ತಂತ್ರಜ್ಞಾನ ಬೆಳೆಯಿತು; ಭೂಮಿ ಚಿಕ್ಕದಾಯಿತು

ವಿಜ್ಞಾನ ತಂತ್ರಜ್ಞಾನವು ಈಗ ಬಹಳ ಮುಂದುವರೆದಿದೆ. ಈ ವಿಜ್ಞಾನಕ್ಕೆ ಸೀಮೆಯೇ ಇಲ್ಲ. ಇನ್ನು ಅದರ ಮೂಲಕ ಹುಟ್ಟಿಕೊಳ್ಳುವ ತಂತ್ರಜ್ಞಾನಕ್ಕೆ ಕೊನೆಯೂ ಇಲ್ಲ. ನಮ್ಮ ಜೀವನ ಸುಗಮಗೊಳಿಸಲು ಹೊಸಹೊಸತು ಹುಟ್ಟಿಕೊಳ್ಳುತ್ತಿದೆ. ಮನುಷ್ಯನಿಗೆ ಆಗುವ ಲಾಭಕ್ಕಿಂತ ಪ್ರಕೃತಿಗೆ ಆಗುವ ಹಾನಿ ದೊಡ್ಡದು ಅನ್ನಿಸುವುದೇ ಇಲ್ಲ. ಹಾಗಾಗಿ ನಾವು ಹೊಸತನ್ನು ಬಹು ಬೇಗನೆ ಒಪ್ಪಿಕೊಳ್ಳುತ್ತ ಅಪ್ಪಿಕೊಳ್ಳುತ್ತ ಹೊರಟಿದ್ದೇವೆ. ಪ್ರತಿಯೊಂದಕ್ಕೂ ಇವತ್ತಿನ ದಿನದಲ್ಲಿ ನಾವು ತಂತ್ರಜ್ಞಾನ ಇಲ್ಲದೇ  ಮುಂದೆ ಹೋಗಲು ಸಾಧ್ಯವೇ ಇಲ್ಲ ಎನ್ನುವಂತೆ ಆಗಿ ಬಿಟ್ಟಿದೆ. ಬದುಕು ಎಷ್ಟು ಅನಿಶ್ಚಿತತೆಗೆ ನಿಂತಿದೆ ಅಂದರೆ ನಮ್ಮಿಂದ ಇಂಥದ್ದೊಂದು ಇಲ್ಲ ಎಂದರೆ ಬದುಕುವುದು ಹೇಗೆ? ಸಮಯ ಕಳೆಯುವುದು ಹೇಗೆ ಎನ್ನುವಷ್ಟರ ಮಟ್ಟಿಗೆ ನಾವು ತಂತ್ರಜ್ಞಾನದ ಆವಿಷ್ಕಾರಗಳಿಗೆ ದಾಸರಾಗಿದ್ದೇವೆ. 

ಹತ್ತುವರ್ಷದ ಇತ್ತಲಾಗೆ ಹುಟ್ಟಿದ ಮಗುವನ್ನು ಒಂದು ಅರ್ಧಗಂಟೆ ಮೊಂಬತ್ತಿಯ ಬೆಳಕಿನಲ್ಲೋ ಚಿಮಣಿಯ ಬೆಳಕಿನಲ್ಲೋ ಕೂರಿಸಲು ಪ್ರಯತ್ನಿಸಿ. ಆ ಅರ್ಧಗಂಟೆಯಲ್ಲಿ ಇನ್ವೆಟರ್, ಮೊಬೈಲ್ ಯಾವುದೂ ಹತ್ತಿರ ಇರಬಾರದು. ಕೇವಲ ಪುಟ್ಟ ದೀಪ ಮಾತ್ರ ಅವರಿಗೆ ಕಾಣುತ್ತಿರಲಿ. ಅವರು ಎಷ್ಟು ಒದ್ದಾಡುತ್ತಾರೆ ಎನ್ನುವುದು ಅರ್ಥವಾಗುತ್ತದೆ. ಒಂದು ಹತ್ತು ನಿಮಿಷ ಆ ಚಿಮಣಿ ದೀಪ ಅವರನ್ನು ತಕ್ಕ ಮಟ್ಟಿಗೆ ಆಕರ್ಷಿಸಬಹುದು. ನೀವು ಚಿಮಣಿ ದೀಪದ ಜೊತೆ ನಿಮ್ಮ ಬಾಲ್ಯವನ್ನು ಹೇಳಿದರೆ ಆ ಕಥೆ ಕೇಳುತ್ತ ಮತ್ತೆ ಹತ್ತು ನಿಮಿಷ ಕಳೆಯಬಹುದು. ಆ ನಂತರ ಅವರ ಪ್ರಶ್ನೆ ಆರಂಭ ಆಗಿಯೇ ಬಿಡುತ್ತದೆ. ಯಾಕೆ ಕರೆಂಟ್ ಹೋಯ್ತು? ಎಷ್ಟೋತ್ತಿಗೆ ಬರುತ್ತದೆ? ಇನ್ವೇಟರ್ ಸರಿ ಮಾಡಿಸಬೇಕಿತ್ತು ನೀನು. ಅಬ್ಬಾ ನೀವೆಲ್ಲ ಕರೆಂಟೆ ಇಲ್ಲದೇ ಇರ್ತಿದ್ರಾ! ಈ ಕುರುಡು ಚಿಮಣಿ ಬೆಳಕಲ್ಲಿ ಓದುತ್ತಿದ್ರಾ? ನನ್ನಿಂದ ಸಾಧ್ಯ ಇಲ್ಲಪ. ಮೊಬೈಲ್ ಕೊಡು ಟಾರ್ಚ್‌ ಬಿಡುತ್ತೇನೆ. ಹೀಗೆ ನೂರಾರು ಪ್ರಶ್ನೆ ಕೇಳಿ ನಂತರ  ಈ ಕರೆಂಟು ಯಾವಾಗ ಬರುತ್ತೋ, ಬೇಜಾರು ಬಂತು ಅನ್ನುತ್ತಾರೆ. ಮತ್ತೆ ಐದು ನಿಮಿಷ ಕಳೆದರೆ ಅವರ ಕಣ್ಣಲ್ಲಿ ಹತಾಷೆ ಕಾಣಲಾರಂಭಿಸುತ್ತದೆ. ವಿದ್ಯುತ್ ಬೆಳಕಿಲ್ಲದೇ ತಮ್ಮಿಂದ ಇರಲು ಸಾಧ್ಯವೇ ಇಲ್ಲ ಎನ್ನುವಂತೆ ಆಡುತ್ತಾರೆ.  

ಊರಿಗೊಂದು ಟಿವಿ, ಆ ಟಿವಿಯಲ್ಲಿ ಬಾನುವಾರ ಮಾತ್ರ ಬರುವ ಚಲನಚಿತ್ರ. ಆ ಚಲನ ಚಿತ್ರ ನೋಡಲು ಇಡೀ ಊರೆ ಒಟ್ಟಾಗಿ ಆ ಮನೆಯ ಟಿವಿಯ ಎದುರು ಕಾದು ಕುಳಿತುಕೊಳ್ಳುವುದು. ಕರೆಂಟು ಹೋಗದಿರಲಿ ಎಂದು ದೇವರಿಗೆ ಹರಕೆ ಹೊತ್ತುಕೊಳ್ಳುವುದು. ಕರೆಂಟು ಹೋಗಿಯೇ ಬಿಟ್ಟರೆ ಒಂದಷ್ಟು ಶಾಪಗಳು ಹಾಕುವುದು. ಒಂದು ಇಡೀ ಸಿನೆಮಾ ನೋಡಿದರೆ ಜಗತ್ತನ್ನೇ ಗೆದ್ದಷ್ಟು ಸಂಭ್ರಮಿಸುವುದು. ಬಾನುವಾರ ನೋಡಿದ ಆ ಒಂದು ಸಿನೆಮಾ ಒಂದು ವಾರದಕ್ಕೆ ಸಿಕ್ಕ ಆಹಾರದಂತೆ ಆಗಿರುತಿತ್ತು. ಈಗ ಕಾಲ ಬದಲಾಗಿದೆ. ಎರಡುವರೆ ಗಂಟೆ ಸಿನೆಮಾ ನೋಡಿ ಮುಗಿಸುವಷ್ಟರಲ್ಲಿ ಮತ್ತೊಂದು ನೋಡುವಷ್ಟು ಅವಕಾಶ. ಒಬ್ಬೊಬ್ಬರಿಗೆ ಒಂದೊಂದು ಟಿವಿ ಅಥವಾ ಮೊಬೈಲ್, ಲ್ಯಾಪ್‌ಟಾಪ್‌. ಎಷ್ಟು ಸಿನೆಮಾ ನೋಡಿದರೂ ಖಾಯಾಯಿತು ಎನ್ನುವುದಿಲ್ಲ. ಕರೆಂಟು ಹೋಗುತ್ತೆ ಎಂದು ಹರಕೆ ಹೋರುವುದಿಲ್ಲ. ಆದರೂ ಅಂದಿನ ಖುಷಿ ಮಾತ್ರ ಇಂದಿಲ್ಲ. ಜೊತೆಗೆ ಅಂದಿನಷ್ಟು ಆಸಕ್ತಿಯಿಂದ ಇಂದಿನ ದಿನದಲ್ಲಿ ಸಿನೆಮಾ ನೋಡಲು ಮನಸ್ಸು ಆಗುವುದಿಲ್ಲ. 

