ಟೀನೇಜ್ ಲವ್ ಸ್ಟೋರಿ ‘ಕಾಗದ’ ಸಿನಿಮಾ ಟ್ರೇಲರ್ ಬಿಡುಗಡೆ

ಟೀನೇಜ್ ಲವ್ ಸ್ಟೋರಿ ಒಳಗೊಂಡ ‘ಕಾಗದ’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಜುಲೈ 5ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಹಾಗಾಗಿ ಇತ್ತೀಚೆಗೆ ಚಿತ್ರದ ಟ್ರೇಲರ್‌ನ್ನು ಬಿಡುಗಡೆ ಮಾಡಲಾಗಿದ್ದು, ಜಾಲತಾಣದಲ್ಲಿ ಒಳ್ಳೆಯ ರೆಸ್ಪಾನ್ಸ್‌ ಗಿಟ್ಟಿಸಿಕೊಂಡಿದೆ. ಈ ಟ್ರೇಲರ್‌ನ್ನು ಬಿಜೆಪಿ ಮುಖಂಡ ರಾಘವೇಂದ್ರ ಶೆಟ್ಟಿ ಬಿಡುಗಡೆ ಮಾಡಿ, ‘ಟೈಟಲ್ ತುಂಬಾ ಚನ್ನಾಗಿದೆ. ನನ್ನ ಮಿತ್ರ ಅರುಣ್ ಕುಮಾರ್ ಒಳ್ಳೆಯ ಸಿನಿಮಾ ನಿರ್ಮಾಣ ಮಾಡಿದ್ದಾನೆ. ಇಂತಹ ಸಿನಿಮಾಗಳು ಸಮಾಜಕ್ಕೆ ಇಂದು ಬೇಕಾಗಿವೆ’ ಎಂದು ಹೇಳಿದರು. ಚಿತ್ರವನ್ನು ‘ಅಮ್ಮ ಸಿನಿ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದಾರೆ ಅರುಣ್ ಕುಮಾರ್‌. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕರು ‘ಈ ಮೊದಲು ನಾನು ‘ರಗಡ್' ಸಿನಿಮಾ ನಿರ್ಮಾಣ ಮಾಡಿದ್ದು, ಇದೀಗ ಗ್ಯಾಪ್ ನಂತರ ಮಗನಿಗಾಗಿ ಎರಡನೇ ಬಾರಿ ಚಿತ್ರ ನಿರ್ಮಾಣ ಮಾಡಿದ್ದೇನೆ. ನಾನೇ ಸ್ಟೋರಿ ಲೈನ್ ಮಾಡಿದ್ದು, ಈ ಲೈನ್ ಅನ್ನು ಸುಮಾರು 15 ಜನ ನಿರ್ದೇಶಕರಿಗೆ ಕೊಟ್ಟಿದ್ದೆ. ಅವರೆಲ್ಲಾ ಚಿತ್ರಕಥೆ ಮಾಡಿಕೊಂಡು ಬಂದಿದ್ದರು. ನನಗೆ ಅಷ್ಟಾಗಿ ಹಿಡಿಸಲಿಲ್ಲ. ಆಗ ಬಂದವರು ರಂಜಿತ್‌. ಇವರು ಹೇಳಿದಂತೆ ಒಂದೇ ವಾರದಲ್ಲಿ ಡೈಲಾಗ್ ಸಮೇತ ಸ್ಟೋರಿ ಮಾಡಿಕೊಂಡು ಬಂದರು. ಈ ಚಿತ್ರವನ್ನು ನಾವು 2022ರಲ್ಲಿ ಶುರು ಮಾಡಿದ್ದು, ಈಗ ರೀಲೀಸ್‌ಗೆ ಸಿದ್ದವಾಗಿದೆ. ಸುಮಾರು ವರ್ಷಗಳಿಂದ ಹಿಂದು-ಮುಸ್ಲಿಮ್ ಕಥೆಯ ಸಿನಿಮಾ ಮಾಡುವ ಆಸೆ ಇತ್ತು. ಈಗ ಇಡೇರಿದೆ. ಇದೊಂದು ಅಪ್ಪಟ ಪ್ಯೂವರ್ ಲವ್ ಸ್ಟೋರಿ ಸಿನಿಮಾ. ಜೊತೆಗೆ ಇದು ಎರಡು ಊರುಗಳ, ಎರಡು ಧರ್ಮಗಳ ನಡುವೆ ನಡೆವ ಕಥೆ ಆಗಿರುತ್ತದೆ. ಇದೇ ಜುಲೈ 5ರಂದು ಚಿತ್ರವನ್ನು 60 ರಿಂದ 70 ಥಿಯೇಟರ್‌ಗಳಲ್ಲಿ ರೀಲೀಸ್ ಮಾಡುವ ಪ್ಲ್ಯಾನ್ ಇದೆ’ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ರಂಜಿತ್ ‘ನಾನು ಈ ಮೊದಲು ‘ಆಪಲ್ ಕೇಕ್‌’ ಎಂಬ ಸಿನಿಮಾ ಮಾಡಿದ್ದು, ಇದು ನನ್ನ ಎರಡನೇ ಪ್ರಯತ್ನ. ನಿರ್ಮಾಪಕರು ಒಂದು ಲೈನ್ ಕಥೆ ಇಟ್ಟುಕೊಂಡಿದ್ದರು. ಅದನ್ನು ಕಥೆ ಮಾಡಿಕೊಂಡು ಸಿನಿಮಾ ಮಾಡಲಾಗಿದೆ. ಇದು 2005ರ ಕಾಲಘಟ್ಟದಲ್ಲಿ ನಡೆವ ಕಥೆ ಆಗಿದ್ದು, ಆಗಿನ್ನು ಹುಡುಗರ ಕೈಗೆ ಮೊಬೈಲ್ ಬಂದಿರಲಿಲ್ಲ. ಮೆಸೇಜ್ ಪಾಸ್ ಮಾಡಬೇಕಾದರೆ, ‘ಕಾಗದ’ದ ಮೊರೆ ಹೋಗುತ್ತಿದ್ದರು. ಹಾಗಾಗಿ ಚಿತ್ರಕ್ಕೆ ‘ಕಾಗದ’ ಎಂದು ಹೆಸರು ಇಡಲಾಗಿದೆ. ಇದು ಪಿಯು ಹುಡುಗ-ಹುಡುಗಿಯ ಅಂತರ ಧರ್ಮೀಯ ಟೀನೇಜ್ ಲವ್ ಸ್ಟೋರಿ ಸಿನಿಮಾ’ ಎನ್ನುವರು. ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಪ್ರದೀಪ್ ವರ್ಮ ಮಾತನಾಡಿ ‘ಇಷ್ಟಪಟ್ಟು ಕೆಲಸ ಮಾಡಿರುವ ಚಿತ್ರ. ಶೂಟಿಂಗ್ ಆದಮೇಲೆ ಸಾಂಗ್ ಮಾಡಲಾಗಿದ್ದು, ಇಡೀ ಸಿನಿಮಾ ನೋಡಿ ಸಾಂಗ್ ಮಾಡಲಾಗಿದೆ. ಚಿತ್ರದಲ್ಲಿ ಮೂರು ಗೀತೆಗಳು ಇವೆ. ನಿರ್ದೇಶಕರ ತಂಡ ಅದ್ಭುತವಾಗಿ ಕೆಲಸ ಮಾಡಿದೆ. ಹೀರೋ ನಿರ್ಮಾಪಕರ ಮಗ ಆದರೂ ಎಲ್ಲಿಯೂ ಹೊಸಬ ಅನಿಸಲ್ಲ. ಕಥೆಯಲ್ಲಿ ಒಳ್ಳೆಯ ಮೆಸೇಜ್ ಇದ್ದು, ಇಂದು ಸಮಾಜದಲ್ಲಿ ನಡಿತಾ ಇರುವ ಸನ್ನಿವೇಶ ತೋರಿಸಲಾಗಿದೆ. ಇದರಲ್ಲಿ ಸಂಗೀತಕ್ಕೆ ಒಳ್ಳೆಯ ಅವಕಾಶವಿತ್ತು’ ಎನ್ನುವರು. 

ಇನ್ನು ಚಿತ್ರದ ನಾಯಕ ಆದಿತ್ಯ ಮಾತನಾಡಿ ‘ಇದು ನನ್ನ ಮೊದಲ ಸಿನಿಮಾ. ನಮ್ಮ ಮನೆಯ ಕೆಳಗಡೆ ನಟನಾ ಸ್ಕೂಲ್ ಇತ್ತು. ಹಾಗಾಗಿ ಚಿಕ್ಕ ವಯಸ್ಸಿನಿಂದ ನಟನೆಯಲ್ಲಿ ಆಸಕ್ತಿ ಜಾಸ್ತಿ ಆಯ್ತು. ಡ್ರಾಮಾ ಮಾಡಿ ಅನುಭವ ಇದೆ. ಇದರಲ್ಲಿ ಕಥೆಯೇ ಹೀರೋ. ನನ್ನ ನಟನಾಗುವ ಆಸೆಯನ್ನು ತಂದೆ ಇಡೇರಿಸಿದ್ದಾರೆ’ ಎಂದು ಹೇಳಿದರು. ಅಂದಂಗೆ ಬಾಲ ನಟಿಯಾಗಿ ಹೆಸರು ಮಾಡಿರುವ ಅಂಕಿತಾ ಜಯರಾಂ ಈ ಚಿತ್ರದ ಮುಖೇನ ನಾಯಕಿಯಾಗಿ ಪಾದಾರೆ​‍್ಣ ಮಾಡಿದ್ದಾರೆ. ಇವರಿಲ್ಲಿ ಆಯೇಶಾ ಎಂಬ ಮುಸ್ಲಿಂ ಹುಡುಗಿ ಪಾತ್ರ ನಿರ್ವಯಿಸಿದ್ದಾರೆ. ಸಹ ಕಲಾವಿದರಾಗಿ ನಟಿಸಿರುವ ಶಿವು ಮಂಜು ಅವರಿಗೆ ಇದು 100ನೇ ಸಿನಿಮಾ. ಉಳಿದ ತಾರಾಗಣದಲ್ಲಿ ಗೌತಮ್, ನೇಹಾ ಪಾಟೀಲ್ ಮುಂತಾದವರು ಇದ್ದಾರೆ. ಚಿತ್ರಕ್ಕೆ ವಿನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣವಿದೆ.