ್ತಿದ್ದರೂ ರಾಜ್ಯ ಚುನಾವಣಾ ಆಯೋಗವು  ರಾಜ್ಯದ ಗ್ರಾಮ ಪಂಚಾಯತಿಗಳ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಪ್ರಾಮಾಣಿಕವಾಗಿ  ಪ್ರಕ್ರಿಯೆಯನ್ನು ಭಾರತೀಯ ಸಂವಿಧಾನ 1950 ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್  ರಾಜ್ ಕಾಯ್ದೆ 1993 ರ ಆಶಯದಂತೆ ಆರಂಭಿಸಿಲ್ಲದಿರುವುದು ಸಂವಿಧಾನ ವಿರೋಧಿಯಾದ  ನಡೆಯಾಗಿದೆ ಎಂದು ದೂರಿದರು.
ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ನಡೆಯಬೇಕಾದ ಚುನಾವಣಾ  ಪ್ರಕ್ರಿಯೆಗಳ ಮೇಲಿನ ಮೇಲ್ವಿಚಾರಣೆ, ಮತದಾರರ ಪಟ್ಟಿ ತಯಾರಿಸುವಿಕೆ ಮತ್ತು  ನಿಯಂತ್ರಣಗಳನ್ನು ರಾಜ್ಯ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಗೆ ನೀಡಲಾಗಿದೆ. ಸಂವಿಧಾನದ  243ಇ ವಿಧಿಯಂತೆ  ಗ್ರಾಮ ಪಂಚಾಯತಿಯೊಂದು ಮೊದಲ ಸಭೆ ನಡೆಸಿದ ದಿನಾಂಕದಿಂದ ಐದು  ವರ್ಷಗಳ ಅವಧಿಯವರೆಗೆ ಅಧಿಕಾರ ಹೊಂದಿದೆ. ಅದರಂತೆ 2015 ನೇ ಇಸವಿಯಲ್ಲಿ ನಮ್ಮ  ರಾಜ್ಯದ 6024 ಗ್ರಾಮ ಪಂಚಾಯತಿಗಳ ಸದಸ್ಯರ ಸ್ಥಾನಗಳಿಗಾಗಿ ಚುನಾವಣೆಯು ನಡೆದಿದೆ.  ಬಹುಪಾಲು ಗ್ರಾಮ ಪಂಚಾಯತಿಗಳ ಅಧಿಕಾರಾದ ಅವಧಿಯು ಇದೇ ಜೂನ್ ಮತ್ತು ಜುಲೈ ತಿಂಗಳಲ್ಲಿ  ಮುಕ್ತಾಯವಾಗುತ್ತದೆ.  ಆದ್ದರಿಂದ    ಸಂವಿಧಾನದ 73 ನೇ ತಿದ್ದುಪಡಿಯ ಉದ್ದೇಶಕ್ಕೆ  ವಿರುದ್ಧವಾಗಿ ರಾಜ್ಯ ಚುನಾವಣಾ ಆಯೋಗವು ರಾಜ್ಯದ ಗ್ರಾಮ ಪಂಚಾಯತಿಗಳಿಗೆ ನಿಗಧಿತ ಅವಧಿಯಲ್ಲಿ  ಚುನಾವಣೆಗಳನ್ನು ನಡೆಸದೆ ಇರುವುದರಿಂದ ಗ್ರಾಮಗಳ ವಿಕೇಂದ್ರೀಕೃತ ಸ್ಥಳೀಯ ಸ್ವಯಂ ಆಡಳಿತ  ವ್ಯವಸ್ಥೆಯನ್ನು ದಮನ ಮಾಡಿದಂತಾಗುತ್ತದೆ. ಇದರಿಂದ ಸಂವಿಧಾನದ 73 ನೇ ತಿದ್ದುಪಡಿಯ  ಧ್ಯೇಯೋದ್ದೇಶಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅವರು ಹೇಳಿದರು.

