ದಾವಣಗೆರೆ, ನ 27- ಡಿಸೆಂಬರ್ 5 ರಂದು ನಡೆಯಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ ಎಂದು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಬುಧವಾರ ಕೇಸರಿ ಪಕ್ಷದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಚುನಾವಣೆಗೆ ಸ್ಪರ್ಧಿಸಿರುವ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸುವ ಭರವಸೆ ನೀಡಿಯೂ, ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಭಾರಿ ಪ್ರಮಾಣದ ಹಣ ಬಳಸುತ್ತಿದೆ ಎಂದು ಆರೋಪಿಸಿದರು.
ಈ ಸಂಬಂಧ ಕಾಂಗ್ರೆಸ್ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದ್ದರೂ, ಈವರೆಗೆ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ತಮ್ಮ ವಿರುದ್ದ ಬೇಕಾಬಿಟ್ಟಿ ಹೇಳಿಕೆ ನೀಡಿರುವ ಅನರ್ಹ ಶಾಸಕ ಬಿಸಿ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ತಾವಾಗಿಯೇ ಜೆಡಿಸ್ ಪಕ್ಷವನ್ನು ತೊರೆಯಲಿಲ್ಲ, ಬದಲಾಗಿ ತಮ್ಮನ್ನು ಜೆಡಿಸ್ ನಿಂದ ವಜಾಗೊಳಿಸಲಾಗಿತ್ತು. ಈ ವಾಸ್ತವ ಅಂಶಗಳನ್ನು ತಿಳಿಯದೆ ಪಾಟೀಲ್ ಬಾಯಿಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಸರ್ಕಾರ ವಿಷಯ ಕುರಿತು ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ನಡೆದಿರುವ ಬೆಳವಣಿಗೆ ಬಿಜೆಪಿ ನೀಡಿರುವ ಕಪಾಳಮೋಕ್ಷವಾಗಿದ್ದು, ಬಹುಮತ ಸಾಬೀತು ಪಡಿಸುವಷ್ಟು ಶಾಸಕರ ಸಂಖ್ಯೆ ತಮ್ಮ ಬಳಿ ಇಲ್ಲ ಎಂದು ಗೊತ್ತಿದ್ದರೂ, ಮುಖ್ಯಮಂತ್ರಿಯಾಗಿ ಫಡ್ನವೀಸ್ ಏಕೆ ಪ್ರಮಾಣ ವಚನ ಸ್ವೀಕರಿಸಬೇಕಿತ್ತು ಎಂದು ಪ್ರಶ್ನಿಸಿದರು, ಇದು ಸಂವಿಧಾನದ ಉಲ್ಲಂಘನೆ. ಪ್ರಜಾಪ್ರಭುತ್ವ ಅಪಮಾನ ಎಸಗುವ ಈ ಕೃತ್ಯದಲ್ಲಿ ಪ್ರಧಾನಿ ಮೋದಿ ಸಹ ಭಾಗಿಯಾಗಿದ್ದು, ಮಹಾರಾಷ್ಟ್ರ ಬಿಜೆಪಿ ಘಟಕ ನಡೆಸಿದ ಎಲ್ಲಾ ಕೃತ್ಯಗಳಲ್ಲಿ ಪ್ರಧಾನಿ ಮೋದಿ ಕೈವಾಡಇದೆ ಎಂದು ಆರೋಪಿಸಿದರು.