ಗುರ​‍್ರ‌ ಎನ್ನುವ ಸದ್ದು ಕೇಳಿದಾಗ ಕೂತಲ್ಲಿಂದ ಎದ್ದು ಬಂದು ಕಿಟಕಿಯ ಸಂದಿಯಿಂದ ರಸ್ತೆಯ ಕಡೆ ಕಣ್ಣು ಹಾಯಿಸುವುದು. ನಮ್ಮೂರಿಗೆ ಕಾರು ಬಂತು ಎಂದು ಹಿಗ್ಗುವುದು. ಆ ಕಾರನ್ನು ದೂರದಿಂದಲೇ ನೋಡುವುದು. ಮುಟ್ಟಿದರೆ ಬಯ್ಯುತ್ತಾರೆ ಎನ್ನುವ ಭಯ. ಆದರೂ ದೊಡ್ಡವರ ಕಣ್ಣು ತಪ್ಪಿಸಿ ಕಾರಿನ ನಯವಾದ ಮೈ ಸವರಿಬಿಡುವುದು. ಮಾರನೇ ದಿನ ಸ್ನೇಹಿತರಲ್ಲಿ ನಾನು ನಿನ್ನೆ ಕಾರನ್ನು ಮುಟ್ಟಿದೆ ಎಂದು ಎದೆಯುಬ್ಬಿಸಿ ಹೇಳುವುದು. ಅವರು ಹೌದಾ ಎಂದು ಕಣ್ಣರಳಿಸಿ ಕೇಳಿದಾಗ ಆಗುವ ಪುಳಕ ಅಷ್ಟಿಷ್ಟಲ್ಲ. ಈಗ ಮನೆಗೆ ಒಂದು ಕಾರು ಎನ್ನುವ ಪಾಲಿಸಿಯೂ ಹೋಗಿ ಮನುಷ್ಯನಿಗೊಂದು ಕಾರು ಎನ್ನುಂತೆ ವಾಹನವು ಮನೆಯ ಅಂಗಳದಲ್ಲಿ ನಿಲ್ಲಿಸಿರುವುದು ಕಾಣುತ್ತೇವೆ. 

ಅಜ್ಜಿ ಮನೆಗೆ ಹೋಗಬೇಕು ಮಾವನಿಗೆ ಹುಟ್ಟಿದ ಪಾಪು ನೋಡಬೇಕು ಎಂದರೆ ಅದೊಂದು ಹಬ್ಬದ ಸಂಭ್ರಮ. ಮೂರುಮೂರು ದಿನದ ತಯಾರಿ ನಡೆಸಿ ಅಜ್ಜಿ ಮನೆಗೆ ತಲುಪಲು ಒಂದು ವಾರ ಬೇಕಿತ್ತು. ಬಸ್ಸು ಕೆಟ್ಟಿತೋ  ಅಲ್ಲಿಗೆ ಮತ್ತಷ್ಟು ದಿನ ತಡವಾಗುತಿತ್ತು. ಪುಟ್ಟ ಕಂದನ ನೋಡುವ ತವಕದ ಜೊತೆ ಅಜ್ಜಿಯ ಮನೆಗೆ ಹೋಗುತ್ತೇನೆ ಎನ್ನುವ ಸಡಗರದಲ್ಲಿ ಅಲ್ಲಿಗೆ ತಲುಪುತ್ತಿದ್ದೇವು. ಈಗ ಅಷ್ಟೆಲ್ಲ ತೊಂದರೆ ಪಡಬೇಕಿಲ್ಲ. ಕಾರು ಬೈಕಿನ ವ್ಯವಸ್ಥೆಯಲ್ಲಿ ತಾಸು ಎರಡು ತಾಸಿನಲ್ಲಿ ಹೋಗಿ ಬರಬಹುದು. ಅದಕ್ಕೂ ಮಿಗಿಲಾಗಿ ವಿಡಿಯೋ ಕಾಲ್ ಮಾಡಿದರೆ ಅಜ್ಜಿಯ ಮನೆಯವರೆಲ್ಲರನ್ನು ಮುಖ ನೋಡಿಕೊಂಡೆ ಮಾತನಾಡಿಸಬಹುದು. ಅಜ್ಜಿ ಮನೆಯ ತಿಂಡಿ ತಿನಿಸು ಸಿಗುತ್ತದೆಯೇ ಎಂದು ಪ್ರಶ್ನೆ ಕೇಳಿಬಿಟ್ಟಿರಿ. ಈಗೆಲ್ಲ ಆನ್‌ಲೈನ್ ಬುಕ್ ಮಾಡಿದರೆ ಅಜ್ಜಿಮನೆಯ ತಿಂಡಿಯನ್ನು ಅರ್ಧಗಂಟೆಯಲ್ಲಿ ತಲುಪಿಸುವ ವ್ಯವಸ್ಥೆ ಮಾಡಿಬಿಡುತ್ತಾರೆನೋ ಅಲ್ಲವೆ.. 

