ಶಿಗ್ಗಾವಿ 22: ಪ್ರತಿಯೊಂದು ಸಮುದಾಯಕ್ಕೂ ಅವರದೇ ಆದ ಮಾತೃಭಾಷೆ ಇರುತ್ತದೆ. ಆ ಭಾಷೆಯೇ ಅವರ ಸಂಸ್ಕೃತಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಹಾಗಾಗಿ ಪ್ರತಿಯೊಂದು ಸಂಸ್ಕೃತಿಯ ರೂವಾರಿ ಮಾತೃಭಾಷೆಯೇ ಆಗಿರುತ್ತದೆ ಎಂದು ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ.ಬಿ.ನಾಯಕ ಅವರು ಪ್ರತಿಪಾದಿಸಿದರು.
ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ನಡೆದ ಮಾತೃಭಾಷಾ ದಿವಸ್ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ, ಒಂದು ಸಮುದಾಯದ ಜೀವನ ಪದ್ಧತಿ, ಆಚರಣೆ, ಸಂಪ್ರದಾಯದಂತಹ ಸಾಂಸ್ಕೃತಿಕ ಪರಂಪರೆಯನ್ನು ನಾಶ ಮಾಡಬೇಕಾಗಿದ್ದರೆ ಮಾತೃಭಾಷೆಯ ಬೆಳವಣಿಗೆಗೆ ಅವಕಾಶ ಕೊಡದಿದ್ದರೆ ತನ್ನಿಂದ ತಾನೆ ನಾಶವಾಗಿ ಬಿಡುತ್ತದೆ. ಇಂದಿನ ಜಾಗತಿಕರಣ ಸಂದರ್ಭದಲ್ಲಿ ಜಗತ್ತಿನಾದ್ಯಶಶಂತ ಅನೇಕ ಸಣ್ಣಪುಟ್ಟ ಭಾಷೆಗಳು ಮರೆಯಾಗುತ್ತವೆ. ಅದರಲ್ಲಿ ಕನ್ನಡವೂ ಸಹ ಇದೇ ಎನ್ನುವುದು ಆಶ್ಚರ್ಯದ ಸಂಗತಿಯಾಗಿದ್ದು, ಇನ್ನು ಇಪ್ಪತ್ತು ವರ್ಷಗಳ ನಂತರ ಕನ್ನಡವೂ ನಾಶದ ದಾರಿಯನ್ನು ಹಿಡಿಯುತ್ತದೆ ಎಂದು ಸಮೀಕ್ಷೆ ಹೇಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ಎನ್ನುವುದು ಅಷ್ಟೊಂದು ಅಶಕ್ತ ಭಾಷೆ ಅಲ್ಲ. ಅದು ತುಂಬಾ ಸತ್ವಯುತವಾದ ಭಾಷೆಯಾಗಿದ್ದು ಅದರ ಸಾವು ಸರಳವಲ್ಲ. ಏಕೆಂದರೆ ಈ ಭಾಷೆಯ ಮೇಲೆ ನೂರಾರು ವರ್ಷಗಳ ದಬ್ಬಾಳಿಕೆಯಾಗಿದ್ದರೂ ಅದನ್ನೆಲ್ಲವನ್ನು ಅರಗಿಸಿಕೊಂಡು ತನ್ನತನವನ್ನು ಉಳಿಸಿಕೊಂಡು ಬಂದಿದೆ. ಹಾಗಂತ ನಾವು ಕನ್ನಡಿಗರು ಅಲಕ್ಷ ಮಾಡಬಾರದು. ಮಾತೃ ಭಾಷೆಯ ಅಭಿಮಾನ ರಕ್ತದ ಕಣಕಣದಲ್ಲಿಯೂ ಹರಿದಾಡುತ್ತಿರಬೇಕು. ಜನನಿ ಜನ್ಮ ಭೂಮಿಶ್ಚ ಸ್ವರ್ಗ ಎನ್ನುವಂತೆ ಜನನಿ ಭಾಷೆಯೂ ಸಹ ಸ್ವರ್ಗವೇ ಎನ್ನುವಂತ ಭಾಷಾಭಿಮಾನ ನಮ್ಮದಾಗಬೇಕು. ವ್ಯಕ್ತಿ ಉನ್ನತ ಸ್ಥಾನಕ್ಕೆ ಹೊದಂತೆಲ್ಲಾ ತನ್ನ ಮಾತೃ ಭಾಷೆಯನ್ನು ಮಾತಾಡುವುದು ಅವಮಾನದ ಎಂದು ಭಾವಿಸುತ್ತಾನೆ. ಅಂಥ ಕೀಳು ಭಾವನೆಯಿಂದ ನಾವು ಹೊರಬರಬೇಕು. ನಾವು ಉನ್ನತ ಸ್ಥಾನ ಎರಲು ಈ ಮಾತೃ ಭಾಷೆಯೇ ಮೊದಲ ಮೆಟ್ಟಿಲು ಎಂಬ ಅರಿವು ನಮ್ಮಲ್ಲಿರಬೇಕು ಎಂದು ಹೇಳಿದರು.
ನಮ್ಮ ತಾಯಿಯ ನುಡಿಗಳೇ ನಮಗೆ ಮಾತನಾಡು ಶಕ್ತಿ ಕಲಿಸಿದ್ದರಿಂದ ಬೇರೆ ಭಾಷೆಯನ್ನು ಕಲಿಯಲು ಸಾಧ್ಯವಾಯಿತು. ತಾಯಿ ತನ್ನ ಭಾಷೆಯನ್ನು ಕಲಿಸದೆ ಮೂಖನನ್ನಾಗಿ ಮಾಡಿದ್ದರೆ ಯಾವ ಭಾಷೆಯನ್ನೂ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಮಾತೃ ಭಾಷೆ ಎನ್ನುವುದು ಹಲವು ಭಾಷೆಯ ಕಲಿಕೆಯ ಜೀವನಾಡಿ ಎಂದು ಅಭಿಪ್ರಾಯಿಸಿದರು.
ಜಾನಪದ ವಿವಿಯ ಕನ್ನಡ ಮತ್ತು ಜಾನಪದ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಚ್.ಎಚ್.ನದಾಫ ಅವರು ಮಾತೃಭಾಷೆ ಕುರಿತು ಮಾತನಾಡಿ, ಬಹುಸಂಸ್ಕೃತಿಯುಳ್ಳ ಭಾರತದಂತಹ ದೇಶದಲ್ಲಿ ಹಲವಾರು ಭಾಷೆಗಳು ಮಾತೃಸ್ಥಾನವನ್ನು ಪಡೆದುಕೊಂಡಿದ್ದು ಅವೆಲ್ಲವೂ ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಸಾಕ್ಷಿಯಾಗಿವೆ. ನಾವು ಒಂದು ಭಾಷೆಯನ್ನು ಕಡೆಗಣಿಸಿದರೂ ಒಂದು ಸಂಸ್ಕೃತಿಯನ್ನು ಕಡೆಗಣಿಸಿದಂತೆಯೇ. ಈ ಕಡೆಗಣಿಸುವ ಭಾವನೆ ಭಾರತೀಯರಲ್ಲಿ ಬರಬಾರದೆಂದೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ಈ ಮಾತೃ ದಿವಸ್ ಆಚರಣೆಯನ್ನು ಜಾರಿಗೆ ತಂದಿದೆ. ಈ ಮೂಲಕ ನಾವು ಪ್ರತಿಯೊಂದು ಸಣ್ಣ ಸಣ್ಣ ಭಾಷೆಗಳಿಗೂ ಗೌರವಕೊಟ್ಟು ಯಾವ ಭಾಷೆಯೂ ದೊಡ್ಡದಲ್ಲ ಯಾವ ಭಾಷೆಯೂ ಸಣ್ಣದಲ್ಲ ಅವರವರ ಭಾಷೆಗಳೇ ಅವರಿಗೆ ದೊಡ್ಡದಾಗಿದ್ದು ಜ್ಞಾನ ನೀಡುವ ಮಾಧ್ಯಮವಾಗಿವೆ ಎಂದರು.
