ರಾಣೇಬೆನ್ನೂರು-ಜು.21: ತಂತ್ರಜ್ಞಾನವು ಅತ್ಯಂತ ಪ್ರಭಾವಶಾಲಿಯಾಗಿ ಬೆಳವಣಿಗೆ ಕಂಡಿದೆ. ಅದರ ಬಳಕೆ ಮಿತಿಮೀರಿದೆ. ಇದರ ಪರಿಣಾಮ ಮಕ್ಕಳಲ್ಲಿ ನೈತಿಕತೆ, ಭೌತಿಕತೆ ಮತ್ತು ಸಂಸ್ಕೃತಿ-ಸಂಸ್ಕಾರ ಮರೆಯಾಗುತ್ತಲಿದೆ. ತಂತ್ರಜ್ಞಾನದ ಬಳಕೆ ಅಗತ್ಯಕ್ಕಷ್ಟೇ ಸೀಮಿತವಾಗಿರಬೇಕು ಎಂದು ಮಾತಾ ಪಬ್ಲಿಕ್ ಶಾಲಾ ಉಪಾಧ್ಯಕ್ಷ ಕೆ.ಎಫ್.ಆನ್ವೇರಿ ಹೇಳಿದರು.
ಅವರು ಇಲ್ಲಿನ ಹಲಗೇರಿ ರಸ್ತೆ ಚೋಳಮರಡೇಶ್ವರ ನಗರದ ಮಾತಾ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ, ಮೊಬೈಲ್ ಹಾಗೂ ದೂರದರ್ಶನ ಬಳಕೆ ಕುರಿತು ನಡೆದ ವಿಚಾರ ಸಂಕೀರ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಧ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯ ನಡೆಯುವ ಪಾಠ-ಪ್ರವಚನಗಳಿಗೆ ಮಾತ್ರ ಸೀಮಿತವಾಗದೇ, ಸಮಾಜದ ಎಲ್ಲ ವಿಷಯ ಮತ್ತು ವಿಚಾರಗಳನ್ನು ಅರಿತುಕೊಂಡು ಭವಿಷ್ಯದಲ್ಲಿ ಜ್ಞಾನವಂತರಾಗಲು ಇಂತಹ ವೈಚಾರಿಕ ಚಿಂತನೆಯನ್ನು ಮೂಡಿಸುವ ವಿಚಾರ ಸಂಕೀರ್ಣಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರ ಮೂಲಕ ಜ್ಞಾನಾರ್ಜನೆ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದು ಕರೆನೀಡಿದರು.
ವಿಚಾರ ಸಂಕೀರ್ಣದಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕ ಚನಬಸಪ್ಪ ಎಸ್., ಶಿಕ್ಷಕಿಯರಾದ ಶಿಲ್ಪಾ ಬಿ ಕೆ ,ಶ್ಯಾಮಿಲಿ ಎಸ್ ಕೆ , ಉಷಾ ಎನ್ . ರೇಖಾ, ಸುಮಾ,ಸೌಮ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.