ಆಪರೇಷನ್ ಕಮಲ ಯಡಿಯೂರಪ್ಪರ ಹುಟ್ಟುಚಾಳಿ: ಎಚ್.ಡಿ.ಕುಮಾರಸ್ವಾಮಿ

H D KUMAR SWAMI


ಮಂಡ್ಯ,  ನ. 27- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಆಪರೇಷನ್ ಕಮಲ ಎನ್ನುವುದು ಹುಟ್ಟು  ಚಾಳಿ. "ಬಾಂಬೆ ಕಳ್ಳ"ನನ್ನು ಪಕ್ಷಕ್ಕೆ ಸೇರಿಸಿ ತಪ್ಪು ಮಾಡಿದೆ ಎಂದು ಜೆಡಿಎಸ್  ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ದೇವರಾಜ ಪರ ಪ್ರಚಾರ ನಡೆಸಿ ಕಿಕ್ಕೇರಿ ಹೋಬಳಿಯಲ್ಲಿ ನಡೆದ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

2008  ರಲ್ಲಿ 25-40 ಕೋಟಿ ರೂ.ಕೊಟ್ಟು ಯಡಿಯೂರಪ್ಪ ಶಾಸಕರನ್ನು ಖರೀದಿಸಿದ್ದರು. ಈಗ 17  ಶಾಸಕರನ್ನು ಕಿಕ್ಕೇರಿಯ ಸಂತೆಯಲ್ಲಿ ದನ, ಕುರಿ, ಕೋಳಿಯನ್ನು ಖರೀದಿಸಿದಂತೆ ಯಡಿಯೂರಪ್ಪ  ಖರೀದಿಸಿದ್ದಾರೆ‌. ಮೈತ್ರಿ ಸರ್ಕಾರದಲ್ಲಿ ತಾವು ಮನಸು ಮಾಡಿದ್ದರೆ ಬಿಜೆಪಿಯ ಶಾಸಕರನ್ನು  ಖರೀದಿಸಬಹುದಿತ್ತು. ಆದರೆ ತಾವೆಂದೂ ಜನತೆಯ ತೆರಿಗೆಯ ಹಣವನ್ನು ಅಕ್ರಮಗಳಿಗೆ  ಬಳಸಲಿಲ್ಲ. ತೆರಿಗೆಯ ಹಣ ಎಂದರೆ ದೇವರ ಹಣ ಎಂದು ಭಾವಿಸಿದವರು ನಾವು‌. ಇದು ನಮ್ಮ ತಂದೆ  ಕಲಿಸಿಕೊಟ್ಟ ಗುಣ ಎಂದರು.

ಈಗ ಬೂಕನಕೆರೆಯ ಮಗ ಎಂದು ಹೇಳುವ ಯಡಿಯೂರಪ್ಪಗೆ ಹಿಂದೆ  ಮಂಡ್ಯ ಜಿಲ್ಲೆಯ ನೆನಪಾಗಲಿಲ್ಲವೇ. ಈಗ ಮಂಡ್ಯದ ಅಭಿವೃದ್ಧಿಯಾಗಿದೆಯೇ ಎಂದು ಪ್ರಶ್ನಿಸಿದ  ಕುಮಾರಸ್ವಾಮಿ, 2008ರಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯ ಕ್ಷೇತ್ರಗಳನ್ನು  ದತ್ತು ಪಡೆದುಕೊಳ್ಳುವುದಾಗಿ ಹೇಳಿದ್ದ ಅವರು ಇದೂವರೆಗೂ ಏಕೆ ಯಾವ ತಾಲೂಕನ್ನು  ಅಭಿವೃದ್ಧಿಪಡಿಸಿಲ್ಲ ಎಂದು ತಿರುಗೇಟು ನೀಡಿದರು.