ಮಗುವಿನ ಬೌದ್ಧಿಕ ಬೆಳವಣಿಗೆಯಲ್ಲಿ ಮಾತೃಭಾಷೆ ಪಧಾನ ಪಾತ್ರವಹಿಸುತ್ತದೆ. ಯಾರು ತಮ್ಮ ಮಾತೃ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುತ್ತಾರೆಯೇ ಅಂಥವರಿಗೆ ಇನ್ನೊಂದು ಭಾಷೆಯನ್ನು ಕಲಿಯುವುದು ಸರಳವಾಗುತ್ತದೆ. ತನ್ನ ಮಾತೃ ಭಾಷೆಯೇ ಸರಿಯಾಗಿ ಬರಲಿಲ್ಲಾ ಅಂದರೆ ಅವರು ಇನ್ನೊಂದು ಭಾಷೆಯನ್ನು ಗ್ರಹಿಸಿಕೊಳ್ಳುವುದು ಕಷ್ಟದಾಯಕವೆನಿಸುತ್ತದೆ. ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಮಾತೃಭಾಷೆ ತುಂಬಾ ಅನಿವಾರ್ಯ. ಪ್ರತಿಯೊಂದು ಸಮುದಾಯವು ತಮ್ಮ ತಮ್ಮ ನಾಡಿನ ಪರಂಪರೆಯನ್ನು, ಇತಿಹಾಸವನ್ನು, ಸಂಸ್ಕೃತಿಯನ್ನು, ರೀತಿ-ನೀತಿ, ನಡವಳಿಕೆ, ಪದ್ಧತಿಯನ್ನು ತಮ್ಮ ಮಾತೃಭಾಷೆಯ ಮೂಲಕ ಕಟ್ಟಿಕೊಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದೊಂದು ಸಮುದಾಯದ ಸಂಸ್ಕೃತಿಯನ್ನು ಅರಿಯಬೇಕಾದರೆ ಅವರ ಮಾತೃಭಾಷೆಯನ್ನು ಅರಿಯುವುದು ಅತ್ಯಅವಶ್ಯಕವಾಗಿದೆ ಎಂದು ಹೇಳಿದರು.
ಮಾತೃಭಾಷೆಯ ಅವಶ್ಯಕ ಎಂಬ ಪರಿಜ್ಞಾನದ ಹಿನ್ನೆಲೆಯಲ್ಲಿಯೇ ಕ್ರೈಸ್ತ ಮಿಶನರಿಗಳು ಕನ್ನಡಿಗರ ಸಂಸ್ಕೃತಿಯನ್ನು ಅರಿಯಲು ಈ ನಾಡಿನ ಮಾತೃಭಾಷೆಯನ್ನು ಕಲಿಯಲು ಮುಂದಾದರು. ಅದರ ಪರಿಣಾಮವಾಗಿ ರೈಸ್, ಕಿಟೇಲ್, ಪ್ಲೀಟ್ ರಂತಹ ವಿದ್ವಾಂಸರು ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು ನಮಗೆ ಉದಾಹರಣೆಯಾಗುತ್ತಾರೆ. ಕನ್ನಡದ ಮೌಖಿಕ ಮತ್ತು ಗ್ರಂಥಸ್ಥ ಸಾಹಿತ್ಯವನ್ನು ಸಂಗ್ರಹಿಸಿ, ಪ್ರಕಟಿಸಿ ಕನ್ನಡದ ಮಹತ್ವ ಸಾರುವುದರೊಂದಿಗೆ ತಾವು ಸಹ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡರು. ಹೀಗೆ ಪ್ರತಿಯೊಂದೂ ಮಾತೃಭಾಷೆಯಲ್ಲಿಯೂ ತನ್ನದೇಯಾದ ಶ್ರೀಮಂತಿಕೆ ಇರುತ್ತದೆ . ಆ ಶ್ರೀಮಂತಿಕೆಯನ್ನು ಕಾಪಾಡುವುದು ನಮ್ಮೇಲ್ಲರ ಹೊಣೆಗಾರಿಕೆ ಇದೆ ಎಂದು ತಿಳಿಸಿದರು.
ವಿವಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ಎಚ್ ಮಂಜು ಅವರು ಸ್ವಾಗತಿಸಿದರು, ಶ್ರೀ ಬ.ಶಿ.ಮಲ್ಲಾಪೂರಮಠ ಅವರು ಕಾರ್ಯಕ್ರಮದ ನಿರ್ವಹಿಸಿದರು. ಡಾ.ರಾಜಶೇಖರ ಡೊಂಬರಮತ್ತೂರ ಅವರು ವಂದಿಸಿದರು.