ಆನ್ ಲೈನ್ ಶಿಕ್ಷಣ: ಕೇಂದ್ರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ತಾತ್ಕಾಲಿಕ ಆದೇಶ: ಸುರೇಶ್ ಕುಮಾರ್

ಚಿಕ್ಕಬಳ್ಳಾಪುರ, ಜೂ.29: ಆನ್  ಲೈನ್ ಶಿಕ್ಷಣ ಕುರಿತಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ತಾತ್ಕಾಲಿಕ ಆದೇಶ  ಹೊರಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ತಿಳಿಸಿದ್ದಾರೆ.ಚಿಕ್ಕಬಳ್ಳಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನ್‌ ಲೈನ್ ಶಿಕ್ಷಣದ ಬಗ್ಗೆ ರಾಜ್ಯ ಸರ್ಕಾರ ರಚಿಸಿರುವ ತಜ್ಞರ ಸಮಿತಿ ವರದಿ ಸಲ್ಲಿಸಿದ ಬಳಿಕ ಎಲ್ಲ  ವಯೋಮಾನದ ವಿದ್ಯಾರ್ಥಿಗಳ ಅವಶ್ಯಕತೆಗನುಗುಣವಾಗಿ ನಿರ್ದಿಷ್ಟ ರೂಪುರೇಷೆ‌, ಮಾರ್ಗದರ್ಶಿಸೂತ್ರಗಳನ್ನು ಸಿದ್ಧಪಡಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ಶಾಲಾರಂಭದ ಬಗ್ಗೆ‌ ಸರ್ಕಾರ‌  ಇನ್ನೂ ನಿರ್ಣಯ ಕೈಗೊಂಡಿಲ್ಲ. ಈ ಬಾರಿ ಯಾವುದೇ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡಬಾರದು. ಖಾಸಗಿ ಶಾಲೆಗಳ ಶುಲ್ಕ ವಸೂಲಿಗೆ ಕಡಿವಾಣ  ಹಾಕಲಾಗಿದೆ. ಕೊರೋನಾ ಸೋಂಕು ಇರುವುದರಿಂದ ಯಾವುದೇ ಕಾರಣಕ್ಕೂ ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಒಂದ ವೇಳೆ ಶುಲ್ಕ ಹೆಚ್ಚಳ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.ಈಗಾಗಲೇ ಹಲವು ಖಾಸಗಿ ಶಾಲೆಗಳು ಸರ್ಕಾರದ ಜೊತೆ ಸಹಕರಿಸಿವೆ. ಹೆಚ್ಚು ಶುಲ್ಕ ವಸೂಲಿ ಮಾಡಿದ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶ ಆಗಸ್ಟ್ ಮೊದಲ ವಾರದಲ್ಲಿ ಮತ್ತು ಪಿಯುಸಿ ಫಲಿತಾಂಶ ಜುಲೈ ಕೊನೆ ವಾರದಲ್ಲಿ ಪ್ರಕಟವಾಗಬಹುದು ಎಂದು ಸಚಿವರು ಮಾಹಿತಿ ನೀಡಿದರು.  ವಿದ್ಯಾರ್ಥಿಗಳ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸುವ ಉದ್ದೇಶದಿಂದ ಇಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ರಾಜ್ಯದ ಹಲವು ಕಡೆ ಭೇಟಿ‌ನೀಡಿ ಪರಿಶೀಲಿಸಿದ್ದೇನೆ. ಪರೀಕ್ಷೆಗೆ ಗೈರಾದವರ ಪತ್ತೆ ಹಾಗೂ ಅದಕ್ಕೆ ಕಾರಣಗಳನ್ನು ತಿಳಿಯಲಾಗುತ್ತಿದೆ ಎಂದು ಹೇಳಿದ ಅವರು, ಕೊರೋನಾ ಸೋಂಕು ಕುರಿತು ಭಯ ಪಡದಂತೆ ಪೋಷಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದರು.