ಬೆಂಗಳೂರು, ಜ 18, ರಾಜ್ಯ ಸರ್ಕಾರವು ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಸಂಸದ ತೇಜಸ್ವಿ ಸೂರ್ಯ ಅವರು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ನಿವಾಸದಲ್ಲಿಂದು ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸುವ ವಿಚಾರವಾಗಿ ಭೇಟಿಯಾದ ಅವರು, ಆದಷ್ಟು ಬೇಗ ಈ ಎರಡು ಸಂಘಟನೆಗಳಿಗೆ ನಿಷೇಧ ಹೇರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಸಂಸದ ತೇಜಸ್ವಿ ಸೂರ್ಯ ಅವರು ಮನವಿ ಮಾಡಿದರು.ಸಿಎಎ ಪರವಾಗಿ ಡಿ.22ರಂದು ನಗರದ ಟೌನ್ ಹಾಲ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇಂಡಿಯಾ ಫಾರ್ ಸಿಎಎ ಪ್ರತಿಭಟನೆಯಲ್ಲಿ ಕಾರ್ಯಕರ್ತ ವರುಣ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪದಡಿ ಎಸ್‌ಡಿಪಿಐ ಪಕ್ಷದ ಆರು ಕಾರ್ಯಕರ್ತರನ್ನು ನಿನ್ನೆ ಬೆಂಗಳೂರಿನ ಪೊಲೀಸರು ಬಂಧಿಸಿದ್ದರು.
ಬಂಧಿತರು ವಿಚಾರಣೆಯ ವೇಳೆ ಸಂಸದ ತೇಜಸ್ವಿ ಸೂರ್ಯ ಹಾಗೂ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯನ್ನು ಜೀವಾಹಾನಿ ಮಾಡಲು ಎಸ್‌ಡಿಪಿಐ ಕಾರ್ಯಕರ್ತರು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಹೀಗಾಗಿ ಎಸ್ ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವಂತೆ ಸಂಸದರು ಒತ್ತಾಯಿಸಿದ್ದಾರೆ. ಇನ್ನು, ಎಸ್ ಡಿಪಿಐ, ಪಿಎಫ್ಐ ಸಂಘಟನೆಗಳ ನಿಷೇಧ ಕುರಿತು ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಅನೇಕ ವರ್ಷಗಳಿಂದ ಈ ಬಗ್ಗೆ ಚಿಂತನೆ ನಡೆಯುತ್ತಿದ್ದು, ಈ ಬಗ್ಗೆ ಗೃಹ ಇಲಾಖೆ ಪರಿಶೀಲಿಸುತ್ತಿದೆ ಎಂದರು. ಕಾಂಗ್ರೆಸ್ ಪಕ್ಷ ಎಸ್ ಡಿಪಿಐ, ಪಿಎಫ್ಐ ಸಂಘಟನೆಗಳಿಗೆ ಬೆಂಬಲ ಸೂಚಿಸಿಲ್ಲ. ಆದರೆ,ಕಾಂಗ್ರೆಸ್ ಪಕ್ಷದ ಬಗ್ಗೆ ಬಿಜೆಪಿ ಅವರಿಗೆ ಮಾತನಾಡದಿದ್ದರೇ ನಿದ್ದೆ ಬರುವುದಿಲ್ಲ ಎಂದು ಅವರು ತಿರುಗೇಟು ನೀಡಿದರು.