ಅರ್ಧದಷ್ಟು ಗ್ರೂಪ್ ಬಿ, ಸಿ ಉದ್ಯೋಗಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ, ಮಾರ್ಚ್ 19,ದೇಶದಲ್ಲಿ ವ್ಯಾಪಿಸುತ್ತಿರುವ ಕೊರೊನವೈರಸ್ ಸೋಂಕು ಹಿನ್ನೆಲೆಯಲ್ಲಿ, ಗ್ರೂಪ್ ಬಿ ಮತ್ತು ಗ್ರೂಪ್ ಸಿ ಉದ್ಯೋಗಿಗಳಲ್ಲಿ ಶೇ 50 ಜನರು ಮನೆಯಿಂದ ಕಾರ್ಯ ನಿರ್ವಹಿಸುವಂತೆ ಕೇಂದ್ರ ಸರ್ಕಾರ ಗುರುವಾರ ಸೂಚಿಸಿದೆ.ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ಮುಖ್ಯಸ್ಥರಿಗೆ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಹೊರಡಿಸಿರುವ  ಆದೇಶದಲ್ಲಿ  ತಮ್ಮ ಇಲಾಖೆಗಳಲ್ಲಿನ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಉದ್ಯೋಗಿಗಳಲ್ಲಿ ಅರ್ಧದಷ್ಟು ಮಾತ್ರ ಉದ್ಯೋಗಿಗಳು ಕಚೇರಿಯಲ್ಲಿ ಕೆಲಸ ಮಾಡಬೇಕು. ಉಳಿದ ಅರ್ಧದಷ್ಟು ಉದ್ಯೋಗಿಗಳು ತಮ್ಮ ಮನೆಯಿಂದ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ. ಗ್ರೂಪ್ ಬಿ ಮತ್ತು ಸಿ ಸಿಬ್ಬಂದಿಗೆ ವಾರದ ರೋಸ್ಟರ್ ನಂತೆ ಕರ್ತವ್ಯದ ಕರಡು ಸಿದ್ಧಪಡಿಸಲು ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿರುವ ಸಚಿವಾಲಯ, ಪರ್ಯಾಯ ವಾರಗಳಲ್ಲಿ ಕಚೇರಿಗೆ ಹಾಜರಾಗುವಂತೆ ಉದ್ಯೋಗಿಗಳಿಗೆ ಸೂಚಿಸಬೇಕು ಎಂದು ಹೇಳಿದೆ.ಕಚೇರಿಗೆ ಬರುವ ನೌಕರರು ಮೂರು ಪಾಳಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎ ಗ್ರೂಪ್‍ ನ ನೌಕರರು ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ, ಬಿ ಗ್ರೂಪ್‍ ನ ನೌಕರರು  ಬೆಳಿಗ್ಗೆ 9.30 ರಿಂದ ಸಂಜೆ 6 ರವರೆಗೆ, ಸಿ ಗ್ರೂಪ್‍ ನ ನೌಕರರು ಬೆಳಿಗ್ಗೆ 10 ರಿಂದ ಸಂಜೆ 6.30 ರವರೆಗೆ  ಕಾರ್ಯ ನಿರ್ವಹಿಸಬಹುದಾಗಿದೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದ್ದು, ಏಪ್ರಿಲ್ 4 ರವರೆಗೆ ಜಾರಿಯಲ್ಲಿರುತ್ತದೆ. ‘ಒಂದು ನಿರ್ದಿಷ್ಟ ದಿನದಂದು ಮನೆಯಿಂದ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಎಲ್ಲಾ ಸಮಯದಲ್ಲೂ ದೂರವಾಣಿ ಮತ್ತು ವಿದ್ಯುನ್ಮಾನ ಸಂವಹನ ಸೇವೆಗಳಲ್ಲಿ ಲಭ್ಯವಿರಬೇಕು. ಯಾವುದೇ ಕೆಲಸಕ್ಕೆ ಕರೆದರೆ ನೌಕರರು ಕಚೇರಿಗೆ ಹಾಜರಾಗಬೇಕು’ ಎಂದು ಸಚಿವಾಲಯ ಹೇಳಿದೆ.ಆದರೂ, ಅಗತ್ಯ, ತುರ್ತು ಸೇವೆಗಳಲ್ಲಿ ತೊಡಗಿರುವ ಕಚೇರಿಗಳು ಮತ್ತು ಉದ್ಯೋಗಿಗಳಿಗೆ ಮತ್ತು ಕೊರೊನಾವೈರಸ್ ಹರಡುವುದನ್ನು ನಿಯಂತ್ರಿಸುವ ಕ್ರಮಗಳಲ್ಲಿ ನೇರವಾಗಿ ತೊಡಗಿರುವವರಿಗೆ ಈ ಸೂಚನೆಗಳು ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.