ಸರಕಾರದ ಸೌಲಭ್ಯಗಳಿಗೆ ಪ್ರತಿಯಾಗಿ ಶಿಕ್ಷಕರು ಪ್ರತಿವರ್ಷ ಫಲಿತಾಂಶ ವೃದ್ಧಿಗೆ ಶ್ರಮಿಸಬೇಕು

ಲೋಕದರ್ಶನ ವರದಿ

ರಾಮದುರ್ಗ 06: ಸರಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದರೂ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಮಾತ್ರ ಪ್ರತಿವರ್ಷ ಏರಿಕೆಯಾಗುತ್ತಿಲ್ಲ. ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ನಿರಂತರ ಪರಿಶ್ರಮ ವಹಿಸಿ ಅಧ್ಯಯನ ಮಾಡಬೇಕು. ಶಿಕ್ಷಕರು ವರ್ಷದಿಂದ ವರ್ಷಕ್ಕೆ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ತಾಲೂಕಿನ ಮುದಕವಿ, ಖಾನಪೇಠ, ತೋರಣಗಟ್ಟಿ ಸೇರಿದಂತೆ ವಿವಿಧೆಡೆ ಶನಿವಾರ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು.

ಶಿಕ್ಷಣದ ಪ್ರಗತಿಯಿಂದ ಮಾತ್ರ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವೆಂದು ಅರಿತ ಸರಕಾರ ಶಿಕ್ಷಣದ ವೃದ್ಧಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಸೌಲಭ್ಯಗಳಿಗೆ ಪ್ರತಿಯಾಗಿ ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ, ಪ್ರಜ್ಞಾವಂತ, ಸುಶಿಕ್ಷಿತ ನಾಗರಿಕರನ್ನು ತಯಾರಿಸುವ ಹಿರಿದಾದ ಜವಾಬ್ಧಾರಿ ಇದ್ದು, ಅದನ್ನರಿತು ಶಿಕ್ಷಕರು ಬದಲಾಗುತ್ತಿರುವ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಯಗಳ ಬಾಳಿಗೆ ಬೆಳಕಾಗಬಲ್ಲ ಶಿಕ್ಷಣ ನೀಡಬೇಕೆಂದರು.

ಹಿರಿಯ ನ್ಯಾಯವಾದಿ ಬಿ.ಎನ್. ದಳವಾಯಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಸ್. ಕಕರ್ಿ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸೇರಿದಂತೆ ಶಾಲಾ ಮುಖ್ಯೋಪಾಧ್ಯಾಯರು, ಸಿಬ್ಬಂದಿವರ್ಗ ಇದ್ದರು.