ಸಂವಿಧಾನಕ್ಕೆ ತಂದ ಈ ತಿದ್ದುಪಡಿಯ  ಆಧಾರದ ಮೇಲೆ ರಾಜ್ಯದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ  1993ಅನ್ನು ರೂಪಿಸಲಾಗಿದೆ.  ಈ ಕಾಯ್ದೆಯಂತೆ  ಗ್ರಾಮೀಣ ಆಡಳಿತವನ್ನು ಗ್ರಾಮ,  ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳೆಂದು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಇದರ ಮೂಲ  ಉದ್ದೇಶ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಮಾಡುವುದಾಗಿದೆ. ಈ ವ್ಯವಸ್ಥೆಯಿಂದಾಗಿ  ಗ್ರಾಮೀಣ ಪ್ರದೇಶದ ಜನತೆ ಆಡಳಿತ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಹೆಚ್ಚಿನ  ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿದಂತಾಗಿದೆ. ಈ ರೀತಿಯ ವಿಕೇಂದ್ರೀಕೃತವಾದ  ಸಾರ್ವಜನಿಕ ಸಹಭಾಗಿತ್ವದ ವ್ಯವಸ್ಥೆಯಿಂದಾಗಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು  ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಈಡೇರುವಂತಾಗಿದೆ. ಇಂಥ ಸದುದ್ದೇಶದ  ಹಿನ್ನೆಲೆಯನ್ನಿಟ್ಟುಕೊಂಡು ರೂಪಿಸಿರುವ ಸಂವಿಧಾನದ ಆಶಯಗಳನ್ನು ರಾಜ್ಯ ಚುನಾವಣಾ ಆಯೋಗವು  ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಹಾಗೂ ಆಯೋಗವು ಸಂವಿಧಾನದ ಆಶಯಗಳಿಗೆ  ಉದ್ದೇಶಪೂರ್ವಕವಾಗಿ ಅವಿಧೇಯತೆ ತೋರಿಸಿದೆ.ಅಲ್ಲದೇ ಚುನಾವಣಾ ವೇಳಾಪಟ್ಟಿ ಮತ್ತು  ಮೀಸಲಾತಿಯ ಅಧಿಸೂಚನೆಯನ್ನು ಹೊರಡಿಸಿಲ್ಲ ಎಂದು ಕಾಂಗ್ರೆಸ್ ನಾಯಕರು ದೂರಿದರು.
ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್  ರಾಜ್ ಕಾಯ್ದೆ,1993 ರ ಸೆಕ್ಷನ್ 308ಎಎ ಪ್ರಕಾರ ರಾಜ್ಯ ಚುನಾವಣಾ ಆಯೋಗವು ಪಂಚಾಯತಿಗಳ  ಹಾಲಿ ಅಧಿಕಾರಾವಧಿ ಮುಗಿಯುವ ಮೊದಲೆ ಚುನಾವಣಾ ಪ್ರಕ್ರಿಯೆಗಳನ್ನು  ಮುಕ್ತಾಯಗೊಳಿಸಬೇಕಾಗಿದೆ. ಇದಕ್ಕಾಗಿ ಚುನಾವಣಾ ವೇಳಾಪಟ್ಟಿ ಮತ್ತು ಮೀಸಲಾತಿಗಳ  ವಿವರಗಳನ್ನು ಚುನಾವಣೆಗಳ ಅಧಿಸೂಚನೆ ಹೊರಡಿಸುವ 45 ದಿನಗಳ ಮೊದಲೇ ಹೊರಡಿಸಬೇಕಾಗುತ್ತದೆ.  ಆದರೆ ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ಅಧಿಕಾರಾವಧಿ ಮುಗಿದು ಹೋಗುತ್ತಿದ್ದರೂ ಕೂಡ  ರಾಜ್ಯ ಚುನಾವಣಾ ಆಯೋಗವು ಮೀಸಲಾತಿಯ ನಿಗಧಿ, ವೇಳಾಪಟ್ಟಿಗಳ ಪ್ರಕಟ ಮುಂತಾದ ಯಾವುದೇ  ಚುನಾವಣಾ ಪ್ರಕ್ರಿಯೆಗಳನ್ನು ಪ್ರಾರಂಭಿಸಿರುವ ಕುರಿತು ಯಾವ ಮಾಹಿತಿಯೂ ಇಲ್ಲ. ಸೂಚನೆಯೂ  ಇಲ್ಲ. ಇದರಿಂದಾಗಿ ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್  ರಾಜ್ ಕಾಯ್ದೆಯ ಸೆಕ್ಷನ್ 308ಎಎ ಅನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘನೆ ಮಾಡಿದೆ  ಮತ್ತು ಕಾಯ್ದೆಯ ಕುರಿತು ಸಂಪೂರ್ಣ ನಿರ್ಲಕ್ಷ್ಯ ತೋರಿದೆ.  ಆದ್ದರಿಂದ ರಾಜ್ಯ  ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಜವಾಬ್ಧಾರಿಯನ್ನು ನ್ಯಾಯಬದ್ಧವಾಗಿ,  ಪಕ್ಷಪಾತರಹಿತವಾಗಿ ರಾಷ್ಟ್ರದ ಸಂವಿಧಾನ ಹಾಗೂ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್  ರಾಜ್ ಕಾಯ್ದೆ 1993 ರಂತೆ ನೈಜ ಸ್ಫೂರ್ತಿಯಿಂದ ವರ್ತಿಸಿ ಪ್ರಜಾಪ್ರಭುತ್ವದ ಆಶಯಗಳನ್ನು  ಎತ್ತಿ ಹಿಡಿಯಬೇಕೆಂದು ಕಾಂಗ್ರೆಸ್ ನಿಯೋಗ ಆಗ್ರಹಿಸಿದೆ.