ಬೆಂಗಳೂರು, ಮೇ 22, ಆ ಘೋರ ದುರಂತಕ್ಕೆ ಇಂದಿಗೆ ಬರೋಬ್ಬರಿ ಹತ್ತು ವರ್ಷ. ಘಟನೆ ನಡೆದು ದಶಕಗಳೇ ಕಳೆದು ಹೋದರೂ ಆ ಕರಾಳ ದಿನ ಮಾತ್ರ ಮಂಗಳೂರಿಗರಲ್ಲಿ ಇನ್ನೂ ಮರೆಯಾಗಿಲ್ಲ. ತಮ್ಮವರನ್ನು ಕಳೆದುಕೊಂಡು ನೊಂದ ಜೀವಗಳ ಮನಸಿನಲ್ಲಿ ಆ ಹೃದಯವಿದ್ರಾವಕ ಘಟನೆ ಮಾತ್ರ ಇನ್ನೂ ಹಸಿರಾಗಿಯೇ ಇದೆ. ಅದು ದೇಶವೇ ಬೆಚ್ಚಿಬಿದ್ದ ದಿನ.
ಹೌದು, ಅಂದು 2010 ರ ಮೇ 22 ರ ಮುಂಜಾನೆ. ದುಬೈನಿಂದ ರಾತ್ರಿ 1.20 ಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಮಂಗಳೂರು ಬಂದಿಳಿದಾಗ ಬೆಳಿಗ್ಗೆ 6.15 ವಿಮಾನ ಇಳಿದು ರನ್ ವೇನಲ್ಲಿ ಚಲಿಸಿದಾಗ ಅದ್ಯಾವುದೋ ದೊಡ್ಡ ಗುಂಡಿಗೆ ಬಿದ್ದಂತಹ ಅನುಭವ. ಏನಾಯಿತು ಎಂದು ಅರಿಯುವ ಹೊತ್ತಿಗೆ ಕ್ಷಣಮಾತ್ರದಲ್ಲಿ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ. ವಿಮಾನದ ಮೇಲ್ಭಾಗದ ಬದಿ ಒಡೆಯಿತು. ಕುಳಿತಿದ್ದವರ ಸೀಟು ರಭಸದಲ್ಲಿ ಹರಿದುಹೋಯಿತು. ನೋಡು ನೋಡುತ್ತಿದ್ದಂತೆಯೇ ವಿಮಾನ ಎರಡು ತುಂಡಾಗಿತ್ತು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ರನ್‌ವೇ ದಾಟಿ ಮುಂದೆ ಚಲಿಸಿ, ಕಣಿವೆಗೆ ಬಿದ್ದು ಸ್ಫೋಟಗೊಂಡು 158 ಮಂದಿ ಮೃತಪಟ್ಟು, ಎಂಟು ಮಂದಿ ಪಾರಾಗಿದ್ದರು. ಮೃತರ ಪೈಕಿ 136 ಮೃತದೇಹಗಳನ್ನು ಸಂಬಂಧಿಕರು ಕೊಂಡೊಯ್ದಿದ್ದರೂ ಉಳಿದ ಶವಗಳು ಸುಟ್ಟು ಹೋಗಿ ಗುರುತೇ ಸಿಗದೇ, ಸಾಮೂಹಿಕ ಅಂತ್ಯ ಸಂಸ್ಕಾರವಾಗಿದ್ದವು.
ಗುರುತು ಪತ್ತೆಹಚ್ಚಿದ ದೇಹಗಳನ್ನು ಮರಣೋತ್ತರ ಪರೀಕ್ಷೆ ಕೊಠಡಿಗೆ ಸಾಗಿಸಲಾಗಿತ್ತು. ಎರಡು ದಿನಗಳಲ್ಲಿ 80 ಕ್ಕೂ ಹೆಚ್ಚು ಮೃತದೇಹಗಳನ್ನು ಸಾಗಿಸಲಾಗಿತ್ತು. ಉಳಿದವರದ್ದು ಒಂದು ಗೋಳಾದರೆ ಕಳೆದುಕೊಂಡವರಂದು ಮತ್ತೊಂದು ಗೋಳು. ಇಡೀ ರಾಜ್ಯವೇ ಕಣ್ಣೀರಿಟ್ಟ ದಿನವದು.ಘಟನೆ ನಡೆದು 10 ವರ್ಷಗಳ ನಂತರ ದುರಂತದಲ್ಲಿ ಮೃತಪಟ್ಟಿದ್ದ ಮಹೇಂದ್ರ ಕೋಡ್ಕಳ್ಳಿ ಎಂಬ ಪ್ರಯಾಣಿಕ ಕುಟುಂಬಕ್ಕೆ 2.68 ಕೋಟಿ ರೂ.ಪರಿಹಾರ ಮೊತ್ತಕ್ಕೆ ವಾರ್ಷಿಕ ಶೇಕಡಾ 9ರಷ್ಟು ಬಡ್ಡಿ ಸೇರಿಸಿ ಪಾವತಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು.
ಮಂಗಳೂರು ವಿಮಾನ ದುರಂತ ಸಂತ್ರಸ್ತರ ಸಂಘದ ಅಧ್ಯಕ್ಷ ಮಹ್ಮದ್ ಉಸ್ಮಾನ್ ಮಾತನಾಡಿ, ಅಪಘಾತದಲ್ಲಿ ಬದುಕಿ ಉಳಿದವರಿಗೆ ಒಂದೆರಡು ವರ್ಷಗಳಲ್ಲಿ ಪರಿಹಾರ ದೊರೆತಿದೆ ಹೀಗಾಗಿ ಇವರು ಈಗ ಸಂಘದೊಂದಿಗೆ ಇವರು ಯಾರೂ ಸಕ್ರಿಯರಾಗಿಲ್ಲ ಎಂದು ತಿಳಿಸಿದ್ದಾರೆ.ಮಂಗಳೂರಿನ ಹಲವೆಡೆ ಇಂದು ಮಡಿದವರಿಗಾಗಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಕುಳೂರು-ತಣ್ಣೀರುಬಾವಿ ರಸ್ತೆಯಲ್ಲಿರುವ ಸ್ಮಾರಕದಲ್ಲಿ ಮಡಿದವರ ಸಂಸ್ಮರಣಾ ದಿನಾಚರಣೆ ನಡೆಯಿತು.