ನ್ಯೂಜಿಲೆಂಡ್ ಗೆ ಹಾರಿದ ವಿರಾಟ್ ನಾಯಕತ್ವದ ಟೀಮ್ ಇಂಡಿಯಾ

ಬೆಂಗಳೂರು, ಜ 21:       ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದು ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಐದು ಪಂದ್ಯಗಳ ಟಿ-20, ಮೂರು ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಗಳನ್ನು ಆಡಲು ನ್ಯೂಜಿಲೆಂಡ್ ಗೆ ಪ್ರವಾಸ ಮಾಡಿದೆ.

ಕಳೆದ ಬಾರಿ ಪ್ರವಾಸದಲ್ಲಿ 4-1 ಅಂತರದಲ್ಲಿ ಏಕದಿನ ಸರಣಿ ಗೆದ್ದಿದ್ದ ಭಾರತ, ನಂತರ, 1-2 ಅಂತರದಲ್ಲಿ ಟಿ-20 ಸರಣಿಯಲ್ಲಿ ಕಿವೀಸ್ ವಿರುದ್ಧ ಸೋಲು ಅನುಭವಿಸಿತ್ತು. ಕಳೆದ ವರ್ಷ ಜುಲೈ .14 ರಂದು ಮುಕ್ತಾಯವಾಗಿದ್ದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತ ತಂಡ ಕೇವಲ 18 ರನ್ ಗಳಿಂದ ಕಿವೀಸ್ ವಿರುದ್ಧ ಸೋತು ಆಘಾತ ಅನುಭವಿಸಿತ್ತು.

2020ರ ವರ್ಷದಲ್ಲಿ ಟೀಮ್ ಇಂಡಿಯಾದ ಮೊದಲ ಪ್ರವಾಸ ಇದಾಗಿದೆ.
 ಸೋಮವಾರ ರಾತ್ರಿಯೇ ತಂಡ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಿತ್ತು. ಗೆಲುವಿನೊಂದಿಗೆ ದ್ವೀಪ ರಾಷ್ಟ್ರಕ್ಕೆ ಪ್ರಯಾಣ ಆರಂಭಿಸುವುದು ತಂಡಕ್ಕೆ ಅಗತ್ಯವಿತ್ತು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

“ಒಂದು ವೇಳೆ ಸೋಲಿನೊಂದಿಗೆ ಪ್ರವಾಸ ಆರಂಭಿಸಿದ್ದರೆ ನಮಗೆ ಎಲ್ಲೋ ಒಂದು ಕಡೆ ನಿರಾಸೆ, ಜಟಿಲತೆ ಕಾಡುತ್ತಿತ್ತು. ಆದರೆ, ಅಧಿಕ ಒತ್ತಡದ ನಡುವೆಯೂ  ಕಳೆದ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವು ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧದ ಸವಾಲಿಗೆ ಹೆಚ್ಚು ವಿಶ್ವಾಸ ತಂದುಕೊಟ್ಟಿದೆ,” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

“ಕಳೆದ ಬಾರಿ ನಾವು ನ್ಯೂಜಿಲೆಂಡ್ ವಿರುದ್ಧ ಅವರದೇ ನೆಲದಲ್ಲಿ ಏಕದಿನ ಸರಣಿ ಗೆಲುವು ಸಾಧಿಸಿದ್ದೆವು. ಅಂದಿನ ಜಯ ಇದೀಗ ತಂಡಕ್ಕೆ ಸಾಕಷ್ಟು ವಿಶ್ವಾಸ ತಂದುಕೊಟ್ಟಿದೆ. ಕೊನೆಯ ಪ್ರವಾಸದಲ್ಲಿ ಹೇಗೆ ಆಡಿದ್ದೇವೆ ಎಂಬುದು ನಮಗೆ ಧನಾತ್ಮಕತೆ ತಂದಿದೆ. ಈ ಬಾರಿ ಏನು ಮಾಡಬೇಕು ಎಂಬ ಬಗ್ಗೆಯೂ ನಮಗೆ ಸ್ಪಷ್ಟತೆಯಿದೆ,” ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘’ವಿದೇಶಿ ನೆಲದಲ್ಲಿ ಆತಿಥೇಯರಿಗೆ ಒತ್ತಡ ಹಾಕುವ ಸಮರ್ಥರಾಗಬೇಕು. ಆ ಮೂಲಕ ಕ್ರಿಕೆಟ್ ಆಟವನ್ನು ಸವಿಯಬೇಕು. ತವರು ನೆಲದಲ್ಲಿ ಗೆದ್ದಾಗ ಅದೊಂದು ಬಗೆಯ ಭಾವನೆ ಇರುತ್ತದೆ. ನಿಮ್ಮ ಎ ಆಟವನ್ನು ಹೊರ ತಂದಾಗ ಖಂಡಿತ ಎದುರಾಳಿಗಳ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತದೆ,” ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.