ಮೊನ್ನೆ ಮಗಳ ತಲೆಯಲ್ಲಿ ಹೇನುಗಳು ಆಗಿವೆಯೋ  ಎಂದು ನೋಡುತ್ತ ಕುಳಿತಿದ್ದೆ. ಅವಳಿಗೆ ತಲೆ ನೋಡಿಸಿಕೊಳ್ಳುವುದು ಅಲರ್ಜಿ. ಕತ್ತು ನೋಯುತ್ತೆ ಅಮ್ಮ ಅಂತ ಆಗಾಗ ಹೇಳಿದಾಗ ಸ್ವಲ್ಪ ಗದರಿ ಹೇನು ಆಗಿದ್ದರೆ ತಲೆಯಲ್ಲಿ ಗಜ್ಜಿ ಆಗುತ್ತೆ ಎರಡು ನಿಮಿಷ ಕುಳಿತುಕೊ ಮಾರಾಯ್ತಿ ಅಂದೆ. ಆಕೆ ಅಮ್ಮ ಎಲ್ಲದಕ್ಕೂ ಮಷಿನ್ ಬಂದಿದೆ. ಈ ತಲೆಯಲ್ಲಿ ಹೇನಾಗಿದ್ದನ್ನು ಹುಡುಕಿ ತೆಗೆಯುವ ಒಂದು ಮಷಿನ್ ಬರಬೇಕಿತ್ತು. ನಾನೇನಾದರೂ ವಿಜ್ಞಾನಿ ಆದರೆ ಪಸ್ಟ್‌ ಅದನ್ನೇ ಕಂಡು ಹಿಡಿತೇನೆ. ಮನುಷ್ಯರ ತಲೆಯಲ್ಲಿರುವ ಹೇನು, ಹಸುಗಳಿಗೆ ಎಮ್ಮೆಗಳಿಗೆ ಹತ್ತಿರುವ ಉಣುಗು ಇಂಥವ್ವೆಲ್ಲ ಎರಡು ನಿಮಿಷದಲ್ಲಿ ಕ್ಲೀನ್ ಮಾಡ್ಬೇಕು ಅಂತ ಮಷಿನು ಕಂಡು ಹಿಡಿತಿನಿ ಅಂದ್ಲು. ಅವಳು ಹಾಗಂದಾಗ ನಗು ಬಂದಿತಾದರೂ ಅವಳ ಮಾತು ತೆಗೆದು ಹಾಕುವಂತಿಲ್ಲ. ಎಂಥೆದ್ದದ್ದೋ ಸಂಶೋಧಿಸಿ ಯಂತ್ರವನ್ನು ಕಂಡುಹಿಡಿದಿದ್ದಾರೆ. ಮುಂದೊಂದು ದಿನ ಇದು ಹೇನು ತೆಗೆಯುವ ಮಷಿನ್ ಅಂತ ನಮ್ಮ ಕೈಗೆ ಒಂದು ಯಂತ್ರ ಬರಲೂ ಬಹುದು ಅಲ್ಲವೆ! 

ಈಗ ಎಲ್ಲವೂ ಬದಲಾಗಿದೆ. ಕಸಗಳನ್ನು ತನ್ನ ಹೊಟ್ಟೆ ಒಳಗೆ ತುಂಬಿಕೊಳ್ಳುತ್ತ ಸಾಗುವ ವ್ಯಾಕ್ಯೂಮ್ ಕ್ಲೀನರ್, ಎರಡೇ ನಿಮಿಷದಲ್ಲಿ ನುಣುಪಾಗಿಸುವ ಮಿಕ್ಸರ್, ಜಗತ್ತೆ ನಾನು ಎಂದು ಬೀಗುವ ಮೊಬೈಲ್, ಕಳೆಗಳನ್ನು ಪರಪರನೇ ತೆಗೆದು ಹಾಕುವ ರೀಡರ್, ಶಾಯಿಯೇ ಇಲ್ಲದೇ ಅಕ್ಷರವನ್ನು ಮೂಡಿಸಲು ಸಾಧ್ಯವಾಗುವ ಕಂಪ್ಯೂಟರ್ ಎಲ್ಲವೂ ನಮ್ಮ ಕಣ್ಣ ಮುಂದೆ ಇದೆ. ಮುಂದೆ ಇನ್ನೂ ಏನೇನು ಬರುವುದಿದೆಯೋ ಗೊತ್ತಿಲ್ಲ. ಆದರೆ ತಂತ್ರಜ್ಞಾನ ಹೆಚ್ಚಿದಂತೆ ಭೂಮಿ ಸಣ್ಣದಾಗುತ್ತಿದೆ ಎನ್ನುವದು ಮಾತ್ರ ಸತ್ಯ. 

- * * * -