ಜಮ್ಮು, ಫೆ 13 : ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನ ವಿಧಿ 370 ರದ್ದುಪಡಿಸಿದ ನಂತರ ಅಲ್ಲಿನ ವಸ್ತುಸ್ಥಿತಿ ತಿಳಿಯಲು ಐರೋಪ್ಯ ಒಕ್ಕೂಟ ಹಾಗೂ ಕೊಲ್ಲಿ ರಾಷ್ಟ್ರಗಳ ವಿಶೇಷ ಪ್ರತಿನಿಧಿಗಳ ತಂಡ ಬುಧವಾರ ಶ್ರೀನಗರಕ್ಕೆ ಭೇಟಿ ನೀಡಿತು.
ಜರ್ಮನಿ, ಕೆನಡಾ, ಫ್ರಾನ್ಸ್, ನ್ಯೂಜಿಲೆಂಡ್ , ಮೆಕ್ಸಿಕೋ, ಇಟಲಿ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಉಜ್ಬೇಕಿಸ್ತಾನ, ಪೋಲೆಂಡ್ ಹಾಗೂ ಐರೋಪ್ಯ ಒಕ್ಕೂಟದ ರಾಯಭಾರಿಗಳು ನಿಯೋಗದಲ್ಲಿದ್ದಾರೆ.
ಶ್ರೀನಗರದಲ್ಲಿರುವ ಕೈಗಾರಿಕೋದ್ಯಮಿಗಳು ಹಾಗೂ ವರ್ತಕರ ಪ್ರತಿನಿಧಿಗಳನ್ನೊಳಗೊಂಡ ಗುಂಪುಗಳೊಂದಿಗೆ ನಿಯೋಗ ಸಂವಾದ ನಡೆಸಿದೆ.
ಬುಧವಾರವೇ ಉತ್ತರ ಕಾಶ್ಮೀರದ ಬಾರಾಮುಲ್ಲಾ ನಗರಕ್ಕೆ ನಿಯೋಗ ಭೇಟಿ ನೀಡುವ ಉದ್ದೇಶ ಹೊಂದಿತ್ತಾದರೂ ಪ್ರತಿಕೂಲ ಹವಾಮಾನದಿಂದ ಈ ಕಾರ್ಯಕ್ರಮ ರದ್ದಾಗಿದೆ. ನಿಯೋಗ
ಗುರುವಾರ ಜಮ್ಮುವಿಗೆ ಭೇಟಿ ನೀಡಿ ಲೆಫ್ಟಿನೆಂಟ್ ಗವರ್ನರ್ ಗಿರೀಶ್‌ಚಂದ್ರ ಮುರ್ಮು ಹಾಗೂ ಉನ್ನತಾಧಿಕಾರಿಗಳನ್ನು ಭೇಟಿ ಮಾಡಲಿದೆ. ಈ ಹಿಂದೆ ಜಮ್ಮುವಿನಲ್ಲಿ ಪರಿಸ್ಥಿತಿ ಪರಾಮರ್ಶೆಗೆ ಭಾರತದ ಅಮೆರಿಕ ರಾಯಭಾರಿ ಕೆನ್ನೆತ್ ಜಸ್ಟರ್ ಸೇರಿದಂತೆ 15 ರಾಯಭಾರಿಗಳ ತಂಡ ಜನವರಿ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನ ಭೇಟಿ ನೀಡಿತ್ತು.