2013 ರಲ್ಲಿ ಬಾಂಬೆ  ಕಳ್ಳನಿಗೆ ಪಕ್ಷದಿಂದ ಟಿಕೆಟ್ ಕೊಡಲು ವಿರೋಧಿಸಿದ್ದೆ. ನನ್ನ ತಂಗಿಯ ಸಹಾಯದಿಂದ ಟಿಕೆಟ್  ಪಡೆದಿದ್ದ. 2018 ರಲ್ಲಿ ಮತ್ತೆ ಈ ಮೋಸಗಾರನಿಗೆ ಬಿ.ಫಾರಂ ನೀಡಿ  ಅನುಭವಿಸುವಂತಾಯಿತು‌. ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡಲಿಲ್ಲ‌ ಎಂದು ಸುಳ್ಳು ಆರೋಪ  ಮಾಡುವ ನಾರಾಯಣಗೌಡ ಬಜೆಟ್ ಚರ್ಚೆಯ ಸಂದರ್ಭದಲ್ಲಿ ಬಿಜೆಪಿಯ ಮಾತು ಕೇಳಿ ಬಾಂಬೆ  ಆಸ್ಪತ್ರೆಯಲ್ಲಿ ನಾಟಕವಾಡುತ್ತಿದ್ದ‌. ಅಮೆರಿಕಾದಲ್ಲಿ ಆದಿಚುಂಚನಗಿರಿ ಸ್ವಾಮೀಜಿ ಜೊತೆ  ಕಾರ್ಯಕ್ರಮದಲ್ಲಿದ್ದಾಗ ಇಲ್ಲಿ ನಾರಾಯಣಗೌಡ ಬಾಂಬೆಗೆ ಫ್ಲೈಟ್ ಹತ್ತಿದ್ದ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ಭಾಷಣದಲ್ಲಿ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ನಾರಾಯಣಗೌಡ  ತಮಗೆ ಬರೆದ ಪತ್ರವನ್ನು ಓದಿದ ಕುಮಾರಸ್ವಾಮಿ, "ರಾಜಕೀಯವಾಗಿ ಅನಾಥನಾಗಿರುವ ತಮಗೆ  ದೇವೇಗೌಡ ಚೆನ್ನಮ್ಮರೇ ರಾಜಕೀಯವಾಗಿ ತಂದೆತಾಯಿ. ಕುಮಾರಣ್ಣನೇ ಸಹೋದರ, ರಾಜಕೀಯವಾಗಿ ನಾನು  ನಿಮ್ಮ ಕುಟುಂಬದ ಕುಡಿ. ನಿಮ್ಮ ಸಹಕಾರ ಜನ್ಮ ಇರುವವರೆಗೂ ಸ್ಮರಿಸುವೆ" ಎಂದು  ನಾರಾಯಣಗೌಡ ಬರೆದಿದ್ದನ್ನು ಜನರ ಮುಂದೆ ಉಲ್ಲೇಖಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಪುತ್ರ ನಿಖಿಲ್ ಪರಾಜಯಗೊಂಡಿದ್ದನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದರು.

ನಾಡಿನ  ಜನತೆಗೆ ನಾನು ಏನು ದ್ರೋಹ ಮಾಡಿದ್ದೆ ಎಂದು ಮಂಡ್ಯ ಜಿಲ್ಲೆಯಲ್ಲಿ ಮಗನನ್ನು  ಸೋಲಿಸಿದ್ದೀರಿ. ಜಿಲ್ಲೆಯ ಜನರೇ ಕೈಬಿಟ್ಟ ಮೇಲೆ ಮುಖ್ಯಮಂತ್ರಿ ಸ್ಥಾನ ಎನ್ನುವುದು  ಯಕಶ್ಚಿತ. ಮಂಡ್ಯದಲ್ಲಿ ಸೋತ ದಿನದಿಂದ‌ ರಾಜಕೀಯದಲ್ಲಿ ಇರಬೇಕೇ ಬೇಡವೇ? ಎಂದು  ಯೋಚಿಸುತ್ತಿದ್ದೇನೆ‌. ಜನರೇ ಕೈಬಿಟ್ಟ ಮೇಲೆ ಸ್ವಾಭಿಮಾನ ಎಲ್ಲಿ ಉಳಿಯುತ್ತದೆ ಎಂದು  ಕುಮಾರಸ್ವಾಮಿ ಗದ್ಗದಿತರಾದರು.

ಮೈತ್ರಿ ಸರ್ಕಾರದಲ್ಲಿ ಒಂದೂ ದಿನವೂ ನೆಮ್ಮದಿಯಾಗಿ  ಇರಲಿಲ್ಲ. ಜನರಿಗಾಗಿ ರೈತರ ಸಾಲಮನ್ನಾ ಮಾಡುವುದಕ್ಕಾಗಿ ಗುಲಾಮನಂತೆ ಇರಬೇಕಾಯಿತು. ನನ್ನ  ಕಣ್ಣೀರಿನ ಬಗ್ಗೆ ಮಾಧ್ಯಮಗಳು ಹೇಗಾದರೂ ವಿಶ್ಲೇಷಿಸಲಿ, ಏನಾದರೂ  ಬರೆದುಕೊಳ್ಳಲಿ. ಜನರಿಗಾಗಿ ಕಣ್ಣೀರು ಸುರಿಸುತ್ತಿರುವುದು ಸತ್ಯ. ತಾವು ಭಾವನಾತ್ಮಕ  ಜೀವಿ,‌ ಮನುಷ್ಯತ್ವ ಇರುವ ವ್ಯಕ್ತಿ. ಹೀಗಾಗಿ ಸಹಜವಾಗಿಯೇ ಕಣ್ಣೀರು ಬಂದೇ ಬರುತ್ತದೆ ಎಂದು  ಸ್ಪಷ್ಟಪಡಿಸಿದರು.

ಕೆ.ಆರ್.ಪೇಟೆ ತಾಲೂಕಿಗೆ ಏನೂ ಕೊಟ್ಟಿಲ್ಲ ಎಂದು ನಾರಾಯಣಗೌಡ  ಸುಳ್ಳು ಹೇಳಬಹುದು, ಆದರೆ ಸಾಕ್ಷಿ ಕಡತಗಳು ಸುಳ್ಳು ಹೇಳುವುದಿಲ್ಲ‌. ಮಂಡ್ಯ ಜಿಲ್ಲೆಯ  ಸಕ್ಕರೆ ಕಾರ್ಖಾನೆಯನ್ನು ತಾವು ಮುಚ್ಚಿಲ್ಲ. ಬದಲಾಗಿ 450 ಕೋಟಿ ರೂ.ವೆಚ್ಚದ ಹೊಸ  ಕಾರ್ಖಾನೆ ನಿರ್ಮಾಣಕ್ಕೆ ಬಜೆಟ್ ಮಂಡಿಸಲಾಗಿದೆ. ಯಡಿಯೂರಪ್ಪಗೆ ನಿಜವಾಗಿಯೂ ಮಂಡ್ಯದ  ಬಗ್ಗೆ ಕಾಳಜಿ ಇರುವುದೇ ಆದಲ್ಲಿ ತಾವು ಬಜೆಟ್‌ಗಾಗಿ ಮೀಸಲಿಟ್ಟ ಹಣದಲ್ಲಿ ಹೊಸ ಕಾರ್ಖಾನೆ  ನಿರ್ಮಿಸಿ ತೋರಿಸಲಿ ಎಂದು ಕುಮಾರಸ್ವಾಮಿ ಯಡಿಯೂರಪ್ಪಗೆ ಸವಾಲು ಹಾಕಿದರು.

ರಾಜ್ಯಕ್ಕೆ ಈ ಉಪಚುನಾವಣೆಯ ಅವಶ್ಯಕತೆಯೇ ಇರಲಿಲ್ಲ. ಕುತಂತ್ರದ ರಾಜಕಾರಣ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಕಸಿದುಕೊಂಡಿತು. ಕೆ.ಆರ್.ಪೇಟೆ  ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ ಅಭ್ಯರ್ಥಿ ದೇವರಾಜ್ ಪರ ಮತಯಾಚಿಸಿದ್ದು, ಪಕ್ಷದ  ಗೆಲುವಿಗೆ ಕಾರ್ಯಕರ್ತರು ದುಡಿದು ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಾಜಿ  ಸಚಿವ,ಜೆಡಿಎಸ್ ಹಿರಿಯ ಮುಖಂಡ ಹೆಚ್.ಡಿ.ರೇವಣ್ಣ ಮಾತನಾಡಿ, ಬಿಜೆಪಿ ಸರ್ಕಾರ  ಅಧಿಕಾರಕ್ಕೆ ಬಂದಾಗಿನಿಂದ ಯಡಿಯೂರಪ್ಪ ಮತ್ತು ಅವರ ಮಕ್ಕಳು ಬೆಳೆಯತೊಡಗಿದ್ದಾರೆ.‌

ಯಡಿಯೂರಪ್ಪ ನೇತೃತ್ವದ ಸರ್ಕಾರ ಶೇ.10 ಪರ್ಸಂಟೇಜ್ ಸರ್ಕಾರ. ಪರ್ಸಂಟೇಜ್ ಕೊಡದೇ ಹೋದರೆ ಇಲ್ಲಿ ಯಾವ ಬಿಲ್ಲೂ ಪಾಸಾಗುವುದಿಲ್ಲ ಎಂದು ಟೀಕಿಸಿದರು.

ಜನರ ಶಾಪ ಈ ಸರ್ಕಾರಕಿದ್ದು, ಆ ಶಾಪದಿಂದಲೇ ಬಿಜೆಪಿ ಸರ್ಕಾರ ನಾಶವಾಗಲಿದೆ.ಡಿ.9 ರ ಬಳಿಕ ಯಡಿಯೂರಪ್ಪ ಸರ್ಕಾರ ಅಸ್ತಿರಗೊಳ್ಳಲಿದೆ ಎಂದು ಭವಿಷ್ಯ ನುಡಿದರು‌.

ಈ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಸಿ‌.ತಮ್ಮಣ್ಣ, ಅಭ್ಯರ್ಥಿ ದೇವರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.